ಈ ಚಿತ್ರದಲ್ಲಿ ನಾಯಕ, ನಾಯಕಿ ಎಲ್ಲರೂ ಇದ್ದಾರೆ. ಸಂಭಾಷಣೆ, ಹೊಡೆದಾಟ, ಕುತೂಹಲ, ತಮಾಷೆ ಎಲ್ಲವೂ ಇದೆ. ಆದರೆ ಯಾವ ಪಾತ್ರಗಳೂ ತೆರೆ ಮೇಲೆ ಕಾಣುವುದಿಲ್ಲ. ಬರೀ ಗ್ರಹಿಕೆಗಷ್ಟೇ ಇವೆ. ಇಂಥದೊಂದು ವಿಚಿತ್ರ ಚಿತ್ರದ ಹೆಸರು ಬಾಣ.
ನಿರ್ದೇಶಕ ಶ್ರೀನಿವಾಸಲು ಈ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಬಾಣ ಚಿತ್ರಕ್ಕೆ ಇವರೇ ಕತೆ, ಚಿತ್ರಕತೆ ಬರೆದು ನಿರ್ಮಾಪಕರ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಚಿತ್ರರಂಗದಲ್ಲಿ ಇಪ್ಪತ್ತು ವರ್ಷ ಅನುಭವ ಹೊಂದಿದ್ದಾರಂತೆ. ಕಿರುತೆರೆಯಲ್ಲಿ ನಟ ಹಾಗೂ ನಿರ್ದೇಶಕನಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರಂತೆ. ನಿರ್ದೇಶಕ ಹೇಳುವುದೇನೆಂದರೆ ಈಗ ಬರುತ್ತಿರುವ ಚಿತ್ರಗಳಿಗಿಂತ ವಿಭಿನ್ನವಾಗಿ ಮಾಡಬೇಕು ಎಂದು ಈ ಚಿತ್ರ ನಿರ್ದೇಶನ ಮಾಡಿದ್ದಾರಂತೆ. ಈ ಚಿತ್ರ ಮಾಡಲು ಅವರು ಗುರುಗಳಾದ ರಾಜಾರಾಂ ಅವರೇ ಪ್ರೇರಣೆಯಂತೆ.
ಚಿತ್ರದ ಕತೆ ಗಂಡ, ಹೆಂಡತಿ ಮತ್ತು ಗೆಳೆಯನ ಸುತ್ತ ಸಾಗುತ್ತದೆಯಂತೆ. ಗಂಡ ವಿದೇಶಕ್ಕೆ ಹೊರಟು ಕಾರಣಾಂತರಗಳಿಂದ ಮನೆಗೆ ಮರಳುತ್ತಾನೆ. ಆಗ ಹೆಂಡತಿ ಗೆಳೆಯನೊಂದಿಗೆ ಸಲ್ಲಾಪದಲ್ಲಿ ತೊಡಗಿರುತ್ತಾಳೆ. ಇದನ್ನು ಕಂಡು ಕೋಪಗೊಂಡ ಗಂಡ ಶೂಟ್ ಮಾಡುತ್ತಾನೆ. ಆದರೆ ಹೆಂಡತಿ ಸಾಯುತ್ತಾಳೆ. ಆನಂತರ ನಿಜವಾದ ಕಥೆ ಆರಂಭವಾಗುತ್ತದೆ ಎಂದು ಚಿತ್ರದ ಕಥೆಯ ಒಂದೆಳೆಯನ್ನು ಬಿಚ್ಚಿಟ್ಟರು ನಿರ್ದೇಶಕ ಶ್ರೀನಿವಾಸಲು.
ಚಿತ್ರದಲ್ಲಿ ಮುಕ್ಕಾಲು ಪಾಲು ಸಾಹಸ ಇದೆಯಂತೆ. ಕೇವಲ 18 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ್ದಾರಂತೆ. ಚಿತ್ರಕ್ಕೆ ಸೆನ್ಸಾರ್ ಮುಗಿದು ಯು ಪ್ರಮಾಣ ಪತ್ರ ಕೂಡ ನೀಡಿದೆ. ಹಾಗೆ ಚಿತ್ರವನ್ನು ಆರು ಭಾಷೆಗಳಲ್ಲಿ ನಿರ್ಮಿಸಲಾಗಿದೆಯಂತೆ. ಒಟ್ಟಿನಲ್ಲಿ ಇದೊಂದು ತಂತ್ರಜ್ಞರ ಸಿನಿಮಾ ಅನ್ನುವುದು ನಿರ್ದೇಶಕರ ಅಭಿಪ್ರಾಯ. ಜುಲೈ ತಿಂಗಳಿನಲ್ಲಿ ಚಿತ್ರ ತೆರೆ ಕಾಣಲಿದೆಯಂತೆ.