ಬುಲೆಟ್ ಪ್ರಕಾಶ್ ನಿರ್ಮಿಸುತ್ತಿರುವ ಐತಲಕಡಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನೂರು ಕಲಾವಿದರನ್ನು ಒಳಗೊಂಡಿರುವ ಈ ಚಿತ್ರ ಒಬ್ಬೊಬ್ಬ ಕಲಾವಿದರ ಚಿತ್ರೀಕರಣವನ್ನು ಮುಗಿಸುತ್ತಾ ಬರುತ್ತಿದೆ.
ಇತ್ತೀಚೆಗಷ್ಟೆ ವಿಜಯ ರಾಘವೇಂದ್ರ ತಮ್ಮ ಪಾತ್ರದ ಚಿತ್ರೀಕರಣವನ್ನು ಒಂದು ಮದುವೆ ಮನೆ ಸನ್ನಿವೇಶದಲ್ಲಿ ಭಾಗವಹಿಸಿ, ಮದುವೆ ಹಾಲ್‌ನಲ್ಲೆ ಫೈಟ್ ಮಾಡುವ ದೃಶ್ಯವೊಂದನ್ನು ಚಿತ್ರೀಕರಿಸಲಾಗಿದೆ. ಹಾಗೆ ಐತಲಕ್ಕಡಿ ಐತಲಕ್ಕಡಿ ಐತಲಕ್ಕಡಿ... ಹೇ ಕಳ್ಳಸ್ವಾಮಿ, ಒಳ್ಳೆಸ್ವಾಮಿ, ಕಿರಿಸ್ವಾಮಿ... ಅಂತ ಆರಂಭವಾಗುವ ಹಾಡಿಗೆ ಮಿನರ್ವ ಮಿಲ್ ಆವರಣದಲ್ಲಿ ನಡೆದ ಚಿತ್ರೀಕರಣದಲ್ಲಿ ಜಗ್ಗೇಶ್ ಕೂಡ ಕುಣಿದಿದ್ದಾರೆ.
ಹಾಗೆ ಇನ್ನೊಂದು ವಿಶೇಷ ಎಂದರೆ ದುನಿಯಾ ವಿಜಯ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದೊಂದು ಹಾಡಿಗೆ ತಮ್ಮ ಕಂಠ ದಾನ ಮಾಡಲಿದ್ದಾರಂತೆ. ಶಿವರಾಜ್ ಕುಮಾರ್ ಹಾಡುತ್ತಿರುವುದು ಇದೇ ಮೊದಲೇನಲ್ಲ, ಹಲವಾರು ಹಾಡುಗಳು ಇವರ ಕಂಠ ಸಿರಿಯಲ್ಲಿ ಮೂಡಿ ಬಂದಿವೆ. ಇನ್ನೂ ವಿಜಯ್ ಕೂಡ ಅಷ್ಟೆ.. ತಾಕತ್ ಚಿತ್ರದ ಮೂಲಕ ಗಾಯಕರಾಗಿದ್ದಾರೆ. ಹಾಗೆ ಇನ್ನೂ ಕೆಲ ಪ್ರಮುಖ ನಾಯಕರಾದ ದರ್ಶನ್, ಗಣೇಶ್ ಇನ್ನೂ ಹಲವರು ಐತಲಕಡಿ ಚಿತ್ರದಲ್ಲಿ ಅಥಿತಿ ಪಾತ್ರದಲ್ಲಿ ಬಂದು ಹೋಗಲಿದ್ದಾರೆ. ಇವರ ಪಾತ್ರದ ಚಿತ್ರೀಕರಣ ಇನ್ನೂ ನಡೆಯಬೇಕಿದೆ. ಆದಷ್ಟು ಬೇಗ ಚಿತ್ರೀಕರಣ ಮಾಡಿ ಮುಗಿಸಬೇಕು ಎಂಬ ಹಂಬಲ ಕಥೆ, ಚಿತ್ರಕಥೆ ಬರೆದು ಛಾಯಾಗ್ರಾಹಕರು ಮತ್ತು ನಿರ್ದೇಶಕರಾಗಿರುವ ಜೆ.ಜಿ. ಕೃಷ್ಣ ಅವರದ್ದು.