ಭಕ್ತ ಚಿತ್ರದ ನಂತರ ನಟ ಅಗ್ನಿ ನಿಜಕ್ಕೂ ಕಾರ್ ಏರುತ್ತಾರೆ ಎಂದು ಅವರ ಆಪ್ತರು ಭಾವಿಸಿದ್ದರು. ಆದರೆ ಭಕ್ತ ಪ್ಲಾಪ್ ಆಯ್ತು. ಹಾಗಂತ ಅವರು ತಮ್ಮ ಪ್ರಯತ್ನ ಬಿಟ್ಟಿಲ್ಲ. ಸೋಲು ಇದ್ದದ್ದೆ, ಗೆಲವು ಸಹ ಬಂದೇ ಬರುತ್ತದೆ ಎಂದುಕೊಂಡರೋ, ಅಥವಾ ಕಾರೇರುವ ಮೊದಲು ಸೈಕಲ್ ತುಳಿದರೆ ಒಳ್ಳೆಯದೆಂದುಕೊಂಡರೋ ಗೊತ್ತಿಲ್ಲ ಒಟ್ಟಾರೆ ಅಗ್ನಿ ಈಗ ಸೈಕಲೇರಿದ್ದಾರೆ. ಅಗ್ನಿ ಉರುಫ್ ಶಿವಾರ್ಜುನ್ ಇದೀಗ 'ಸೈಕಲ್' ಚಿತ್ರದ ನಾಯಕ ಪ್ಲಸ್ ನಿರ್ದೇಶಕ.
ಪಿಯುಸಿ ಚಿತ್ರದ ನಾಯಕಿ ಹರ್ಷಿಕ ಪೂಣಚ್ಚ ಈ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮೊದಲು ಸೈಕಲ್ ಚಿತ್ರಕ್ಕೆ ಫೆಬ್ರವರಿ 14 ಎಂದು ಹೆಸರಿಡಲಾಗಿತ್ತು. ಶೀರ್ಷಿಕೆಯಿಂದ ಕಥೆ ತಿಳಿದು ಬಿಡುತ್ತೆ ಅಂದುಕೊಂಡು ನಂತರ ಮರು ನಾಮಕರಣ ಮಾಡಲಾಯಿತು.
ಚಿತ್ರದಲ್ಲಿ ನಾಯಕಿ ಮುಸ್ಲಿಂ ಹುಡುಗಿ. ಕಾಕತಾಳೀಯವೆಂಬಂತೆ ಹರ್ಷಿಕಾ ಶಿವರಾಜ್ ಕುಮಾರ್ ನಾಯಕತ್ವದ 'ತಮಸ್ಸು' ಚಿತ್ರದಲ್ಲೂ ಸಹ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಂತ ಇದು ಕೋಮು ವಿವಾದಕ್ಕೆ ಸಂಬಂಧಿಸಿದ ಚಿತ್ರವಲ್ಲ. ಪ್ರೀತಿ ಮೇಲೋ ಧರ್ಮ ಮೇಲೋ ಎಂದು ತೋರಿಸುವುದು ನಮ್ಮ ಉದ್ದೇಶ ಎಂಬುದು ನಾಯಕ ಕಮ್ ನಿರ್ದೇಶಕರ ವಿವರಣೆ.
ಭಕ್ತ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಈ ಚಿತ್ರಕ್ಕೂ ನಿರ್ಮಾಪಕರು. ಈಗಾಗಲೇ ಶೇ.60 ರಷ್ಟು ಶೂಟಿಂಗ್ ಮುಗಿದಿದೆ. ಉಳಿದದ್ದು ನಡೆಯಬೇಕಿದೆ. ಭಕ್ತದ ತಪ್ಪುಗಳನ್ನು ಸರಿಪಡಿಸಲು ಅವರು ಸೈಕಲ್ ಹತ್ತಿದ್ದಾರೆ. ಸೈಕಲ್ ಹಿಟ್ ಆದರೆ ಅಗ್ನಿ ಕಾರ್ ಹತ್ತುತ್ತಾರೋ ಗೊತ್ತಿಲ್ಲ.