ಸರ್ಕಲ್ಲಿನ ಮಸಾಲೆ ಪುರಿ, ಶೆಟ್ಟರಂಗಡಿಯ ಚುರುಮುರಿ, ಬಿಡಿಎ ಕಾಂಪ್ಲೆಕ್ಸಿನ ಮಲ್ಲಿಗೆ ಇಡ್ಲಿ... ವಾಹ್ , ನೆನೆಸಿಕೊಂಡರೆ ನಾಲಗೆ ತಂತಾನೆ ಚಪ್ಪರಿಸುತ್ತೆ! ವೀಕೆಂಡ್ ಬಂದ್ರೆ ಪದೇ ಪದೇ ಚಾಮುಂಡಿ ಬೆಟ್ಟ ಎರೋ ಆಟ, ಮೈಸೂರು ಪ್ಯಾಲೇಸ್ ಮುಂದೆ ಗಂಟೆಗಟ್ಟಲೆ ಗಪ್‌ಚುಪ್ ಆಗಿ ಕೂರೋದು, ಇವುಗಳ ಮಜಾನೇ ಒಂಥರಾ. ಹೀಗೆಲ್ಲ ಹೇಳೋದು ನಾವಲ್ಲ. ಅದೇ ಅಂದು ನೆನಪಿರಲಿ ಎಂಬ ಹಿಟ್ ಚಿತ್ರದಲ್ಲಿ ಮುಖದೋರಿದ್ದಳಲ್ಲ ಅದೇ ವರ್ಷಾಳ ಪ್ರಪಂಚ!
ನಿರೂಪಕಿಯಾಗಿ, ರೇಡಿಯೋ ಜಾಕಿಯಾಗಿ ಅದಕ್ಕೂ ಮೊದಲು 'ನೆನಪಿರಲಿ' ಹಿಟ್ ಸಿನಿಮಾದ ಹಿರೋಯಿನ್ ಆಗಿ ಕನ್ನಡಿಗರಿಗೆ ವರ್ಷಾ ಪರಿಚಿತಳು. ಈಕೆಗೆ ಕಾಲುಗಂಟೆಗೆ ಒಂದು ಬಾರಿನಾದ್ರೂ ಕನ್ನಡಿ ನೋಡದಿದ್ರೆ ಸಮಾಧಾನಾನೆ ಆಗಲ್ವಂತೆ. ಅವಳ ಮನೆಯ ಕಬೋರ್ಡುಗಳಲೆಲ್ಲ ಹೊಸ ಹ್ಯಾಂಡ್ ಬ್ಯಾಗುಗಳೇ ತುಂಬಿ ಹೋಗಿವೆಯಂತೆ. ಉಪ್ಪಿನಕಾಯಿ ಎಂದರೆ ನನಗೆ ಪಂಚಪ್ರಾಣ ಎನ್ನುವ ವರ್ಷಾ, ಮನೆನಲ್ಲಿ ಮಿನಿ ಲೈಬ್ರರಿಯನ್ನೇ ಇಟ್ಟುಕೊಂಡಿದ್ದಾರಂತೆ. ಯಾಕೆಂದ್ರೆ, ವರ್ಷಾಗೆ ರೊಮ್ಯಾಂಟಿಕ್ ಕಾದಂಬರಿ ಅಂದ್ರೆ ಅದರಲ್ಲೆ ಮುಳುಗಿ ಹೋಗೋವಷ್ಟು ಲವ್ ಅಂತೆ!
ಯಾಪ್ಪಾ ಶಿವನೇ ಅಂತೀರಾ, ಇರ್ಲಿ ಬಿಡಿ ಇಷ್ಟೆಲ್ಲಾ ಆಕೆ ತನ್ನ ಇಷ್ಟಾನಿಷ್ಟಗಳನ್ನು ಹೇಳೋವಾಗ ಆಕೆಯನ್ನು ನೋಡಿದ ಎಲ್ಲರಿಗೂ ಒಂದು ಸಣ್ಣ ಡೌಟು ಖಂಡಿತ. ಡೌಟು ಕ್ಲೀಯರ್ ಮಾಡಲೆಂದು ಆಕೆಯಲ್ಲೇ ನೇರವಾಗಿ, ಅದೆಲ್ಲಾ ಸರಿ, ಸಿಕ್ಕಿದ್ದೆಲ್ಲ ತಿನ್ನೋ ನೀವು ಯಾಕೆ ಇನ್ನೂ ದಪ್ಪ ಆಗಿಲ್ಲ? ಅಂದ್ರೆ, ಎಲ್ಲಾ ಜಿಮ್ ಕಣ್ರೀ, ಜಿಮ್ ವರ್ಕೌಟ್ ಪ್ರಭಾವ ಅಂತಾಳೆ.
ಹಾಂ, ಅಂದ ಹಾಗೆ ವರ್ಷಾ ಮದುವೆ ಆಗುವ ಹುಡುಗ ಆರಡಿ, ಒಂದಿಚು ಉದ್ದ ಇರಬೇಕಂತೆ ಹಾಗೂ ಯಾವಾಗಲೂ ಅವಳ ಹಾಗೇ ನಗುತ್ತಿರಬೇಕಂತೆ. ಯಾರಾದ್ರೂ ಇದ್ರೆ ಹೇಳಿ!