ಕಳೆದ ವಾರ ಬಿಡುಗಡೆಯಾದ ರಾಕಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಇದರಿಂದ ಇದರ ನಾಯಕ ಯಶ್ ತುಂಬಾ ಖುಷಿಯಾಗಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಚಿತ್ರದ ಹಾಡುಗಳು, ತುಣುಕುಗಳು ಮತ್ತು ಯಶ್ ಅವರ ಡ್ಯಾನ್ಸ್ ಪ್ರೇಕ್ಷಕರನ್ನು ಈ ಚಿತ್ರದತ್ತ ವಾಲಿಸಿದೆ. ತೆರಕಂಡ ಹೆಚ್ಚಿನ ಎಲ್ಲಾ ಕೇಂದ್ರಗಳಲ್ಲೂ ರಾಕಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ವಾರ ಚಿತ್ರ ಬಿಡುಗಡೆಯಾದ ಮೊದಲ ದಿನ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಯಶ್ ಅವರನ್ನು ಮುತ್ತಿಕೊಂಡ ಪ್ರೇಕ್ಷಕರು ಎತ್ತಿ ಜೈಕಾರ ಹಾಕಿ ಒಂದು ಸ್ಟೆಪ್ ಹಾಕು ಗುರು ಎಂದರಂತೆ. ಆ ಗೊಂದಲದಲ್ಲಿ ಅವರ ಮೊಬೈಲ್ ಬಿದ್ದು ಹೋಗಿದ್ದು ಗೊತ್ತೇ ಆಗಲಿಲ್ಲವಂತೆ. ಮಂಡ್ಯ, ಮೈಸೂರಿನ ಚಿತ್ರಮಂದಿರಗಳಲ್ಲೂ ಭರ್ಜರಿ ಓಪನಿಂಗ್ ಸಿಕ್ಕಿದೆ. ಒಬ್ಬ ಹೊಸ ಹೀರೋಗೆ ಈ ರೀತಿಯ ಓಪನಿಂಗ್ ಸಿಗೋದು ಅಪರೂಪ.
ರಾಕಿ ಚಿತ್ರದ ಅವಧಿ ತುಸು ಹೆಚ್ಚಾಯಿತು ಎಂಬ ಆಕ್ಷೇಪಗಳ ಹಿನ್ನೆಲೆಯಲ್ಲಿ ಚಿತ್ರವನ್ನು ಹತ್ತು ನಿಮಿಷಗಳಷ್ಟು ಇಳಿಸಲಾಗಿದೆಯಂತೆ. ಗಳಿಕೆಯಲ್ಲೂ ಚೆನ್ನಾಗಿದೆ. ಕಾಲೇಜು ಯುವಕ-ಯುವತಿಯರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಈಗ ಈ ಹುಡುಗನಿಗೆ ಗಾಂಧಿನಗರದಲ್ಲಿ ಭರ್ಜರಿ ಬೇಡಿಕೆ. ದೊಡ್ಡ ದೊಡ್ಡ ಬ್ಯಾನರ್‌ನ ಹಲವಾರು ಆಫರ್‌ಗಳು ಅವರನ್ನು ಬೆನ್ನತ್ತಿ ಬಂದಿವೆ. ಆದರೆ ಯಶ್ ಹಣದಾಸೆಗಾಗಿ ಬಂದ ಚಿತ್ರಗಳನ್ನೆಲ್ಲಾ ಒಪ್ಪಿಕೊಳ್ಳುತ್ತಿಲ್ಲ. ಅಂದಹಾಗೆ ಯಶ್ ತಮ್ಮ ಸ್ವಂತ ದುಡಿಮೆಯಲ್ಲಿ ಒಂದು ಸ್ಯಾಂಟ್ರೊ ಕಾರು ತಗೊಂಡಿದ್ದಾರಂತೆ.