'ಹೆಣ್ಣಿಗೆ ಸೀರೆ ಯಾಕೆ ಚಂದ...' ಎಂದು ಹಾಡಿದ ರವಿಚಂದ್ರನ್ ವಾಕ್ಯವನ್ನು ಅಪ್ಪಟವಾಗಿ ಪಾಲಿಸಿದ್ದಾರೆ ತಮಿಳು, ತೆಲುಗಿನ ಹಾಟ್ ತಾರೆ ನಯನತಾರಾ. ಹೌದು. ನಯನತಾರಾ ಕನ್ನಡಕ್ಕೆ ಬರುವುದೆಂದು ಮೊನ್ನೆ ಮೊನ್ನೆ ಸುದ್ದಿಯಾಗಿತ್ತು. ರವಿಚಂದ್ರನ್ ಅವರ 'ಕೀಚಕ' ಚಿತ್ರಕ್ಕೆ ನಾಯಕಿಯಾಗಿ ನಯನತಾರಾ ಅವರು ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಆ ವಾರ್ತೆಯೀಗ ಸುಳ್ಳಾಗಿದೆ. ಚಿತ್ರಕ್ಕೆ 'ಒಕೆ' ಎಂದಿದ್ದ ನಯನತಾರಾ ಈಗ ಚಿತ್ರದಲ್ಲಿ ಈಜುಡುಗೆ ಧರಿಸಲಿದೆ ಎಂಬ ಕಾರಣಕ್ಕೆ ರವಿಚಂದ್ರನ್ ಅವರಿಗೆ 'ನೋ' ಎಂದಿದ್ದಾಳೆ. ಅಷ್ಟೇ ಅಲ್ಲ, ನಾನಿನ್ನು ಮುಂದೆ ಸೀರೆಯೇ ಉಡುತ್ತೇನೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ನಯನತಾರಾಗೆ ಈಗ ಜ್ಞಾನೋದಯವಾಗಿದ್ದೇಕೋ ಗೊತ್ತಿಲ್ಲ. ಈ ಹಿಂದೆ ಬಿಕಿನಿಯಲ್ಲಿ ಹಾಟ್ ಆಗಿ ಕಂಗೊಳಿಸಿದ್ದ ನಯನತಾರಾ ಕನ್ನಡದಲ್ಲಿ ಈಜುಡುಗೆಗೆ ನೋ ಎಂದಿದ್ದೇ ಹಲವರಿಗೆ ಆಶ್ಚರ್ಯದ ಸರಕಾಗಿದೆ. ಚಿತ್ರ ನಿರ್ಮಾಪಕ ಮುನಿರತ್ನ ಹೇಳುವಂತೆ, ರವಿಚಂದ್ರನ್ ಅವರು ನಯನತಾರಾ ಜತೆಗೆ ಫೋನ್‌ನಲ್ಲಿ ಮಾತಾಡಿದ್ದಾರೆ. ಚಿತ್ರಕಥೆ ಕೇಳಿ ನಯನತಾರಾ ಥ್ರಿಲ್ಲಾಗಿದ್ದರು. ಹಾಗಾಗಿ ಬಹುತೇಕ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿತ್ತು ಎನ್ನುತ್ತಾರೆ.
ಇಷ್ಟೆಲ್ಲಾ ಒಕೆ ಆದ ಮೇಲೆ ಮತ್ತೆ ನಯನತಾರಾಗೆ ಚಿತ್ರದಲ್ಲಿ ಈಜುಡುಗೆ ಧರಿಸಬೇಕಾಗುತ್ತದೆ ಎಂದು ತಿಳಿಯಿತಂತೆ. ಅದಕ್ಕಾಗಿ ಚಿತ್ರದಲ್ಲಿ ನಟಿಸೋದಿಲ್ಲ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ, ಇನ್ನು ಮುಂದೆ ನಾನು ಸೀರೆಯುಟ್ಟೇ ನಟಿಸಲಿದ್ದೇನೆ ಎಂದೂ ಸಾರಿದ್ದಾಳೆ. ಹಾಗಾಗಿ ಹೆಣ್ಣಿಗೆ ಸೀರೆ ಯಾಕೆ ಚಂದ... ಎಂದು ತನ್ನ ಚಿತ್ರದಲ್ಲಿ ಹಾಡುತ್ತಾ ಸೊಂಟದಳತೆ ಅಳೆದಿದ್ದ ರವಿಚಂದ್ರನ್ ಈಗ ತನ್ನ ಹಾಡು ತನಗೇ ಮುಳುವಾಯಿತೇ ಅನ್ನುತ್ತಿದ್ದಾರೆ ಎಂಬುದು ಗಾಂಧಿನಗರದಿಂದ ಕೇಳಿಬರುತ್ತಿರುವ ಮಾತು!!!
MOKSHA
ಅದೇನೇ ಇರಲಿ.., ಅಂದೆಲ್ಲಾ ಬಿಕಿನಿ ಧರಿಸಿಕೊಂಡು ಚಿತ್ರರಂಗದಲ್ಲಿ ಓಡಾಡಿಕೊಂಡಿದ್ದ ನಯನತಾರಾಗೆ ಇದ್ದಕ್ಕಿದ್ದಂತೆ ಹೀಗೆ ಜ್ಞಾನೋದಯವಾಗಿದ್ದಾದರೂ ಏಕೆ ಎಂದು ಹಲವರು ತಲೆಕೆರೆದುಕೊಳ್ಳುತ್ತಿದ್ದಾರೆ. ನಯನತಾರಾ ಹಾಗೂ ಭಾರತದ ಮೈಕಲ್ ಜಾಕ್ಸನ್ ಎಂಬ ಹೆಗ್ಗಳಿಕೆಯ ಪ್ರಭುದೇವ ನಡುವಿನ ಸರಸ ಸಲ್ಲಾಪ ಇಂದು ನಿನ್ನೆಯದಲ್ಲ. ಪ್ರಭುದೇವ ಹಾಗೂ ನಯನತಾರಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ಹಾಗಾಗಿ ನಯನತಾರಾ ತುಂಬ ಚಿತ್ರಗಳಿಗೆ ಒಕೆ ಅನ್ನುತ್ತಿಲ್ಲ ಹಾಗೂ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಿಬಿಡುವ ಯೋಚನೆಯಲ್ಲಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.
ಇನ್ನೂ ಕೆಲವು ಮೂಲಕಗಳ ಪ್ರಕಾರ, ಪ್ರಭುದೇವ್ ಅವರನ್ನು ನಯನತಾರಾ ಮದುವೆಯಾಗುತ್ತಿರೋದರಿಂದ ಮುಂದೆ ಸೀರೆಯುಟ್ಟಷ್ಟೇ ಅವರು ಚಿತ್ರರಂಗದಲ್ಲಿರಲಿದ್ದಾರಂತೆ ಎಂದೂ ಹೇಳುತ್ತದೆ. ಯಾವುದು ನಿಜವೋ ಗೊತ್ತಿಲ್ಲ. ಆದರೆ ನಯನತಾರಾ ಪ್ರಭುದೇವ ಅವರಿಗೆ ಮನಸು ಕೊಟ್ಟಿದ್ದು ಮಾತ್ರ ನಿಜ. ಹಾಗಂತ ಆಕೆಯೇ ಇತ್ತೀಚೆಗೆ ಹೇಳಿಕೊಂಡಿದ್ದಳು. ಆಕೆ ತನ್ನ ಕೈಯಲ್ಲಿ ಪಿ ದೇವ್ ಎಂದು ಹಚ್ಚೆ ಹಾಕಿದ್ದನ್ನು ನೋಡಿ ಸಂದರ್ಶಕರೊಬ್ಬರು ಹಾಗೇಕೆ ಕೈಗೆ ಹಚ್ಚೆ ಹಾಕಿಸಿದ್ದೀರಿ ಎಂದಿದ್ದಕ್ಕೆ, ಆತನನ್ನು ನಾನು ತುಂಬ ಪ್ರೀತಿಸುತ್ತೇನೆ. ಅದಕ್ಕೇ ಹಾಕಿಸಿದೆ ಎಂದು ಸಂದರ್ಶಕರ ಬಾಯಿಗೆ ಬೀಗ ಜಡಿದಿದ್ದರು. ಪ್ರಭುದೇವ್ ಕೂಡಾ ನಯನತಾರಾಳನ್ನು ಬಾಲಿವುಡ್‌ಗೆ ಪರಿಚಯಿಸಲು ಮುಂಬೈನಲ್ಲಿ ಭಾರೀ ಓಡಾಡುತ್ತಿರುವುದೂ ಕೂಡಾ ಯಾರಿಗೂ ತಿಳಿಯದೆ ಇರುವ ವಿಚಾರವಾಗಿ ಉಳಿದಿಲ್ಲ.
ಅಂದಹಾಗೆ, ಕೀಚಕ ಚಿತ್ರತಂಡ ಆ ಜಾಗಕ್ಕೆ ಬಿಂದಾಸ್ ಹಾಟ್ ಹುಡುಗಿಯ ತಲಾಶ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ನಷ್ಟ ಯಾರಿಗೆ? ಪ್ರೇಕ್ಷಕರಿಗಾ? ಕೀಚಕನಿಗಾ.. ಅಥವಾ ರವಿಚಂದ್ರನ್‌ಗಾ...?