ಅಂದು ನಿರ್ದೇಶಕ ಸಾಧು ಕೋಕಿಲ ಯಾಕೋ ಸ್ವಲ್ಪ ಭಾವುಕರಾಗಿದ್ದರು. ಕಾರಣ ಅವರ ಮೇಲಿರುವ ಎರಡು ಆರೋಪಗಳು. ಒಂದನೇಯದಾಗಿ ಅವರು ಬೇರೆ ಭಾಷೆಯ ರಾಗ ಕದಿಯುತ್ತಾರೆ ಹಾಗೂ ತಮಿಳಿನ ಕಾಮಿಡಿಯನ್ನೇ ಭಟ್ಟಿ ಇಳಿಸುತ್ತಾರೆ ಎಂಬ ಆರೋಪಗಳು ಅವರ ಮನದಾಳದ ಮಾತುಗಳಿಗೆ ಕಾರಣವಾಯಿತು.
ಇದನ್ನು ಸಾಧು ನಿರ್ದಾಕ್ಷಿಣ್ಯವಾಗಿ ಒಪ್ಪಿಕೊಳ್ಳುತ್ತಾರೆ. ಕನ್ನಡದವರನ್ನು ಕನ್ನಡದವರೇ ನಂಬುವುದಿಲ್ಲ ಎಂಬ ಕಾರಣವನ್ನು ಕೂಡಾ ಕೊಡುತ್ತಾರೆ. ನಮ್ಮವರಿಗೆ ತಮಿಳು, ತೆಲುಗು, ಹಿಂದಿಯವರನ್ನು ಸಾಕೋದು ಕಷ್ಟ. ಹಾಗಾಗಿ ಅವರು ನಮ್ಮ ಹತ್ತಿರ ಬರುತ್ತಾರೆ. ಇಳೆಯರಾಜ ಅವರ ಕೆಸೆಟ್ ತಂದು ಅದೇ ತರಹ ಬೇಕು ಎನ್ನುತ್ತಾರೆ. ವಡಿವೇಲು, ವಿವೇಕ್ ಮಾಡಿರುವ ಕಾಮಿಡಿಯೇ ಬೇಕು ಎನ್ನುತ್ತಾರೆ. ಇತ್ತೀಚೆಗೆ ನಮ್ಮಲ್ಲಿ ಬಂದಿರುವುರೆಲ್ಲಾ ವಲಸೆ ಬಂದಿರುವ ಕಾಮಿಡಿಯೇ ಹೊರತು ಸ್ವಂತದ್ದು ಕಡಿಮೆ. ಸದ್ಯಕ್ಕಂತೂ ವಡಿವೇಲು, ವಿವೇಕ್‌ರೇ ನನ್ನ ಅನ್ನದಾತರು.. ಎಂದು ನಿಟ್ಟುಸಿರು ಬಿಟ್ಟರು.
ನಾನು ಕಷ್ಟದಲ್ಲಿದ್ದಾಗ ಹೊಟ್ಟೆಪಾಡಿಗಾಗಿ ಮಾಡಿದ್ದು ನಟನೆ. ಅದೇ ನನ್ನ ಕೈ ಹಿಡಿದುಕೊಂಡು ಬಂದಿದೆ. ನಿಜ ಹೇಳಬೇಕೆಂದರೆ ನನ್ನ ನಿಜವಾದ ಒಲವು ನಿರ್ದೇಶನ ಹಾಗೂ ಸಂಗೀತದ ಕಡೆಗೆ. ನಿರ್ದೇಶನ ನನಗೆ ಮುಂಚಿನಿಂದಲೂ ಸವಾಲು ಎನ್ನುತ್ತಾರೆ ಸಾಧು. ಏನೇ ಆರೋಪಗಳಿದ್ದರೂ ಸಾಧು ಕೋಕಿಲ ಒಬ್ಬ ಉತ್ತಮ ನಟ ಎನ್ನುವುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ.