ಹದಿ ಹರೆಯದವರು ನಾಯಕ ನಾಯಕಿ ಆಗೋದನ್ನ ನೋಡಿದ್ದೇವೆ. ಮಧ್ಯ ವಯಸ್ಸಿನ ನಾಯಕನಿಗೂ ಅದೇ ಹದಿನೆಂಟರ ಚೆಲುವೆ ನಾಯಕಿಯಾಗೋದಂತೂ ಚಿತ್ರರಂಗದಲ್ಲಿ ಸಾಮಾನ್ಯ. ಅದೇ ರೀತಿ ಮಧ್ಯ ವಯಸ್ಕರು ಹೀರೊ ಆಗಿದ್ದಕ್ಕೆ ಅಮಿತಾಬ್ , ವಿಷ್ಣುವರ್ಧನ್, ರಜನೀಕಾಂತ್ ಹೀಗೆ ಹೀರೋಗಳ ಪಟ್ಟಿಯೇ ಇದೆ. ಆದರೆ ತೊಂಬತ್ತೆಂಟರ ತಾತ, ಎಂಬತ್ತೆಂಟರ ಅಜ್ಜಿ ನಾಯಕ ನಾಯಕಿಯಾಗಿದ್ದನ್ನು ನೋಡಿದ್ದೀರಾ?
ನಗಬೇಡಿ. ಹೌದು. ಇದೀಗ ಅದಕ್ಕೂ ಕಾಲ ಬಂದಿದೆ. ಇಲ್ಲಿದ್ದಾರೆ ಆ ವೃದ್ಧ ದಂಪತಿ. ಹೆಸರು ವೀರಭದ್ರಪ್ಪ ಹಾಗೂ ಪಾರ್ವತಮ್ಮ. ಇವರಿಗೂ ಸಿನಿಮಾಗೂ ಹೇಗೆ ನಂಟು ಎಂದು ಕೇಳಿದ್ರಾ? ಅವರ ಅಳಿಯ ನಾಗರಾಜು ಆನಂದಗೋಕುಲ ಚಿತ್ರದ ನಿರ್ಮಾಪಕರು. ವೃದ್ಧರಿಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಅನುಭವಿಸುವ ಕಷ್ಟವನ್ನು ಇಲ್ಲಿ ಚಿತ್ರೀಕರಿಸಲಾಗಿದೆಯಂತೆ.
ನಿಮಗೆ ಅಭಿನಯದಲ್ಲಿ ತರಬೇತಿ ಇದೆಯಾ ಎಂಬ ಪ್ರಶ್ನೆಗೆ ದಂಪತಿ ಕೊಡುವ ಉತ್ತರ, ಅಳಿಯಂದ್ರು ಕರೆದ್ರು , ಸಾರ್ವಜನಿಕವಾಗಿ ಒಳ್ಳೇದೇ ಆಗುತ್ತೆ ಅಂತ ಬಂದ್ವಿ ಅಂತಾರೆ. ಚಿತ್ರದಲ್ಲಿ ಇವರಿಬ್ಬರ ಒಂದು ಹಾಡು ಕೂಡ ಇದೆ. ಈ ಚಿತ್ರಕ್ಕೆ ಆರ್.ನಾಗೇಂದ್ರ ರಾವ್ ನಿರ್ದೇಶನವಿದ್ದು, ಕತೆಯೂ ಅವರದ್ದೇ. ಇಡೀ ಸಿನಿಮಾದಲ್ಲಿ 110 ಕಲಾವಿದರಿದ್ದಾರೆ. ರಾಜನ್ ಸಂಗೀತವಿದ್ದು ಆರು ಹಾಡುಗಳಿವೆ. ಇದು ಲಲಿತ ಅವರ `ಕೈ ಹಿಡಿದು ನಡೆಸೆನ್ನನು` ಕಾದಂಬರಿ ಆಧಾರಿತ ಚಿತ್ರ.