20 ವರ್ಷಗಳ ನಂತರ 'ಎರಡನೇ ಮದುವೆ'ಯತ್ತ ಅನಂತ್‌ನಾಗ್ -ಸುಹಾಸಿನಿ
MOKSHA
ಅನಂತನಾಗ್-ಸುಹಾಸಿನಿ ಅಭಿನಯದ ಹೊಸನೀರು ಚಿತ್ರವು ಹೊರಬಂದು ಇಪ್ಪತ್ತು ವರ್ಷಗಳಾಗಿವೆ. ಕೆ.ವಿ. ಜಯರಾಂ ನಿರ್ದೇಶನದ ಈ ಚಿತ್ರದಲ್ಲಿ ಪತಿ ಪತ್ನಿಯರ ನಡುವಿನ ಇಗೋವನ್ನು ಮನೋಜ್ಞವಾಗಿ ಮನಸ್ಸಿಗೆ ನಾಟುವಂತೆ ಚಿತ್ರಿಸಲಾಗಿತ್ತು.
ಅದೇ ಅನಂತ್- ಸುಹಾಸಿನಿ ಜೋಡಿ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದೆ. ದಿನೇಶ್ ಬಾಬು 'ಅಭಿನಯದ ಎರಡನೆ ಮದುವೆ' ಎಂಬ ಹಾಸ್ಯಪ್ರಧಾನ ಚಿತ್ರದಲ್ಲಿ ಅವರಿಬ್ಬರೂ ತೊಡಗಿಸಿಕೊಂಡಿದ್ದು, ಅದು ಚಿತ್ರರಸಿಕರನ್ನು ರಂಜಿಸುವ ಎಲ್ಲಾ ರಂಜನೀಯ ಅಂಶಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ.
ಕಾಲನ ವಶಕ್ಕೆ ಸಿಲುಕಿದ ಗಂಡನೊಬ್ಬ ಇದ್ದ ಕೆಲಸವನ್ನೂ ಕಳೆದುಕೊಂಡು ಪಡುವ ಪಾಡು, ಇದರ ಪರಿಣಾಮವಾಗಿ ಅಡುಗೆಮನೆಯ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿಬರುವ ಪಡಿಪಾಟಲು ಇವೆಲ್ಲವನ್ನೂ ಚಿತ್ರವು ಒಳಗೊಂಡಿದೆಯಂತೆ. ನಿರ್ದೇಶಕ ದಿನೇಶ್ ಬಾಬುಗೆ ಉತ್ತಮ ಹಾಸ್ಯಪ್ರಜ್ಞೆಯಿದೆ ಎಂಬುದನ್ನು ಸುಪ್ರಭಾತ, ಹೆಂಡ್ತಿಗ್ಹೇಳ್ಬೇಡಿ, ಹೆಂಡ್ತಿಗ್ಹೇಳ್ತೀನಿ, ನಾನೇನು ಮಾಡ್ಲಿಲ್ಲ ಇವೇ ಮೊದಲಾದ ಚಿತ್ರಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅವುಗಳ ಸಾಲಿಗೆ ಈ ಚಿತ್ರವೂ ಸೇರಲಿದೆ ಎಂಬುದು ಚಿತ್ರತಂಡದ ಅಭಿಮತ.
'ನೆನಪಿರಲಿ' ಚಿತ್ರದ ಪ್ರೇಮ್ ಹಾಗೂ 'ಜೋಗಿ' ಖ್ಯಾತಿಯ ಜೆನ್ನಿಫರ್ ಕೋತ್ವಾಲ್ ಈ ಚಿತ್ರದಲ್ಲಿ ಯುವ ಪ್ರೇಮಿಗಳಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಶರಣ್, ತಾರಾ, ರಂಗಾಯಣ ರಘು, ನವ್ಯಾ, ಸಿಂಧು ಇವರೇ ಮೊದಲಾದ ಕಲಾವಿದರಿರುವ ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ರಾಜೇಂದ್ರ ಕಾರಂತ್. ಜೈಪಾಲನ್ ಸಂಗೀತ ನಿರ್ದೇಶಕರು. ಚಿತ್ರದ ಕಥೆ- ಚಿತ್ರಕಥೆ- ಛಾಯಾಗ್ರಹಣ- ನಿರ್ದೇಶನ ಇವೆಲ್ಲವೂ ದಿನೇಶ್ ಬಾಬುರವರದ್ದು, ಎಂದಿನಂತೆ!!