ವರ್ಷದ ಹಿಂದೆ ಸೆಟ್ಟೇರಿದ ಮೈ ಗ್ರೀಟಿಂಗ್ಸ್ ಚಿತ್ರ ಮುಂದಿನ ಶುಕ್ರವಾರ ತೆರೆ ಕಾಣುತ್ತಿದೆ. ಚಿತ್ರವನ್ನು ಬಿ.ಆರ್. ಕೇಶವ್ ನಿರ್ದೇಶಿಸುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಿನಿಮಾ ಮಾಡುವವರ ಪೈಕಿ ಕೇಶವ್‌ಗೆ ಮೊದಲ ಸ್ಥಾನವಿತ್ತು. ಆದರೆ ಈ ಬಾರಿ ಅವರು ಈ ಸ್ಥಾನವನ್ನು ಉಳಿಸಿಕೊಂಡಿಲ್ಲ. ಈ ಚಿತ್ರ ಹೆಚ್ಚು ಸಮಯ ಚಿತ್ರೀಕರಣಗೊಂಡಿದೆ.
ಈ ಚಿತ್ರವನ್ನು ಕೇಶವ್ ಹಿಂದಿಗೂ ಡಬ್ ಮಾಡುತ್ತಿದ್ದಾರೆ. ಈಗ ಕನ್ನಡ ಅವತರಣಿಕೆ ತೆರೆ ಕಾಣುತ್ತಿದ್ದು, ಫೆಬ್ರುವರಿಯಲ್ಲಿ ಹಿಂದಿ ಅವತರಣಿಕೆ ತೆರೆ ಕಾಣಲಿದೆ. ತೆಲುಗು ನಟ ಆದಿತ್ಯ ಓಂ ಹಾಗೂ ಆಶಿತಾ ಮೈ ಗ್ರೀಟಿಂಗ್ಸ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿ ಹೊಸ ವರ್ಷದ ಶುಭಾಶಯ ಕೋರಿ ಕಳುಹಿಸುವ ಮೆಸೇಜ್ ಆಕಸ್ಮಿಕವಾಗಿ ನಾಯಕನಿಗೆ ಹೋಗುತ್ತದೆ. ಅಲ್ಲಿಂದ ಅವರಿಬ್ಬರಿಗೂ ಪ್ರೀತಿ ಶುರುವಾಗುತ್ತದೆ. ಇವರಿಬ್ಬರು ಮದುವೆ ನಂತರ ಹನಿಮೂನ್‌ಗೆ ಸ್ವಿಟ್ಜರ್ಲೆಂಡ್‌ಗೆ ಹೋಗುತ್ತಾರೆ. ಅಲ್ಲಿ ಅಪರಿಚಿತರು ಇವರ ಮೇಲೆ ಹಲ್ಲೆ ಮಾಡುವ ಕಥಾ ಹಂದರವನ್ನು ಚಿತ್ರ ಹೊಂದಿದೆ.
ಕೇಶವ್ ನಿರ್ದೇಶನದ ಸುಧಾರಾಣಿ ನಟಿಸಿರುವ ಕಾನನ ಚಿತ್ರ ಕೂಡಾ ತೆರೆಗೆ ಸಿದ್ಧವಾಗಿದೆ. ನಾಶವಾಗುತ್ತಿರುವ ಪಶ್ಚಿಮದ ಅರಣ್ಯವನ್ನು ಉಳಿಸುವ ಕುರಿತು ಚಿತ್ರದಲ್ಲಿ ಸಂದೇಶವಿದೆ. ಅವರ ಮತ್ತೊಂದು ಚಿತ್ರ ಮೃಗಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 2009ಕ್ಕೆ ಕೇಶವ್ ದೊಡ್ಡ ಯೋಜನೆಯೊಂದರ ಸಿದ್ಧತೆಯಲ್ಲಿದ್ದಾರೆ. ಹಳೆ ಚಿತ್ರ ಗಂಡಭೇರುಂಡ ಶೀರ್ಷಿಕೆಯೊಂದಿಗೆ ಚಿತ್ರವೊಂದಕ್ಕೆ ಕೇಶವ್ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.