ಉಪೇಂದ್ರ ಅಭಿನಯದ ಬುದ್ದಿವಂತ ಚಿತ್ರ ಹಿಟ್ ಆಗುತ್ತಿದ್ದಂತೆ ಮತ್ತೊಂದು ರಿಮೇಕ್ ಚಿತ್ರ ದುಬೈ ಬಾಬು ಬಿಡುಗಡೆಗೆ ಸಿದ್ಧವಾಗಿದೆ. ಅದ್ದೂರಿತನಕ್ಕೆ ಮತ್ತೊಂದು ಹೆಸರಾದ ಶೈಲೇಂದ್ರಬಾಬು ಚಿತ್ರದ ನಿರ್ಮಾಪಕರು. ಈ ಹಿಂದೆ ಇವರ ನಿರ್ಮಾಣದ ಕುಟುಂಬ ಹಾಗೂ ಗೌರಮ್ಮ ಚಿತ್ರಗಳು ಜಯಭೇರಿ ಬಾರಿಸಿತ್ತು.
ಪ್ರಸ್ತುತ ದುಬೈ ಬಾಬು ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಅಪಾರ ವೆಚ್ಚದಲ್ಲಿ ಮೂಡಿ ಬಂದಿರುವ ದುಬೈ ಬಾಬು ಚಿತ್ರವನ್ನು ದುಬಾರಿ ವೆಚ್ಚದ ಚಿತ್ರವೆಂದೇ ಕರೆಯಲಾಗುತ್ತಿದೆ. ಚಿತ್ರದಲ್ಲಿ ಉಪ್ಪಿಗೆ ನಿಖಿತಾ ಹಾಗೂ ಸಲೋನಿ ನಾಯಕಿಯರಾಗಿ ಸಾಥ್ ನೀಡಿದ್ದಾರೆ. ಹಲವು ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ನಟ ಕುಮಾರ್ ಗೋವಿಂದ್ ಈ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಪಾದರ್ಪಾಣೆ ಮಾಡಿದ್ದಾರೆ.
ವಿದೇಶದಲ್ಲಿ ಮಾತ್ರವಲ್ಲದೆ ಸ್ವದೇಶದ ಮುಂಬೈನಲ್ಲೂ ಬಹುತೇಕ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ನಾಗಣ್ಣ ಅವರ ಚಿತ್ರಕಥೆ, ಸಂಭಾಷಣೆಯಿದೆ. ಮುಂಬೈನ ಜವೇರಿ ಛಾಯಾಗ್ರಹಣವಿದ್ದು, ಮುಸ್ಸಂಜೆ ಮಾತು ವಿ.ಶ್ರೀಧರ್ ಸಂಗೀತ ನೀಡಿದ್ದಾರೆ. ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.