ಬುದ್ದಿವಂತ ಚಿತ್ರ ನೋಡದೆ ಇದ್ದರೂ ಚಿತ್ರಾನ್ನ ಹಾಡು ಮಾತ್ರ ಯಾರೂ ಮರೆಯಲ್ಲ. ಅಷ್ಟೇ ಅಲ್ಲ, ಏಕಾಏಕಿ ಚಿತ್ರಾನ್ನ ಹುಡುಗಿ ಸುಮನ್ ರಂಗನಾಥ್ ಪ್ರಚಾರ ಗಿಟ್ಟಿಸಿಕೊಂಡರು. ಸದ್ಯ ಗಾಂಧಿನಗರದ ನಿರ್ಮಾಪಕರು ಅವರವರ ಚಿತ್ರಗಳಿಗೆ ನಾಯಕಿಯರನ್ನು ಹುಡುಕಿದರೋ ಗೊತ್ತಿಲ್ಲ ಆದರೆ ಅದಕ್ಕೂ ಮೊದಲು ಸುಮನ್‌ಗೊಂದು ಪಾತ್ರ ಫಿಕ್ಸ್ ಮಾಡುತ್ತಿದ್ದಾರೆ.
ಹೀಗೆ ಇದೀಗ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ಸುಮನ್ ಅವರ ಕಾಲ್ ಶೀಟ್‌ನತ್ತಲೇ ಎಲ್ಲರ ಗಮನ. ಬುದ್ದಿವಂತ ಸಿನಿಮಾ ಈ ರೀತಿ ಹೆಸರು ತಂದುಕೊಡಬಹುದೆಂದು ಸ್ವತಃ ಅವರೇ ಎಣಿಸಿರಲಿಲ್ಲವಂತೆ. ಈಗ ಕಲಾಕಾರ್ ಚಿತ್ರತಂಡದಲ್ಲಿ ಸುಮನ್ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ರಾಧಿಕಾ ಗಾಂಧಿ ಇದ್ದರೂ ಸುಮನ್ ಆ ಚಿತ್ರದಲ್ಲಿ ಸಿನಿಮಾ ತಾರೆಯ ಪಾತ್ರಧಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಹಿರಿಯ ಕಲಾವಿದ ಕೃಷ್ಣೇಗೌಡ ನಿರ್ಮಾಣದ ಅಂಜದಿರು ಚಿತ್ರಕ್ಕೆ ಸುಮನ್ ಆಯ್ಕೆಯಾಗಿದ್ದಾರೆ. ಉಷಾಕಿರಣ್ ಮೂವೀಸ್ ಅವರ ಸವಾರಿ ಚಿತ್ರದ ತಾರಾಬಳಗದಲ್ಲಿಯೂ ಸುಮನ್ ಹೆಸರಿದೆ.
ಒಟ್ಟಿನಲ್ಲಿ ಸುಮನ್ ಅದೃಷ್ಟ ಚೆನ್ನಾಗಿದೆ. ಚಿತ್ರಾನ್ನ ಬೆಡಗಿಯ ಮುಂದಿನ ಚಿತ್ರರಂಗದ ಬದುಕು ಹೇಗಾಗುತ್ತೋ ಕಾದು ನೋಡಬೇಕು.