ಬಾಲ್ಯದಲ್ಲಿ ಬಹುತೇಕ ಮಕ್ಕಳು ಕೇಳಿದ ಗೋವಿನ ಹಾಡು ಮತ್ತು ಬದುಕಿಗೆ ಬುನಾದಿಯಾದ ಹಳ್ಳಿ ಜೀವನ ಇವೆರಡರ ಸಮ್ಮಿಶ್ರಣವಾದ ಅಕ್ಕ-ತಂಗಿ ಚಿತ್ರದ ಯಶಸ್ಸಿಗೆ ಕೆಲವೇ ಮೆಟ್ಟಿಲುಗಳು ಬಾಕಿ- ಹೀಗೆಂದವರು ನಿರ್ದೇಶಕ ಎಸ್.ಮಹೇಂದರ್.
ಜೀವಮಾನದಲ್ಲಿ ಗಲ್ಲಾಪೆಟ್ಟಿಗೆ ಭರ್ತಿ ಮಾಡಲು ಮೌಲ್ಯವನ್ನು ಕಳೆದುಕೊಳ್ಳಲಿಲ್ಲ ಎನ್ನುವ ಮಹೇಂದರ್, ಈ ಚಿತ್ರದ ಹಿಂದೆ ಯಾವುದೇ ಪ್ರಶಸ್ತಿ ಬಾಚುವ ಉದ್ದೇಶವಿಲ್ಲ ಎಂದು ಸ್ಪಷ್ಟನೆ ಕೊಡುತ್ತಾರೆ.
ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದಿದೆ. ಕನ್ನಡಿಗರು ಯಾವತ್ತಿಗೂ ಸ್ಮರಿಸಿಕೊಳ್ಳುವಂತಹ ಚಿತ್ರಗಳನ್ನೇ ಕೊಟ್ಟಿದ್ದೇನೆ. ಎಲ್ಲಾ ಚಿತ್ರಗಳಲ್ಲೂ ಗ್ರಾಮೀಣ ಸೊಗಡು, ಒಂದಷ್ಟು ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದೇನೆ. ಹಾಗೆಯೇ ಸಮಾಜದಲ್ಲಿ ಕಣ್ಮರೆಯಾಗುತ್ತಿರುವ ಅವಿಭಕ್ತ ಕುಟುಂಬದ ಕಥೆ ಅಕ್ಕ-ತಂಗಿ ಎನ್ನುತ್ತಾರೆ ಮಹೇಂದರ್.
ಅಕ್ಕ-ತಂಗಿ ಚಿತ್ರದ ಪ್ರತಿ ದೃಶ್ಯವೂ ಚೆನ್ನಾಗಿ ಮೂಡಿಬಂದಿದೆ ಎನ್ನುವ ಅವರು, ಜಾನಪದ ಸೊಗಡಿನ ಕೊಳ್ಳೇಗಾಲ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದೆ ಎನ್ನುತ್ತಾರೆ. ರಾಜ್ಯದ 15 ಕೇಂದ್ರಗಳಲ್ಲಿ ಅಕ್ಕ-ತಂಗಿ ಬಿಡುಗಡೆಯಾಗಿದೆ. ಟಿವಿ ಮುಂದೆ ಕುಳಿತಿರುವ ಮಹಿಳೆಯರನ್ನು ಚಿತ್ರಮಂದಿರಕ್ಕೆ ಕರೆತರಲೆಂದೇ ಮಹಿಳಾ ಪ್ರಧಾನ ಚಿತ್ರ ತಯಾರಿಸಿದೆ ಎನ್ನುವ ಮಹೇಂದರ್, ಸಂಕ್ರಾಂತಿಯ ನಂತರ ಮತ್ತೊಂದು ಚಿತ್ರ ನಿರ್ದೇಶಿಸಲಿದ್ದಾರಂತೆ.