ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿ ನಡೆದ ನೈಜ ಪ್ರೇಮಕಥೆಯನ್ನು ಆಧರಿಸಿದ ಚಿತ್ರ ಎಂದೇ ಬಿಂಬಿಸಿಕೊಂಡಿರುವ ಚೆಲುವಿನ ಚಿತ್ತಾರ ಖ್ಯಾತಿಯ ಅಮೂಲ್ಯ ಅಭಿನಯದ 'ಪ್ರೇಮಿಸಂ' ಚಿತ್ರಕ್ಕೆ ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಅದು ವಿದೇಶದಲ್ಲಿ ನಡೆಯಲಿದೆ. ಉಳಿದಂತೆ ಮಾತುಗಳ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ.
ಅಮೆರಿಕದ ನಯಾಗರಾ ಜಲಪಾತವನ್ನು ಹೋಲುವ ಒಂದು ಜಲಪಾತ ಛತ್ತೀಸ್‌ಘಡದಲ್ಲಿದ್ದು ಅಲ್ಲಿ ಹಾಡೊಂದರ ಚಿತ್ರೀಕರಣವನ್ನು ನಡೆಸಿಕೊಂಡು ಬಂದಿರುವುದು ಚಿತ್ರತಂಡದ ಹೆಗ್ಗಳಿಕೆ. ಕಲ್ಪನಾಶಕ್ತಿ ಪ್ರೊಡಕ್ಷನ್ಸ್ 3ನೇ ಕಾಣಿಕೆಯಾಗಿ ಅರ್ಪಣೆಯಾಗುತ್ತಿರುವ ಈ ಚಿತ್ರದ ನಿರ್ದೇಶಕರು ನೆನಪಿರಲಿ ಖ್ಯಾತಿಯ ರತ್ನಜ.
ಚೆಲುವಿನ ಚಿತ್ತಾರದಲ್ಲಿ ಗಮನ ಸೆಳೆದ ಅಮೂಲ್ಯಾರೊಂದಿಗೆ ಚೇತನ್ ಚಂದ್ರ ಹಾಗೂ ವರುಣ್ ನಾಯಕರಾಗಿ ನಟಿಸಿದ್ದು, ಇವರಿಬ್ಬರೂ ಹೊಸಮುಖಗಳೆನ್ನುವುದು ಇಲ್ಲಿ ಗಮನಾರ್ಹ. ಎಂದಿನಂತೆ ಹಂಸಲೇಖಾರೇ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದು, ಅಜಯ್ ಗೌಡ ಚಿತ್ರ ನಿರ್ಮಿಸಿದ್ದಾರೆ.
ರತ್ನಜರ ನೆನಪಿರಲಿ ಸೂಪರ್ ಹಿಟ್ ಆಗಿದ್ದರೆ, ಹೊಂಗನಸು ವಿಫಲವಾಗಿತ್ತು. ಈಗ ಪ್ರೇಮಿಸಂ ಯಾವ ಸ್ಥಾನವನ್ನು ರತ್ನಜರಿಗೆ ಕಲ್ಪಿಸಿಕೊಡಲಿದೆ ಎಂಬುದನ್ನು ನೋಡಲಿಕ್ಕೆ ಇನ್ನಷ್ಟು ದಿನ ಕಾಯಲೇಬೇಕು.