ಪುನೀತ್ ರಾಜ್‌ಕುಮಾರ್ ಅವರ ಮುಂಬರುವ ಚಿತ್ರ ರಾಜ್ ದ ಶೋ ಮ್ಯಾನ್‌ನಲ್ಲಿ ಅವರು ತಂದೆ ದಿವಂಗತ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದ ಗತಕಾಲದ ನಾಯಕಿಯರೊಂದಿಗೆ ಒಂದು ವಿಶೇಷ ಡಾನ್ಸ್ ನಂಬರ್ ಅನ್ನು ಮಾಡಲಿದ್ದಾರೆ.
ಚಿತ್ರತಂಡಕ್ಕೆ ನಿಕಟವರ್ತಿ ಮೂಲವೊಂದರ ಪ್ರಕಾರ, ಪ್ರಸ್ತುತ ಎಂಪಿಯಾಗಿರುವ ನಟಿ ಜಯಪ್ರದ, ಪ್ರಸ್ತುತ ಕರ್ನಾಟಕ ಚಿತ್ರೋದ್ಯಮ ವಾಣಿಜ್ಯ ಸಮಿತಿಯ ಅಧ್ಯಕ್ಷೆಯಾಗಿರುವ ಜಯಮಾಲ, ಬಹುಭಾಷಿಕ ನಟಿ ಅಂಬಿಕಾ, ರೂಪಾ ದೇವಿ ಮತ್ತು ಭಾರತಿ ವಿಷ್ಣುವರ್ಧನ್ ಅವರು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಾಡನ್ನು ಜನವರಿ ನಾಲ್ಕರಂದು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸತತವಾಗಿ ಮೂರು ಹಿಟ್ ಚಿತ್ರಗಳನ್ನು ನೀಡಿರುವ 'ರಾಜ್..' ಚಿತ್ರದ ನಿರ್ದೇಶಕ ಪ್ರೇಮ್ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ. ಅವರು ಜಯಪ್ರದ ಅವರು ನೃತ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು ಆದರೆ ಇತರ ನಟಿಯರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದರು.
"ಈ ಹಾಡನ್ನು ಈಗಾಗಲೇ ಚಿತ್ರೀಕರಿಸಬೇಕಿತ್ತು. ಆದರೆ ಜಯಪ್ರದ ಮೇಡಮ್ ಉತ್ತರದ ರಾಜ್ಯಗಳಲ್ಲಿ ಸಮಾಜವಾದಿ ಪಕ್ಷದ ಚುನಾವಣ ಪ್ರಚಾರದಲ್ಲಿ ವ್ಯಸ್ತರಾಗಿದ್ದರಿಂದ ನಾವು ಹಾಡಿನ ಚಿತ್ರೀಕರಣವನ್ನು ಮುಂದೂಡಬೇಕಾಯಿತು" ಎಂದು ಪ್ರೇಮ್ ಹೇಳಿದ್ದಾರೆ.
ರಾಜ್ ಚಿತ್ರ ಕನ್ನಡದ ಅತಿದೊಡ್ಡ ಬಜೆಟ್ ಚಿತ್ರಗಳಲ್ಲೊಂದು ಎಂದು ಗುರುತಿಸಲಾಗುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಬೆಡಗಿ ನಿಶಾ ಕೊಠಾರಿ ಅವರು ನಾಯಕಿಯಾಗಿದ್ದಾರೆ.