ಸಿಕ್ಸರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಹೊಡೆದ ನಾಯಕ ಪ್ರಜ್ವಲ್ ದೇವರಾಜ್ ಗಾಂಧಿನಗರದಲ್ಲಿ ಭರವಸೆ ಮೂಡಿಸಿದರು. ಸಿಕ್ಸರ್ ಚಿತ್ರದ ನಂತರ ಇವರಿಗೆ ಅನೇಕ ಆಫರ್‌ಗಳು ಸಿಕ್ಕಿವೆ. ಆದರೆ ಆ ಚಿತ್ರಗಳಾವುದು ಇವರಿಗೆ ನಿರೀಕ್ಷಿತ ಯಶಸ್ಸು ತಂದು ಕೊಡಲಿಲ್ಲ.
ಸಾಧುಕೋಕಿಲ ನಿರ್ದೇಶನದಲ್ಲಿ ಇವರು ನಟಿಸಿದ ಗಂಗೆ ಬಾರೆ ತುಂಗೆ ಬಾರೆ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಚಿತ್ರ ಒಪ್ಪಿಕೊಳ್ಳುವ ಮುನ್ನ ಪ್ರಜ್ವಲ್‌ಗೆ ಈ ಚಿತ್ರದ ಬಗ್ಗೆ ತುಂಬಾ ಫೀಲ್ ಆಗಿತ್ತಂತೆ. ಚಿಕ್ಕ-ಚಿಕ್ಕ ಸನ್ನಿವೇಶಗಳಿಗೂ ಪ್ರಾಮುಖ್ಯತೆ ನೀಡುವ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಶೈಲಿಯ ಚಿತ್ರವಾಗಲಿದೆ ಎಂದೇ ಇವರು ಭಾವಿಸಿದ್ದರಂತೆ. ಆದರೆ ಚಿತ್ರ ಮಾತ್ರ ಗೆಲ್ಲಲಿಲ್ಲ.
ನಂತರ ಇವರು ನಟಿಸಿದ ಮೆರವಣಿಗೆ ಚಿತ್ರ ಕೂಡಾ ಹೇಳುವಂತಹ ಯಶಸ್ಸು ಕಾಣಲಿಲ್ಲ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರ ತೆರೆಕಂಡ ಮೊದಲ ವಾರದಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರಲಿಲ್ಲ. ನಂತರದ ದಿನಗಳಲ್ಲಿ ಉತ್ತಮ ಗಳಿಕೆ ಕಂಡು ಬಂತು. ಆದರೆ ಅಷ್ಟೊತ್ತಿಗೆ ಥಿಯೇಟರ್‌ನಿಂದ ಎತ್ತಂಗಡಿ ಮಾಡಿದರು.
ಈಗ ಪ್ರಜ್ವಲ್ ಗುಲಾಮ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರ 2009ರ ಮೊದಲ ದಿನ ಗುರುವಾರದಂದ ತೆರೆಕಾಣುತ್ತಿದೆ. ಇಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದ ಹುಡುಗನ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಕ್ವಾಟ್ರಸ್‌ನ ಮತ್ತೊಂದು ಮನೆಯಲ್ಲಿ ವಾಸಿಸುತ್ತಿರುವ ಹುಡುಗಿಯೊಬ್ಬಳನ್ನು ತುಂಬಾ ಪ್ರೀತಿಸುತ್ತಿರುತ್ತಾನೆ. ಆತನ ಪಾಲಿಗೆ ಆಕೆಯೇ ಎಲ್ಲವೂ. ಪರಿಸ್ಥಿತಿಯ ಒತ್ತಡಗಳು ಹೇಗೆ ಆತನನ್ನು ಬದಲಾಯಿಸುತ್ತದೆ ಎಂಬುದು ಈ ಚಿತ್ರದ ಕಥಾಹಂದರ. 2008 ವರ್ಷ ಪ್ರಜ್ವಲ್‌ಗೆ ಅಷ್ಟೊಂದು ಆಶಾದಾಯಕವಾಗಲಿಲ್ಲ. ಈಗ 2009 ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.