ಇಂತಹ ಪ್ರೇಮ/ಮೈತ್ರಿ ಪ್ರಸಂಗ ಅಥವಾ ಗಾಸಿಪ್‌ಗಳು ಚಿತ್ರರಂಗಕ್ಕೇನೂ ಇದು ಹೊಸತಲ್ಲ. ಕೆಲವು ಸಂದರ್ಭದಲ್ಲಿ ಇಂತಹ ವಿವಾದಗಳಿಂದಲೇ ಹೆಸರು ಚಾಲ್ತಿಯಲ್ಲಿರುತ್ತದೆ ಎಂದು ನಂಬುವವರಿಗೂ ಕೊರತೆಯಿಲ್ಲ.
ನಟಸಾರ್ವಭೌಮ ದಿ| ಡಾ. ರಾಜ್ ಕುಮಾರ್ ಬಗ್ಗೆಯೂ ಹಲವು ಕಥೆಗಳನ್ನು ಕಟ್ಟುತ್ತಿದ್ದ ದಿನಗಳಿದ್ದುವು. ಲೀಲಾವತಿ, ಭಾರತಿ, ಜಯಂತಿಯವರ ಜತೆಗೂ ಅವರ ಹೆಸರುಗಳು ಸೇರಿಕೊಂಡಿದ್ದವು. ಈ ಜೋಡಿ ತೆರೆ ಮೇಲೆ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದರಿಂದ ನಿಜ ಜೀವನದಲ್ಲೂ ಹಾಗೇ ಇರಬಹುದೆಂಬ ಕಲ್ಪನೆಗಳು ಇದಕ್ಕೆ ಕಾರಣವಾಗಿರಲೂ ಬಹುದು. ಸತ್ಯ-ಮಿಥ್ಯಗಳೇನೇ ಇದ್ದರೂ ವರನಟನಿಗೂ ಗಾಸಿಪ್‌ಗಳು ರಿಯಾಯಿತಿ ಕೊಟ್ಟಿಲ್ಲವೆನ್ನುವುದು ವಾಸ್ತವ.
MOKSHENDRA
ವಿಷ್ಣುವರ್ಧನ್ - ಭಾರತಿ, ಅಂಬರೀಷ್ - ಸುಮಲತಾ ಕೂಡ ಗಾಸಿಪ್ಪಿನ ನಂತರವಷ್ಟೇ ದಾಂಪತ್ಯಕ್ಕೆ ಕಾಲಿರಿಸಿದ್ದು. ಟೈಗರ್ ಪ್ರಭಾಕರ್‌ರವರ ರಂಗು-ರಂಗಿನ ಜೀವನದ ಬಗ್ಗೆ ಹಲವಾರು ಕಥೆಗಳೇ ಇವೆ. ಜಯಮಾಲಾ ಸೇರಿದಂತೆ ಅವರ ಜೀವನದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟವರು ಮೂರು ಮಂದಿ. ಟೈಗರ್ ತೊರೆದು ಅದೆಷ್ಟೋ ವರ್ಷಗಳ ನಂತರ ಜಯಮಾಲಾ ಕ್ಯಾಮರಾಮ್ಯಾನ್ ರಾಮಚಂದ್ರರನ್ನು ಪ್ರೇಮಿಸಿ ವರಿಸಿದ್ದು.
ಅತಿರಥ ಮಹಾರಥ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರಂತೂ ಯಾವುದನ್ನೂ ಮುಚ್ಚಿಟ್ಟವರಲ್ಲ. ಕಲ್ಪನಾ ಜತೆಗಿದ್ದ ಸಂಬಂಧ ಲೈಟ್ ಬಾಯ್‌ಗೂ ತಿಳಿದಿದ್ದ ಸಂದರ್ಭದಲ್ಲೂ ಯಾರನ್ನೂ ಕ್ಯಾರೇ ಅನ್ನದವರು ನಂತರ ಮತ್ತೊಬ್ಬ ನಟಿ ಆರತಿಯನ್ನು ಮದುವೆಯಾದದ್ದು ಪುಟ್ಟಣ್ಣರ ಎದೆಗಾರಿಕೆಗೆ ಒಂದು ಚಿಕ್ಕ ಉದಾಹರಣೆಯಷ್ಟೆ.
ನಟಿ ಶ್ರುತಿ ಮತ್ತು ನಿರ್ದೇಶಕ ಮಹೇಂದರ್, ಕ್ಯಾಮರಾಮ್ಯಾನ್ ವೇಣು ಮತ್ತು ನಟಿ ತಾರಾ, ನಿರ್ದೇಶಕ ಓಂ ಪ್ರಕಾಶ್ ರಾವ್ ಧಾರಾವಾಹಿ ನಟಿಯೊಬ್ಬಳ ಪ್ರೇಮಪಾಶಕ್ಕೆ ಬಿದ್ದು ತಾಳಿ ಬಿಗಿದದ್ದು ಭಾರೀ ಸುದ್ದಿಯಾಗದಿದ್ದರೂ ಗಾಂಧಿನಗರ ತಲೆಕೆರೆದುಕೊಂಡದ್ದಂತೂ ಸತ್ಯ.
'ಚೈತ್ರದ ಪ್ರೇಮಾಂಜಲಿ'ಯಲ್ಲಿ ಹುಟ್ಟಿದ ಪ್ರೇಮದ ಫಲವಾಗಿ ಮನೆಯವರನ್ನೂ ತೊರೆದು ನಟಿ ಶ್ವೇತಾಳನ್ನು ವಿವಾಹವಾಗಿದ್ದ ರಘುವೀರ್ ದಾಂಪತ್ಯ ಪತ್ನಿಯ ಸಾವಿನೊಂದಿಗೆ ಕೊನೆಗೊಂಡಿದ್ದು, ಮಾಲಾಶ್ರೀ ಪ್ರಿಯಕರ ಎಂದೇ ಗುರುತಿಸಲ್ಪಟ್ಟ ಸುನಿಲ್ 'ಅಪಘಾತ'ವೊಂದರಲ್ಲಿ ಸಾವನ್ನಪ್ಪಿದ್ದು, ರಾಜಕಾರಣಿಗಳ ಹುತ್ತದಲ್ಲಿ ಸಿಕ್ಕಿ ಬಿದ್ದ ನಿವೇದಿತಾ ಜೈನ್ ಅಸ್ತಂಗತಳಾಗಿದ್ದು ಮುಂತಾದುವು ಈ ನಡುವೆ ಬಂದು ಹೋದ ದುಃಖಾಂತ್ಯ ಪ್ರೇಮ ಪ್ರಸಂಗಗಳು.
MOKSHENDRA
ನಟಿ ಪ್ರೇಮಾಳಿಗೆ ಒಂದು ಕಾಲದಲ್ಲಿ ಹಲವು ನಟರನ್ನು ಕೈ-ಕಾಲುಗಳೆಂದು ಹೇಳಲಾಗುತ್ತಿತ್ತು. ಗಾಂಧಿನಗರದ ಹೆಡ್ಡಾಫೀಸ್‌ನ ಥೈಲಿ ಹಿಡಿದಿರುವ, ಆಗೊಮ್ಮೆ ಈಗೊಮ್ಮೆ ನಟಿಸಿ ಮಾಜಿಯಾಗುವಾತನದ್ದು ಇದರಲ್ಲಿ ಸಿಂಹಪಾಲು ಎಂಬುದು ನಿಕಟವರ್ತಿಗಳಿಗಷ್ಟೇ ಗೊತ್ತು. ಆದರೆ ಮುಖ್ಯವಾಹಿನಿಗೆ ತಿಳಿಯುವಂತಾಗಿದ್ದು ಉಪೇಂದ್ರ ಜತೆಗಿನದ್ದು. ಅದು ಪ್ರೇಮವೋ ಅಥವಾ ಅದರ ನಂತರದ ದ್ವೇಷವೋ ಎಂಬುದು ಕೊನೆಗೂ ಬಹಿರಂಗವಾಗಲೇ ಇಲ್ಲ. ಆದರೂ ಆತ 'ಎ' ಮಾಡಿದ್ದಕ್ಕೆ ಆಕೆ ಪ್ರಕಾಶ್ ರೈ ಜತೆ ಸೇರಿ 'ಝೆಡ್' ಮಾಡಿದ್ದಂತೂ ಎಲ್ಲರ ಗಮನ ಸೆಳೆದಿತ್ತು. ಅಲ್ಲೂ ತಮ್ಮ ತಮ್ಮ ಕಥೆಯ ಎಳೆಯನ್ನೇ ಬಳಸಿಕೊಂಡಿದ್ದರು ಎಂಬುದು ಸುದ್ದಿಯಾಗಿತ್ತು.
ಸುಮ್ಮನೆ ಒಟ್ಟಿಗೆ ಕೂತಲ್ಲೆಲ್ಲಾ ಬಣ್ಣ ಹಚ್ಚಿ ಯಾರ‌್ಯಾರೊಂದಿಗೋ ಥಳುಕು ಹಾಕುವ ಚಿತ್ರರಂಗಕ್ಕೆ ಉಪೇಂದ್ರ - ಪ್ರಿಯಾಂಕ ತ್ರಿವೇದಿ ಸಂಬಂಧ ಅರಿಯದಾಗದೇ ಹೋಯಿತು. ಅವರು ಮದುವೆಯಾಗುವ ಮುಂಚಿನ ದಿನ ಮೂಗಿನ ಮೇಲೆ ಬೆರಳಿಟ್ಟವರಲ್ಲಿ ಹೆಚ್ಚಿನವರು ಗಾಂಧಿನಗರದವರೇ ಎಂಬುದು ಗಮನಾರ್ಹ.
ಹಾಗೆ ನೋಡಲು ಹೋದರೆ ಈ ಗಾಸಿಪ್ಪುಗಳಿಗೆ ಒಡ್ಡಿಕೊಳ್ಳದವರೇ ಕಡಿಮೆಯೆನ್ನಬಹುದು. 'ಮೈ ಅಟೋಗ್ರಾಫ್' ನಂತರ ವಿವಾಹಿತ ಸುದೀಪ್ ಸಹ ನಟಿ ಮೀನಾ ಜತೆ ಅಲ್ಲಲ್ಲಿ ಸುತ್ತುತ್ತಿದ್ದಾರೆ, ಅವರ ನಡುವೆ ಏನೋ ಇದೆ ಎಂಬ ಸುದ್ದಿಯ ಬೆನ್ನಿಗೆ ಮದುವೆಯಾಗೇ ಬಿಟ್ಟರು ಎಂಬ ಬಾಂಬ್ ಕೂಡ ಬಿದ್ದಿತ್ತು. ಅವೆಲ್ಲ ಸಂಪೂರ್ಣ ಸುಳ್ಳಾಗಿದ್ದು ಆಕೆ ಇತ್ತೀಚೆಗೆ ಬೇರೆ ಮದುವೆಯಾದಾಗ.
MOKSHENDRA
ದರ್ಶನ್ - ರಕ್ಷಿತಾ ಹೆಸರನ್ನು ಒಂದು ಮಾಡೋ ಜನರೂ ಇದ್ದರು. ದರ್ಶನ್ ಅಷ್ಟರಲ್ಲೇ ಮದುವೆಯಾಗಿ ಪರಿಸ್ಥಿತಿ ತಿಳಿಯಾಗಿಸಿದರು. ನಂತರ ಬಾಬು ಪುತ್ರ ಆದಿತ್ಯ ಜತೆಗಿನ ಸಂಬಂಧ 'ಲವ್' ಚಿತ್ರದ ಸಂದರ್ಭದಲ್ಲಿ ಗಂಭೀರ ಹಂತಕ್ಕೆ ಹೋದಾಗ ಯಾವುದೋ ರೀತಿಯಲ್ಲಿ ಮುರಿದು ಬಿದ್ದು ಪ್ರೀತಿ ದಿಢೀರನೆ ಹುಟ್ಟಿಕೊಂಡದ್ದು ನಿರ್ದೇಶಕ ಪ್ರೇಮ್ ಜತೆಗೆ. ಅದು ಮದುವೆಯಲ್ಲಿ ಕರಗಿ ಹೋಯಿತು.
ಇನ್ನು ರಾಧಿಕಾಳ 'ಕುಮಾರ'ಪರ್ವ ಎಲ್ಲರಿಗೂ ಗೊತ್ತಿರುವಂತದ್ದೇ. ಅದು ಆರು ತಿಂಗಳಾವರ್ತಿಗೊಮ್ಮೆ ಪತ್ರಿಕೆಗಳ ಮೂಲೆಯಲ್ಲಿ ಜಾಗ ಪಡೆದಿರುತ್ತದೆ. ಇವೆಲ್ಲಕ್ಕಿಂತ ಭಿನ್ನವಾದ ಪ್ರಕರಣವಿದು. ಆರಂಭದಲ್ಲಿ ಡೀಕೇಶಿ ಮುಂತಾದವರ ಜತೆ ತೇಲಾಡುತ್ತಿದ್ದ ಆಕೆಯ ಹೆಸರು ಕೊನೆಗೆ ಬಿದ್ದದ್ದು ತೆನೆ ಹೊತ್ತ ಮಹಿಳೆ ಒಡೆಯನ ಕಾಲ ಬುಡದಲ್ಲಿ.
ಇದೇ ರೀತಿ ಮುಂಗಾರು ಮಳೆಯ ನಟಿಯನ್ನೂ ರಾಜಕಾರಣಿಗಳ ಜತೆ ಗುರುತಿಸಲಾಯಿತಾದರೂ ಆಕೆ ಅದನ್ನು ಆಗಾಗ ತಳ್ಳಿ ಹಾಕುತ್ತಲೇ ಬಂದಿದ್ದಾಳೆ. ಪತ್ರಕರ್ತರು ಪ್ರಶ್ನೆ ಕೇಳಿದಾಗಲೆಲ್ಲಾ 'ತಾನಿಲ್ಲಿ ಬಂದಿರುವುದು ಹಣ ಗಳಿಸಲು ಅಲ್ಲ' ಎಂದು ಆಕೆ ಸ್ಪಷ್ಟಪಡಿಸಿದ್ದಳು. ಒಂದು ಕಾಲದಲ್ಲಿ ತಾರಾ ಕೂಡ ಮಾಡುತ್ತಿದ್ದದ್ದದ್ದು ಇದನ್ನೇ ಎಂದು ಮೂಗು ಮುರಿಯುವವರೂ ಇದ್ದಾರೆ.
MOKSHENDRA
'ಚೆಲುವಿನ ಚಿತ್ತಾರ' ಹಿಟ್ ಆಗುತ್ತಿದ್ದಂತೆ ಒಂಬತ್ತನೇ ತರಗತಿಯ ಅಮೂಲ್ಯಾ ಮತ್ತು ಆಗಿನ ಹಾಟ್ ಕೇಕ್ ಗಣೇಶ್ ನಡುವೆ ಸಂಬಂಧ ಕಲ್ಪಿಸಲಾಯಿತು. ಕೆಲವೇ ತಿಂಗಳಲ್ಲಿ ಗಣೇಶ್ ತನ್ನ 'ಪ್ರಿಯತಮೆ' ಶಿಲ್ಪಾಳನ್ನು ಮದುವೆಯಾಗುವುದರೊಂದಿಗೆ ಆ ಗಾಸಿಪ್ಪುಗಳಿಗೆ ತೆರೆ ಬಿತ್ತು.
ಬೆನ್ನು ಬೆನ್ನಿಗೆ ಜೋಡಿಯಾಗಿ ನಟಿಸುತ್ತಿದ್ದುದ್ದಲ್ಲದೇ ಸೆಟ್‌ನಲ್ಲೂ ಬೇರೆಯವರ ಮಾತಿಗೆ ಸಿಗದ ಪ್ರಜ್ವಲ್ - ಅಂದ್ರಿತಾ ರೇ ಮಧ್ಯೆ ಏನೋ ನಡೆಯುತ್ತಿದೆ ಎಂದು ಹೇಳಲಾಯಿತು. ಈಗಲೂ ಅದು ಲೈಟಾಗಿ ನಡೆಯುತ್ತಿದೆ ಎಂದು ಆಗಾಗ ಟ್ಯಾಬ್ಲಾಯ್ಡ್‌ಗಳು ಬರೆದುಕೊಳ್ಳುತ್ತಿವೆ. ಅದರ ಬಗ್ಗೆ ಆತನ ತಂದೆಯೇ ತಲೆಕೆಡಿಸಿಕೊಂಡಿಲ್ಲ.
MOKSHENDRA
ಇಷ್ಟೆಲ್ಲಾ ಹೇಳಿದ ಮೇಲೆ ಕನ್ನಡ ಚಿತ್ರರಂಗದ ಹೋಲ್‌ಸೇಲ್ ಕನಸಿನ ಗುತ್ತಿಗೆ ಪಡೆದಿರುವ ರವಿಚಂದ್ರನ್ ಬಗ್ಗೆ ಹೇಳದಿದ್ದರೆ ಅವರ ಅಭಿಮಾನಿಗಳಿಗೆ ಬೇಸರವಾಗಬಹುದು. ಹೌದು, ಅವರ ಮೇಲೆ 'ಹಳ್ಳಿ ಮೇಸ್ಟ್ರು' ಚಿತ್ರದ ಸಂದರ್ಭದಲ್ಲಿ ಏನೇನೋ ಆರೋಪಗಳು ಬಂದಿದ್ದವು. ನಂತರ ಕೂಡ ಅಂತಹ ಅನೇಕ ಬಣ್ಣದ ಕಥೆಗಳು ಅವರ ಹೆಸರಿನಲ್ಲಿ ಮಿಂಚುತ್ತಿವೆ. 'ಮಲ್ಲ'ದಲ್ಲೂ ತನ್ನ ಕೈಚಳಕ ಮೆರೆದು ಹಳಬನಲ್ಲ ಎಂದು ಸಾರಿರುವ ಅವರದ್ದು ಯಾವತ್ತಿದ್ದರೂ ಚಿರಯೌವನ. ಸುಖಾಸುಮ್ಮನೆ ಕನಸುಗಳು ಹುಟ್ಟಲಾರವು ಎಂಬ ಸಬೂಬನ್ನು ಅವರ ಅವತಾರಗಳಿಗೆ ನೀಡಬಹುದು ಬಿಡಿ..!
ಅಷ್ಟಕ್ಕೂ ಇದು ಬಣ್ಣದ ಜಗತ್ತಾಗಿರುವ ಕಾರಣ ಗಾಸಿಪ್ಪುಗಳು ಮಾಮಾಲು. ಅದರ ಅಗತ್ಯವೂ ಬೇಕೆನ್ನುವವರೂ ಈ ರಂಗದಲ್ಲಿದ್ದಾರೆ. ಆ ಮೂಲಕವಾದರೂ ತಾವು ಚಾಲ್ತಿಯಲ್ಲಿರುತ್ತೇವೆ ಎಂಬುದು ಅವರ ಭಾವನೆ.