ಹುಡುಗೀರ್ ವಿಚಾರದಲ್ಲಿ ಕೇರ್‌ಫುಲ್: ಯೋಗಿಗೆ ಅಪ್ಪನ ಉಪದೇಶ!
MOKSHA
'ನೋಡು ಮಗನೆ ನಿಂಗೆ ಪದೇ ಪದೆ ಹೇಳಲ್ಲ. ಹುಡುಗೀರ ವಿಚಾರದಲ್ಲಿ ಜಾಗ್ರತೆ ವಹಿಸು. ಮುಂದೆ ಎಂಥಾ ಸಂದರ್ಭ ಬಂದ್ರೂ ಆಶ್ಚರ್ಯವಿಲ್ಲ. ಬೀ ಕೇರ್ ಫುಲ್!' ಹೀಗಂತ ನಿರ್ಮಾಪಕ ಸಿದ್ಧರಾಜು, ತನ್ನ ಮಗ ಲೂಸ್ ಮಾದ ಖ್ಯಾತಿಯ ಯೋಗೀಶ್‌ಗೆ ಹಿಂದೊಮ್ಮೆ ಎಚ್ಚರಿಕೆ ಕೊಟ್ಟಿದ್ದರಾ? ಹೌದು ಎನ್ನುತ್ತದೆ ಅವರ ಹತ್ತಿರದ ಬಳಗ.
ಯಾವಾಗ ಲೂಸ್ ಮಾದ ಎಂಬ ಪುಟ್ಟ ಪಾತ್ರ ದುನಿಯಾದಲ್ಲಿ ಬಾರೀ ಪ್ರಸಿದ್ಧಿ ಪಡೆಯಿತೋ, ಅಂದಿನಿಂದಲೇ ಲೂಸ್ ಮಾದ ಎಂಬ ಈ ಯೋಗೀಶ ಎಂಬ ಈಗಷ್ಟೆ ಮೀಸೆ ಮೂಡಿದ ಹದಿಹರೆಯದ ಹುಡುಗನ ದುನಿಯಾವೇ ಬದಲಾಯಿತು. ಅದಕ್ಕೆ ತಕ್ಕಂತೆ ಖದರ್ರೂ ಬದಲಾಯಿತು. ಅವಕಾಶಗಳು ರಾಶಿ ರಾಶಿ ಸುರಿದವು. ಅವಕಾಶ, ಪ್ರಸಿದ್ಧಿ, ಹಣ ಇವೆಲ್ಲವೂ ಹದಿ ವಯಸ್ಸಿನಲ್ಲೇ ಸಿಕ್ಕಾಗ ಸ್ವರ್ಗಕ್ಕೆ ಮೂರು ಗೇಣೇನು ಬಂತು, ಸ್ವರ್ಗದಲ್ಲೇ ಇದ್ದಂಥ ಅನುಭವ ಯಾರಿಗಾದರೂ ಆದೀತು. ಇವಿಷ್ಟೆಲ್ಲಾ ಆದಾಗ, ಲೂಸ್ ಮಾದನೆಂಬ ಯೋಗೀಶ ಪ್ರಸಿದ್ಧಿಯ ಜೊತೆಗೆ ಹುಡುಗಿಯರ ಪ್ರಪಂಚದ ಸಾಕಷ್ಟು ಗಾಸಿಪ್ಪುಗಳೂ ಸುತ್ತತೊಡಗಿತು. ನಟಿಯರ ಜೊತೆಗೆಲ್ಲಾ ಹೆಸರು ಥಳಕು ಹಾಕಿಕೊಂಡಿತು. ಹಾಗೆ, ವರ್ಷದ ಹಿಂದೆ ಅಪ್ಪ ಸಿದ್ಧರಾಜು ಮಗರಾಯನಿಗೆ ಹೀಗೆ ಕೂರಿಸಿಕೊಂಡು ಬುದ್ಧಿ ಹೇಳಿದ್ರಂತೆ.
ಆಗ ತಾನೆ ಯೋಗಿ ಚಿತ್ರ ಸೆಟ್ಟೇರಿತ್ತು. ಯೋಗಿಶನ ಚಲನ ವಲನಗಳನ್ನು ಗಮನಿಸಿದ ಸಿದ್ದರಾಜು, 'ನೀನೇನಾದ್ರೂ ಹೀರೋಯಿನ್ ಜೊತೆ ಸ್ವಲ್ಪ ಫ್ರೀಯಾಗಿ ಮೂವ್ ಮಾಡಿದ್ರೂ ಸರಿ, ನಾಳೆ ಹೇಗಾಗುತ್ತೋ ಗೊತ್ತಿಲ್ಲ. ತಾಳಿದವನು ಬಾಳಿಯಾನು ಮಗನೇ. ಜಾಗ್ರತೆ ವಹಿಸು. ಭವಿಷ್ಯ ನಿನ್ನ ಕೈಲಿದೆ. ಯೋಚನೆ ಮಾಡಿ ಮುಂದುವರಿ. ಮತ್ತೆ ಪರಿಸ್ಥಿತಿ ಕೈಮೀರಿದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಶೂಟಿಂಗ್ ಟೈಮಲ್ಲಿ ನಿನ್ನ ಕೆಲ್ಸ ಎಷ್ಟೋ ಅಷ್ಟು ಮಾತ್ರ ಮಾಡು. ಹುಷಾರಾಗಿ ಹೆಜ್ಜೆ ಇಡು' ಎಂದಿದ್ದರಂತೆ.
ನಂತರ ಅಪ್ಪ ಹೇಳಿದ ಮಾತನ್ನು ಚಾಚೂ ತಪ್ಪದೇ ಕೇಳಿದ ಯೋಗೀಶ ಆ ಚಿತ್ರದ ನಂತರ ಸ್ವಲ್ಪ ಡೀಸೆಂಟಾಗಿದ್ದಾನೆ ಎಂಬ ಮಾತುಗಳೂ ಕೇಳಿ ಬರುತ್ತದೆ. ಅದಕ್ಕೋ ಏನೋ, ಮೊನ್ನೆ ಮೊನ್ನೆ ಪತ್ರಿಕಾಗೋಷ್ಟಿಯಲ್ಲಿ ಪಕ್ಕದಲ್ಲೇ ಬಿಂಕದ ನಾಯಕಿ ಕೂತಿದ್ದರೂ ಯೋಗೀಶ ತಲೆ ಎತ್ತಿ ನೋಡಲಿಲ್ಲವಂತೆ!