ಗಣೇಶ್ ಹೊಸವರ್ಷದ ಸಂಕಲ್ಪ

ಹೊಸವರ್ಷದಲ್ಲಿ ನಟ ಗಣೇಶ್ ಹೊಸ ಸಂಕಲ್ಪ ಮಾಡಿದ್ದಾರೆ. ಈ ಹಿಂದೆ ವರ್ಷಕ್ಕೆ 5-6 ಚಿತ್ರಗಳಲ್ಲಿ ನಟಿಸುತ್ತಿದ್ದ ಅವರು ಇನ್ನು ಮುಂದೆ 2-3 ಚಿತ್ರಗಳಲ್ಲಿ ಮಾತ್ರ ನಟಿಸಲು ಸಂಕಲ್ಪ ಮಾಡಿದ್ದಾರೆ. 2008 ಗಣೇಶ್ ಪಾಲಿಗೆ ಅಷ್ಟೊಂದು ಅದೃಷ್ಟವಾಗಿರಲಿಲ್ಲ. ಅವರ ಬೊಂಬಾಟ್, ಸಂಗಮ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸುದ್ದಿ ಮಾಡಲಿಲ್ಲ. ಈವರೆಗೆ ಬೇರೆಯವರಿಗಾಗಿ ಚಿತ್ರ ಮಾಡುತ್ತಿದ್ದೆ. ಹಳೆಯ ಒಪ್ಪಂದಗಳಿದ್ದವು. ಆದ್ದರಿಂದ ಚಿತ್ರಕಥೆ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಈಗ ಆ ಒಪ್ಪಂದಗಳೆಲ್ಲಾ ಮುಗಿದಿದೆ. ಇನ್ನೇನಿದ್ದರೂ ನನಗಾಗಿ, ನನ್ನ ಪ್ರೇಕ್ಷಕರಿಗಾಗಿ ಚಿತ್ರ ಮಾಡುತ್ತೇನೆ ಎನ್ನುತ್ತಾರೆ ಗಣೇಶ್.ಇನ್ನು ಮುಂದೆ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಲು ಮೊದಲು ನಿರ್ದೇಶಕರೊಂದಿಗೆ ಕುಳಿತು ಚರ್ಚಿಸಿದ ನಂತರವಷ್ಟೇ ಕಾಲ್ಶೀಟ್ ಕೊಡುತ್ತಾರಂತೆ. 2009 ವರ್ಷದಲ್ಲಿ ಹೊಸ ಗಣೇಶ್‌ನನ್ನು ಪ್ರೇಕ್ಷಕರು ನೋಡಲಿದ್ದಾರಂತೆ. ಈಗಾಗಲೇ ಮೂರು ಕಥೆಯನ್ನು ಓಕೆ ಮಾಡಿದ್ದಾರಂತೆ. ಸದ್ಯ ಚಿತ್ರೀಕರಣದಲ್ಲಿರುವ ಉಲ್ಲಾಸದ ಉತ್ಸಾಹ ಚಿತ್ರ ಈ ವರ್ಷದ ಮೆಗಾಹಿಟ್ ಚಿತ್ರ ಆಗಲಿದೆ ಎಂದು ಭವಿಷ್ಯ ನುಡಿಯುತ್ತಾರೆ.ಯಾರು ಎಷ್ಟೇ ಕಥೆ ಓಕೆ ಮಾಡಿದರೂ ಪ್ರೇಕ್ಷಕರು ಚಿತ್ರವನ್ನು ಓಕೆ ಮಾಡಿದರಷ್ಟೇ ಅದು ಹಿಟ್.