ಯಾರು ಹಿತವರು ನಾಲ್ವರೊಳಗೆ?

ಈ ಶುಕ್ರವಾರ ರಾಜ್ಯಾದ್ಯಂತ ಬರೋಬ್ಬರಿ ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹಲವು ಸಮಯದ ನಂತರ ನಾಲ್ಕು ಚಿತ್ರಗಳು ಒಟ್ಟಿಗೆ ರಿಲೀಸ್ ಆಗುತ್ತಿವೆ. ಅವುಗಳಾವುವು ಎಂದರೆ, '10ನೇ ಕ್ಲಾಸ್ ಎ ಸೆಕ್ಷನ್', 'ಮೂರು ಗುಟ್ಟು,ಒಂದು ಸುಳ್ಳು, ಒಂದು ನಿಜ', 'ಭಯ ಡಾಟ್ ಕಾಂ' ಮತ್ತು ಹಿಟ್ ಹಾಡುಗಳ ಪ್ಯಾಕೇಜ್ ಹೊಂದಿರುವ 'ಪರಿಚಯ'.ತರುಣ್‌ಗೆ ಪರಿಚಯ ಚಿತ್ರ ಉತ್ತಮ ಬ್ರೇಕ್ ನೀಡುತ್ತದೆ ಎಂದು ಗಾಂಧಿನಗರ ಲೋಚಗುಡುತ್ತಿದೆ. ಸುದೀರ್ಘ ಕಾಲದ ನಂತರ ಮುಂದೂಡುತ್ತಲೇ ಬಂದಿದ್ದ ಪರಿಚಯ ಚಿತ್ರ ಅಂತೂ ತೆರೆಕಾಣಲಿದೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಹಾಡುಗಳೂ ಈಗಾಗಲೇ ಹಿಟ್ ಆಗಿರೋದ್ರಿಂತ ಚಿತ್ರ ಖಂಡಿತವಾಗಿಯೂ ಪ್ರೇಕ್ಷಕರ ಮನಗೆಲ್ಲುತ್ತದೆ ಎಂಬ ಆತ್ಮ ವಿಶ್ವಾಸ ನಿರ್ದೇಶಕ ಸಂಜಯ್ ಅವರದ್ದು.ಉಳಿದಂತೆ 10ನೇ ಕ್ಲಾಸ್ ಎ ಸೆಕ್ಷನ್ ಚಿತ್ರ ಚೆಲುವಿನ ಚಿತ್ತಾರದ ಸೈಡ್ ಎಫೆಕ್ಟ್ ಅಂತ ಗಾಂಧಿನಗರದ ತುಂಬೆಲ್ಲ ಮಾತಾಡಿಕೊಳ್ಳುತ್ತಿದ್ದಾರೆ. ಹೊಸಬರದೇ ರಿಮೇಕ್ ಚಿತ್ರವಿದು. ಭಯ ಡಾಟ್ ಕಾಂ ಚಿತ್ರವನ್ನು ಭಯ ಹುಟ್ಟಿಸುವುದರಲ್ಲಿ ಎತ್ತಿದ ಕೈಯಾದ ವೇಮಗಲ್ ಜಗನ್ನಾಥ್ ನಿರ್ದೇಶಿಸಿದ್ದು ಹೆಸರೇ ಚಿತ್ರದಲ್ಲೇನಿದೆ ಎಂದು ಹೇಳುತ್ತಿದೆ.ಕೋಮಲ್ ಹಾಗೂ ರಮೇಶ್ ತಾರಾಗಣದ ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ ಚಿತ್ರ ಪಕ್ಕಾ ಕಾಮಿಡಿಯಂತೆ. ಕೋಮಲ್ ಹೇಳುವಂತೆ, ರಮೇಶ್ ಅವರಂಥ ಪ್ರತಿಭಾನ್ವಿತ ನಟನ ಜೊತೆಗೆ ಈ ಚಿತ್ರದಲ್ಲಿ ಅಭಿನಿಸಿರೋದೇ ದೊಡ್ಡ ಖುಷಿ. ಜತೆಗೆ ನಿರ್ದೇಶಕ ದಿನೇಶ್ ಬಾಬು ಕೂಡಾ ಅತ್ಯಂತ ಪ್ರತಿಭಾನ್ವಿತರು ಎನ್ನುತ್ತಾರೆ. ಚಿತ್ರದಲ್ಲಿ ರಮೇಶ್ ಪಕ್ಕಾ ಮಂಡ್ಯ ಭಾಷೆಯಲ್ಲಿ ಮಾತಾಡತ್ತಾರಂತೆ. ನಾಲ್ಕು ದಿನಗಳ ಕಾಲ ಮಂಡ್ಯ ಭಾಷೆಯಲ್ಲಿ ಮಾತಾಡಲು ಸೈಕಲ್ ಹೊಡೆದ ರಮೇಶ್ ಕೊನೆಗೂ ಪಕ್ಕಾ ಮಂಡ್ಯ ಭಾಷೆ ಮಾತಾಡುವಲ್ಲಿ ಸಫಲರಾಗಿದ್ದಾರಂತೆ. ರಮೇಶ್‌ಗೆ ಮಂಡ್ಯ ಭಾಷ ಹೇಳಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಳವಳ್ಳಿ ಸಾಯಿ ಕೃಷ್ಣರಂತೆ. ಒಟ್ಟಾರೆ ಯಾರು ಹಿತವರು ನಿಮಗೆ ಈ ನಾಲ್ವರೊಳಗೆ? ಎಂಬ ಪ್ರಶ್ನೆಗೆ ಪ್ರೇಕ್ಷಕರೇ ಉತ್ತರಿಸಲಿದ್ದಾರೆ.