ಕೊನೆಗೂ ಪ್ರೇಮ್ ಕಹಾನಿ ಚಿತ್ರ ತಂಡ ಖುಷಿಗೊಂಡಿದೆ. ಚಿತ್ರದ ಟೈಟಲ್ ಬಗ್ಗೆ ಇದ್ದ ವಿವಾದ ಕೊನೆಗೊಂಡು ವಾಣಿಜ್ಯ ಮಂಡಳಿ ಅದೇ ಟೈಟಲ್‌ಗೆ ಓಕೆ ಅಂದಿದೆ. ಈ ಹಿಂದೆ ಅನ್ಯ ಭಾಷಾ ಟೈಟಲ್‌ಗಳನ್ನು ತಿರಸ್ಕರಿಸಲಾಗುವುದು ಎಂದು ಮಂಡಳಿ ಹೇಳಿತ್ತು. ಅದರಂತೆ ಪ್ರೇಮ್ ಕಹಾನಿ ಟೈಟಲ್ ಬಗ್ಗೆ ಅಪಸ್ವರ ಎತ್ತಿತ್ತು.
ಆದರೆ ಈಗ ಸಭೆ ನಡೆಸಿ ಅದೇ ಟೈಟಲ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಮಂಡಳಿ ಅನುಮತಿ ನೀಡಿದೆ. ಭಾರೀ ಸಮಯದಿಂದ ಈ ಚಿತ್ರದ ಬಗ್ಗೆ ಜನತೆಯಲ್ಲಿ ನಿರೀಕ್ಷೆ ಹುಟ್ಟಿದೆ. ಈಗ ಏಕಾಏಕಿ ಬದಲಾಯಿಸಿದರೆ ಗೊಂದಲ ಉಂಟಾಗುತ್ತದೆ ಎಂದು ಚಿತ್ರದ ನಿರ್ಮಾಪಕರು ಮಂಡಳಿಗೆ ಮನವಿ ಮಾಡಿದ್ದರು. ಅದರಂತೆ ಸಭೆ ನಡೆಸಿದ ಮಂಡಳಿ ಅದೇ ಟೈಟಲ್‌ಗೆ ಹಸಿರು ನಿಶಾನೆ ತೋರಿದೆ.
ಶ್ರೀಮಂತ ಹುಡುಗಿಯ ಹಾಗೂ ಬಡವ ಹುಡುಗನೊಬ್ಬನ ನಡುವೆ ನಡೆಯುವ ಪ್ರೇಮಕಥೆಯನ್ನು ಈ ಚಿತ್ರ ಒಳಗೊಂಡಿದೆ. ಇಡೀ ಚಿತ್ರವನ್ನು ಡಿಐ ಮಾಡಲು ಚಿತ್ರತಂಡ ಯೋಚಿಸಿದೆ. ಈ ಹಿಂದೆ ಜೋಧಾ ಅಕ್ಬರ್ ಚಿತ್ರಕ್ಕೆ ಡಿಐ ಮಾಡಿಸಿದ ಸ್ಟುಡಿಯೋದಲ್ಲೇ ಡಿಐ ಮಾಡಲಿದ್ದಾರಂತೆ.