ವರ್ಷಧಾರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೊಬ್ಬ ಲಂಬೂ ನಟನ ಆಗಮನವಾಗುತ್ತಿದೆ. ಈ ಚಿತ್ರದಲ್ಲಿ ಎಂಟು ಅಡಿ ಎತ್ತರದ ಸಂತೋಷ್ ಎಂಬ ನಟ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಖಳನಟರಾಗಿರುವ ಸಂತೋಷ್‌ಗೆ ಸುಪಾರಿ ನೀಡಿದ ವಿರೋಧಿ ಪಡೆ ನಾಯಕ ಮಿಥುನ್ ತೇಜಸ್ವಿ ಹಾಗೂ ಸ್ನೇಹಿತರನ್ನು ಮುಗಿಸಲು ಸೂಚಿಸುವ ಸನ್ನಿವೇಶವನ್ನು ಚಿತ್ರಕ್ಕಾಗಿ ಇತ್ತೀಚೆಗೆ ಚಿತ್ರೀಕರಿಸಲಾಯಿತು.
ರಾಜರಾಜೇಶ್ವರಿ ನಗರದಲ್ಲಿ ನಡೆದ ಹೊಡೆದಾಟದ ದೃಶ್ಯವನ್ನು ನಿರ್ದೇಶಕ ವೇಮಗಲ್ ಜಗನ್ನಾಥ್ ಚಿತ್ರೀಕರಿಸಿಕೊಂಡರು. ಈ ವಿಶಿಷ್ಟ ಫೈಟ್ ಚಿತ್ರದ ಹೈಲೈಟ್ ಆಗಲಿದೆ ಎನ್ನುತ್ತಾರೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು. ಪಿ.ರಾಮಸ್ವಾಮಿ ಹಾಗೂ ಸಂಧ್ಯಾವೆಂಕಟೇಶ್ ನಿರ್ಮಿಸುತ್ತಿರುವ ವರ್ಷಧಾರೆ, ವೇಮಗಲ್ ನಿರ್ದೇಶನದ 10ನೇ ಚಿತ್ರ.
ದೇವರಾಜ್ ಛಾಯಾಗ್ರಹಣವಿರುವ ವರ್ಷಧಾರೆಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್ ತೇಜಸ್ವಿ ಸೂರಜ್, ಪಾಯಲ್ ಘೋಷ್, ಅಶಿ ಟ್ಯಾಗೂರ್, ರಾಂಪ್ರಸಾದ್, ಸಂತೋಷ್, ನಿಶಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮಿಥುನ್ ತೇಜಸ್ವಿ ಹಾಗೂ ಸೂರಜ್ ಬ್ರೇಕ್‌ಗಾಗಿ ಈ ಚಿತ್ರವನ್ನು ಎದುರು ನೋಡುತ್ತಿದ್ದಾರೆ.