ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗುರುಕಿರಣ್ ಎಂಬ ಹಾಟ್‌ಕೇಕ್!! (Guru Kiran | A | Upendra | Birthday)
ಸುದ್ದಿ/ಗಾಸಿಪ್
Feedback Print Bookmark and Share
 
ಹೌದು. ಇದು ಉತ್ಪ್ರೇಕ್ಷೆಯಲ್ಲ, ಅಪ್ಪಟ ಹದಿನಾರಾಣೆ ಸತ್ಯ. ಗುರುಕಿರಣ್ ಇದ್ದಲ್ಲಿ ಸಂಚಲನೆಯಿರುತ್ತದೆ, ಉತ್ಸಾಹವಿರುತ್ತದೆ, ಗಡಿಯಾರದ ಮುಳ್ಳುಗಳು ಎಂದಿನ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸುತ್ತುತ್ತವೆ. ಇವರು ಹಾಡುತ್ತಾರೆ, ಕುಣಿಯುತ್ತಾರೆ, ನಟಿಸುತ್ತಾರೆ, ಸಂಗೀತ ನಿರ್ದೇಶನ ಮಾಡುತ್ತಾರೆ, ಸಂಗೀತ ಕಾರ್ಯಕ್ರಮದ ತೀರ್ಪುಗಾರನ ಪಟ್ಟವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಒಟ್ಟಿನಲ್ಲಿ ಚುರುಕುತನಕ್ಕೆ ಪರ್ಯಾಯವೇ ಗುರುಕಿರಣ್.
NRB

ಮಂಗಳೂರಿನ ಬಾರ್/ಹೊಟೇಲಿನಲ್ಲಿನ ಸಂಗೀತದ ಬ್ಯಾಂಡ್‌ನಲ್ಲಿ ಹಾಡುಗಾರರಾಗಿದ್ದುಕೊಂಡು, ನಂತರ ಭವಿಷ್ಯವನ್ನರಸಿ ಬೆಂಗಳೂರಿಗೆ ಬಂದು ಯಶಸ್ಸಿನ ಕೀರೀಟಕ್ಕೆ ಒಂದೊಂದೇ ಗರಿಗಳನ್ನು ಸಿಕ್ಕಿಸಿಕೊಳ್ಳುತ್ತಲೇ ಹೋಗುತ್ತಿರುವ ಅವರ ಕಥೆಯೇ ಒಂದು ಸಿನಿಮಾಕ್ಕೆ ವಸ್ತುವಾಗಬಲ್ಲದು.

ಮೌನಹೋರಾಟ, ನಿಷ್ಕರ್ಷ ಇವೇ ಮೊದಲಾದ ಚಿತ್ರಗಳಲ್ಲಿ ಸೈಡ್ ರೋಲ್‌ಗಳನ್ನು ಮಾಡಿಕೊಂಡೇ ಇರುತ್ತಿದ್ದ ಗುರುಕಿರಣ್ ಪ್ರತಿಭೆಯನ್ನು ಮೊದಲು ಗುರುತಿಸಿದವರು ಉಪೇಂದ್ರ. ಅಂದು ಅವರು ಗುರುಕಿರಣ್‌ರಿಗೆ 'ಎ' ಚಿತ್ರದಲ್ಲಿ ಅವಕಾಶ ನೀಡದೇ ಇರುತ್ತಿದ್ದರೆ, ಪ್ರಾಯಶಃ ಗುರುಕಿರಣ್ ಎಲೆಮರೆಯ ಕಾಯಾಗೇ ಉಳಿಯಬೇಕಾಗುತ್ತಿತ್ತೋ ಏನೋ.

ಇಷ್ಟೆಲ್ಲಾ ವಿಷಯಗಳು ಈಗ ನೆನಪಿಗೆ ಬಂದುದೇಕೆ ಗೊತ್ತಾ? ಆಪ್ತಮಿತ್ರ ಚಿತ್ರದ ಛಾಯೆಯಲ್ಲೇ ನಿರ್ಮಿಸಲಾಗಿರುವ ಚಿತ್ರ ಎಂದು ಹೇಳಲಾಗುತ್ತಿರುವ ಆಪ್ತರಕ್ಷಕ ಚಿತ್ರದ ಹಾಡುಗಳು. ಆಪ್ತಮಿತ್ರ ಚಿತ್ರದ 'ರಾ ರಾ ಸರಸಕು ರಾ ರಾ' ಎಂಬ ಹಾಡು ಎಂಥಾ ಅದ್ಬುತ ಸಂಚಲನೆಯನ್ನು ಹುಟ್ಟಿಹಾಕಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಅದೇ ಧಾಟಿಯ ಮತ್ತು ಅದಕ್ಕಿಂತ ಉತ್ತಮವಾದ ಮತ್ತೊಂದು ಹಾಡನ್ನು ಆಪ್ತರಕ್ಷಕ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ಗುರುಕಿರಣ್. ಆ ಹಾಡನ್ನು ಚಿತ್ರದ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಬಹುದಾದ್ದರಿಂದ ಅದನ್ನಿನ್ನೂ ಪ್ರದರ್ಶಿಸುತ್ತಿಲ್ಲ ಎಂದು ಹೇಳುತ್ತಿವೆ ಚಿತ್ರದ ಮೂಲಗಳು.

ಆಗ ಕಷ್ಟಪಟ್ಟಿದ್ದಕ್ಕೆ ಸಾರ್ಥಕ ಎಂಬಂತೆ ಈಗ ಸುಖದ ಜೀವನ ಸಾಗಿಸುತ್ತಿರುವ ಗುರುಕಿರಣ್ ಹೀಗೆಯೇ ನಗುತ್ತಿರಲಿ ಹಾಗೂ ಇನ್ನಷ್ಟು, ಮತ್ತಷ್ಟು ಸುಂದರ-ಸುಮಧುರ ಹಾಡುಗಳನ್ನು ನಮಗೆಲ್ಲರಿಗೂ ಮೊಗೆಮೊಗೆದು ತುಂಬಿಕೊಡಲಿ ಎಂದು ಆಶಿಸೋಣವೇ? ಇತ್ತೀಚೆಗಷ್ಟೇ ಅವರು ಹುಟ್ಟುಹಬ್ಬ ಆಚರಿಸಿಕೊಂಡರು ಅವರಿಗೆ 'ಬಿಲೇಟೆಡ್ ಬರ್ತ್ಡೇ ವಿಷಸ್' ಎನ್ನೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗುರುಕಿರಣ್, ಹಾಟ್ಕೇಕ್, ಎ, ಉಪೇಂದ್ರ