2008ಕ್ಕೆ ಗುಡ್ ಬೈ ಹೇಳಿ 2009 ನ್ನು ಸ್ವಾಗತಿಸುವ ದಿನ ಬಂದಿದೆ. ಹಿಂದಿನ ವರ್ಷದಲ್ಲಿ ನಡೆದ ಕಹಿ ಘಟನೆಗಳನ್ನು ಮೆಲುಕು ಹಾಕಿ ಹೊಸ ವರ್ಷವನ್ನು ವ್ಯರ್ಥ ಮಾಡುವ ಬದಲು ಈ ವರ್ಷದಲ್ಲಿ ಮಾಡಬೇಕಾದ ಅಂಶಗಳ ಬಗ್ಗೆ ಗಮನಹರಿಸಬೇಕು. ಇದೇ ಅಂಶದತ್ತ ಕನ್ನಡ ಚಿತ್ರರಂಗವೂ ಗಮನಹರಿಸಿದೆ.
2008 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾದರೂ ಆರ್ಥಿಕವಾಗಿ ಕನ್ನಡ ಚಿತ್ರರಂಗ ಈ ವರ್ಷ ತುಂಬಾ ನಷ್ಟ ಅನುಭವಿಸಿದೆ. ಒಂದು ಅಂದಾಜಿನ ಪ್ರಕಾರ ನಿರ್ಮಾಪಕರು ಒಟ್ಟು 200 ಕೋಟಿ ನಷ್ಟ ಅನುಭವಿಸಿದ್ದಾರೆ. ಆದರೆ ಇವೆಲ್ಲವನ್ನು ನೆನೆಯುವ ಬದಲು ಮುಂದಿನ ಹಾದಿಯತ್ತ ಸ್ವಷ್ಟ ಹೆಜ್ಜೆ ಇಡಲು ಚಿತ್ರರಂಗದ ಮಂದಿ ನಿರ್ಧರಿಸಿದ್ದಾರೆ.
ಉತ್ತಮವಾದ ಚಿತ್ರಕಥೆ ಹಾಗೂ ನಿರೂಪಣೆಯುಳ್ಳ ಚಿತ್ರಗಳು ಬರಬೇಕು. ನಿರ್ದೇಶಕರು ಕೂಡಾ ನಿರ್ಮಾಪಕರನ್ನು ನಂಬಿಸಿ ಮೋಸ ಮಾಡಬಾರದು. ಪ್ರತಿಭೆಗಳಿಗೆ ಮಣೆ ಹಾಕಬೇಕೆ ಹೊರತು ಸಂಬಂಧ-ಸ್ನೇಹಕ್ಕಲ್ಲ ಎಂದು ಚಿತ್ರ ಮಂಡಳಿ ಅಧ್ಯಕ್ಷೆ ಜಯಮಾಲ ಹೇಳಿದ್ದಾರೆ.
ಈ ವರ್ಷ ಹೆಚ್ಚಿನ ಚಿತ್ರಗಳು ಸೋತಿವೆ. ಗೆದ್ದ ಚಿತ್ರಗಳು ಕೆಲವೇ ಕೆಲವು. ಬುದ್ದಿವಂತ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ತಂದು ಕೊಟ್ಟ ಚಿತ್ರ. ಇದು 10 ಕೋಟಿ ರೂ. ಬಾಚಿಕೊಂಡಿದೆ.
ಮುಂದಿನ ವರ್ಷದಲ್ಲಿ ಅನೇಕ ಚಿತ್ರಗಳ ಬಗ್ಗೆ ನಿರೀಕ್ಷೆ ಇದೆ. ಅವುಗಳಲ್ಲಿ ಸರ್ಕಸ್, ರಾಜ್, ಬಾಸ್, ಅಂಬಾರಿ. ಹೊಸ ವರ್ಷ ಕನ್ನಡ ಚಿತ್ರರಂಗಕ್ಕೆ ಆಶಾದಾಯಕವಾಗಿರಲಿ.