ಸಂಜಯ್ ನಿರ್ದೇಶನದ ಪರಿಚಯ ಚಿತ್ರ ಮುಕ್ತಾಯದ ಹಂತದಲ್ಲಿದೆ. ತರುಣ್ ಮತ್ತು ರೇಖಾ ಜೋಡಿಯ ಚಿತ್ರಕ್ಕೆ ರೀರೆಕಾರ್ಡಿಂಗ್ ಕೆಲಸಗಳು ನಡೆಯುತ್ತಿವೆ. ಚಿತ್ರಕ್ಕೆ ಅದ್ಧೂರಿ ಹಾಡೊಂದನ್ನು ಚಿತ್ರಿಸುವುದು ಬಾಕಿಯಿದ್ದು, ಜನವರಿ ಮೊದಲ ವಾರದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ.
ಚಿತ್ರ ಆಡಿಯೋ ಬಿಡುಗಡೆಯಂದೇ ಈ ಹಾಡನ್ನು ಚಿತ್ರಿಸಲು ಯೋಚಿಸುತ್ತಿದ್ದೇವೆ. ಬಾಲಿವುಡ್ ಹಾಗೂ ಕನ್ನಡದ ಗಾಯಕ-ಗಾಯಕಿಯರನ್ನು ಒಂದೇ ವೇದಿಕೆಯಲ್ಲಿ ಹಾಡಿಸಿ ಚಿತ್ರಿಸುತ್ತೇವೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ಪ್ರಯೋಗವಾಗಲಿದೆ ಎನ್ನುತ್ತಾರೆ ನಿರ್ದೇಶಕ ಸಂಜಯ್.
ಹುಡುಗಾಟ ಚಿತ್ರದ ಯಶಸ್ಸಿನೊಂದಿಗೆ ಸಂಜಯ್ ಆರಂಭಿಸಿದ ಚಿತ್ರ ಪರಿಚಯ. 2008ರಲ್ಲಿ ಸೆಟ್ಟೇರಿದ ಪ್ರಮುಖ ಚಿತ್ರಗಳಲ್ಲಿ ಇದೂ ಒಂದು. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ ಕೊನೆಯ ವಾರದಲ್ಲಿ ಚಿತ್ರ ಥಿಯೇಟರ್‌ಗೆ ಬರುತ್ತದೆ. ಪರಿಚಯದ ನಂತರ ಸಂಜಯ್ ಮತ್ತೊಂದು ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಅದು ಸಂಗೀತ ಹಾಗೂ ಸಾಹಸ ಪ್ರಧಾನವಾದ ಚಿತ್ರವಾಗಿರುತ್ತದೆ. ಇದರಲ್ಲಿ ವಿಜಯ್ ನಟಿಸುವ ಸಾಧ್ಯತೆಯಿದೆ.