ನಿರ್ದೇಶಕ ಎಸ್.ಮಹೇಂದರ್‌ಗೆ ಕೈಕೊಟ್ಟು ಎರಡೇ ದಿನಗಳಲ್ಲಿ ಚಂದ್ರಚೂಡ್ ಅಲಿಯಾಸ್ ಚಕ್ರವರ್ತಿಯ ಜೊತೆಗೆ ಮದುವೆಯಾಗುತ್ತಿದ್ದೇನೆ ಎಂದು ಭಾರೀ ಸುದ್ದಿಯಾಗಿದ್ದ ಚಿತ್ರನಟಿ ಶ್ರುತಿ ಬಾಳು ಮತ್ತೆ ಅತಂತ್ರವಾಗಿದೆಯೇ? ಈ ಪ್ರಶ್ನೆಗೆ ಕೆಲವು ಮೂಲಗಳ ಪ್ರಕಾರ ಹೌದು ಎಂಬ ಉತ್ತರವೇ ಸಿಗುತ್ತದೆ. ಶ್ರುತಿ ಅವರ ಎರಡನೇ ಪತಿಯಾಗಬೇಕಿದ್ದ ಚಂದ್ರಚೂಡ ಅವರೂ ಈಗ ಶ್ರುತಿ ಬಾಳಿನಿಂದ ಬೇರ್ಪಟ್ಟಿದ್ದಾರೆ, ಹಾಗೂ ಸ್ವತಃ ಶ್ರುತಿ ಅವರೇ ತಮ್ಮ ಮನೆಯಿಂದ ಚಂದ್ರಚೂಡರನ್ನು ಹೊರಹಾಕಿದ್ದಾರೆ ಎಂಬ ಅಂತೆಕಂತೆಗಳೀಗ ಗಾಂಧಿನಗರಿಯಲ್ಲಿ ಗಿರಕಿ ಹೊಡೆಯುತ್ತಿವೆ.
'ತನ್ನ ಗಂಡ ತನ್ನ ಮಗಳ ಸ್ಕೂಲ್ ಫೀಸಿಗೂ ನನ್ನನ್ನೇ ಅವಲಂಬಿಸಿದ್ದಾರೆ ಎಂದು ಹೇಳುತ್ತಾ, ಕೇವಲ ಇದೊಂದೇ ವಿಚಾರಕ್ಕಲ್ಲ, ಇನ್ನೂ ಹಲವಾರು ಬಗೆಹರಿಸಲಾಗದ ಸಮಸ್ಯೆ ನನ್ನ ಬಾಳಿನಲ್ಲಿದೆ. ಅದನ್ನೆಲ್ಲಾ ಹೇಳಲು ಸಾಧ್ಯವಾಗೋದಿಲ್ಲ' ಎಂದು ತಾನು ಹಾಗೂ ಎಸ್. ಮಹೇಂದರ್ ವಿಚ್ಛೇದನ ಪಡೆಯುತ್ತಿರುವುದಕ್ಕೆ ಕಾರಣ ನೀಡಿದ್ದ ಶ್ರುತಿ ಕೆಲವೇ ದಿನಗಳಲ್ಲಿ ಚಂದ್ರಚೂಡ್ ಜೊತೆಗೆ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದರು. 'ನನ್ನ ಬಾಳ ದೋಣಿ ಮುಳುಗುತ್ತಿತ್ತು. ಮುಳುಗೋ ದೋಣಿಯ ಪಕ್ಕದಲ್ಲೇ ಹಾದುಹೋಗುತ್ತಿರುವ ಇನ್ನೊಂದು ದೋಣಿಗೆ ಹಾರಿದ್ದೇನೆ, ಇದು ತಪ್ಪಾ?' ಎಂದು ಮಾಧ್ಯಮಗಳ ಜೊತೆ ತನ್ನ ವಿಚ್ಛೇದನ ನಿರ್ಧಾರವನ್ನು ಶ್ರುತಿ ಸಮರ್ಥಿಸಿಕೊಂಡಿದ್ದರು. ಆದರೆ ಇವ್ಯಾವುದಕ್ಕೂ ಎಸ್. ಮಹೇಂದರ್ ಮಾತ್ರ ತುಟಿ ಪಿಟಿಕ್ಕೆನ್ನದೆ ಮಾತನಾಡದೆ ಉಳಿದಿದ್ದರು.
ಚಂದ್ರಚೂಡ ಅಲಿಯಾಸ್ ಚಕ್ರವರ್ತಿ, ಜನ್ಮ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದು, ಇತ್ತೀಚೆಗೆ ಶ್ರುತಿಯ ಜನ್ಮದಿನದಂದೇ ಉಡುಗೊರೆಯಾಗಿ ಚಿತ್ರದ ಮುಹೂರ್ತ ಕೂಡಾ ನೆರವೇರಿಸಿದ್ದರು. ಆದರೆ ಅದಾಗಲೇ ಇವರ ಬಾಳ ದೋಣಿಯಲ್ಲೂ ಬಿರುಕು ಮೂಡಿದೆ ಎನ್ನಲಾಗಿದೆ.
MOKSHA
ಮೂಲಗಳ ಪ್ರಕಾರ, ಶ್ರುತಿಯ ವೃತ್ತಿ ಬದುಕಿನಲ್ಲಿ ಚಂದ್ರಚೂಡ ವಿಪರೀತ ಮೂಗು ತೂರಿಸುತ್ತಿದ್ದು, ಶ್ರುತಿ ಅವರಿಗೆ ಸಿನಿಮಾದಿಂದ ಬರುವ ಹಣ ತನಗೇ ನೇರವಾಗಿ ಕಳುಹಿಸುವಂತೆ ಚಿತ್ರ ನಿರ್ಮಾಪಕರಿಗೆ ಹೇಳುತ್ತಿದ್ದರು ಎನ್ನಲಾಗಿದೆ. ಇದರಿಂದ ರೋಸಿ ಹೋಗಿರುವ ಶ್ರುತಿ ತಮ್ಮ ಮನೆಯಿಂದ ಚಂದ್ರಚೂಡ ಅವರನ್ನು ಹೊರಹಾಕಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಒಂದು ಕಾಲದಲ್ಲಿ ಕರ್ನಾಟಕದ ಜನತೆಯನ್ನು ತನ್ನ ಸಿನಿಮಾಗಳ ಮೂಲಕ ಕಣ್ಣೀರಿನಲ್ಲಿ ತೋಯಿಸುತ್ತಿದ್ದ ಶ್ರುತಿ ಇಂದಿಗೂ ಮಹಿಳೆಯರ ಹೃದಯದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡವರು. ಆದರೆ ಇತ್ತೀಚೆಗೆ ಅವರ ವಿಚ್ಛೇದನದಿಂದ ಬಹುತೇಕ ಮಹಿಳಾ ಅಭಿಮಾನಿಗಳಿಗೆ ಆದುದು ಆಘಾತ. ವಿಚ್ಛೇದನದ ನಂತರ ಮಾಧ್ಯಮಗಳ ಜೊತೆಗೆ, ತಾನಂದು ಸಿನಿಮಾದಲ್ಲಿ ಕಣ್ಣೀರಿನಲ್ಲಿ ಕೈತೊಳೆಯುವ ಹೇಡಿ ಹೆಣ್ಣುಮಗಳಾಗಿದ್ದೆ. ಆದರೆ ನಿಜ ಜೀವನದಲ್ಲಿ ನಾನು ಧೈರ್ಯಶಾಲಿ ಹೆಣ್ಣುಮಗಳು ಎಂದಿದ್ದರು. ಮಹೇಂದರ್ ಜೊತೆಗೆ ಪ್ರೇಮ ವಿವಾಹವಾದ ಒಂದೇ ವರ್ಷದಲ್ಲಿ ನಮ್ಮ ಜೀವನದಲ್ಲಿ ಬಿರುಕು ಏರ್ಪಟ್ಟಿತ್ತು. ಆಗ ಹೊರಬರುವ ಧೈರ್ಯವಾಗಲಿಲ್ಲ. ಈಗ ಧೈರ್ಯ ಬಂದಿದೆ, ಚಂದ್ರಚೂಡರಿಂದಾಗಿ ಎಂದೂ ಹೇಳಿದ್ದರು ಶ್ರುತಿ!
ಇಷ್ಟೆಲ್ಲಾ ನಡೆದಿದೆ ಎಂಬ ಸುದ್ದಿ ಮಹೇಂದರ್ ಕಿವಿ ತಲುಪಿದೆ ಎಂಬ ಸುದ್ದಿಯೂ ಇದೆ. ಜೊತೆಗೆ, ಅವರು ಈಗಲೂ ದಿವ್ಯ ಮೌನವೊಂದನ್ನು ಧರಿಸಿದ್ದಾರೆ ಕೂಡಾ. ಸದ್ಯಕ್ಕವರು ದುನಿಯಾ 'ವಿಜಯ್' ತಾರಾಗಣದ ವೀರಬಾಹು ಚಿತ್ರದ ನಿರ್ದೇಶನದಲ್ಲಿ ಬ್ಯುಸಿ.