ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆಳ್ಳಿ ತೆರೆಯ ಮೇಲೆ ವೀರಪ್ಪನ್ ಅಟ್ಟಹಾಸ! (Veerappan Attahasa | A.M.R.Ramesh | Kishore | Arjun Sarja)
PR
ನೈಜ ಘಟನೆಗಳ ಸುತ್ತ ಕಥೆ ಹೆಣೆದು ಅದನ್ನು ತೆರೆಯ ಮೇಲೆ ತರುವುದರಲ್ಲಿ ಎ.ಎಂ.ಆರ್.ರಮೇಶ್ ಅವರದು ಎತ್ತಿದ ಕೈ. 'ಸೈನೈಡ್' ಬಳಿಕ ಸ್ವಲ್ಪ ಕಾಲ ಗಾಂಧಿನಗರದಿಂದ ದೂರ ಸರಿದ ನಂತರ ಅವರು 'ಪೊಲೀಸ್ ಕ್ವಾರ್ಟರ್ಸ್' ನಿರ್ಮಿಸಿದರಾದರೂ ಅದು ಹೆಚ್ಚೇನೂ ಸುದ್ದಿ ಮಾಡಲಿಲ್ಲ.

ರಮೇಶ್ ಈಗ ನೈಜ ಘಟನೆಗಳನ್ನೇ ಆಧರಿಸಿದ ಮತ್ತೊಂದು ಚಿತ್ರ ತಯಾರಿಸಲು ಮುಂದಾಗಿದ್ದಾರೆ. ಈ ಬಾರಿ ಅವರು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ ಕಾಡುಗಳ್ಳ, ನರಹಂತಕ ವೀರಪ್ಪನ್!

ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತು ಅವರು ತಯಾರಿಸುತ್ತಿರುವ ಚಿತ್ರದ ಹೆಸರು 'ವೀರಪ್ಪನ್ ಅಟ್ಟಹಾಸ'. ಚಿತ್ರದ ಶೀರ್ಷಿಕೆಗೆ ಅಡಿಬರಹ 'ರೈಸ್ ಅಂಡ್ ಫಾಲ್' (ಹೇಗೆ ಬೆಳೆದ ಮತ್ತು ಹೇಗೆ ಸತ್ತ).

ಈ ಚಿತ್ರದಲ್ಲಿ ಪೊಲಿಸ್ ಪಾತ್ರಕ್ಕೆ ಹೇಳಿಮಾಡಿಸಿದಂತಿರುವ ಕಿಶೋರ್ ಅವರು ವೀರಪ್ಪನ್ ಆಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರ ಪಾತ್ರವನ್ನು ಇಲ್ಲಿ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ನಿರ್ವಹಿಸಲಿದ್ದಾರೆ.

ಉಳಿದ ತಾರಾ ಬಳಗದ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. 'ಇದು ಸಂಪೂರ್ಣ ವೀರಪ್ಪನ್ ಜೀವನ ಕುರಿತಾದ ಚಿತ್ರ. ವೀರಪ್ಪನ್ ಕಾಡಿನಲ್ಲಿ ಕಳೆದ ದಿನಗಳು, ಅವನು ಬೆಳೆದ ಬಗೆ ಮತ್ತು ಪರ್ಯಾವಸಾನಗೊಂಡ ರೋಚಕ ಸಂಗತಿಗಳೇ ಚಿತ್ರದ ಹೈಲೈಟ್ ಎಂದಿದ್ದಾರೆ ನಿರ್ದೇಶಕ ರಮೇಶ್.

ವೀರಪ್ಪನ್ ಕುರಿತು ಚಿತ್ರ ಮಾಡಬೇಕೆಂಬ ಯೋಚನೆ ಈಗಿನದ್ದಲ್ಲ. ಹತ್ತು ವರ್ಷಗಳ ಹಿಂದೆಯೇ ಇಂಥದ್ದೊಂದು ಚಿತ್ರ ತಯಾರಿಸುವ ಕನಸು ಕಂಡಿದ್ದೆ. ಡಾ.ರಾಜ್‌ ಕುಮಾರ್ ಅಪಹರಣ ನಡೆದ ದಿನಗಳಲ್ಲಂತೂ ವೀರಪ್ಪನ್ ಎಲ್ಲರನ್ನೂ ಕಾಡಿದ್ದ ವ್ಯಕ್ತಿ. ಆ ಪ್ರಸಂಗದ ಪ್ರತಿಯೊಂದು ಅಂಶವನ್ನೂ ಅಧ್ಯಯನ ಮಾಡಿದ್ದೇನೆ. ಅದಕ್ಕೊಂದು ರೂಪಕೊಟ್ಟು ಇದೀಗ ಚಿತ್ರ ತಯಾರಿಸಲು ಸನ್ನದ್ಧನಾಗಿದ್ದೇನೆ ಎಂದು ರಮೇಶ್ ತಿಳಿಸಿದ್ದಾರೆ.

ಮೆಟ್ಟೂರು, ಸತ್ಯಮಂಗಲಂ ಅರಣ್ಯ ಪ್ರದೇಶ ಹಾಗೂ ವೀರಪ್ಪನ್ ಹೆಚ್ಚಾಗಿ ತಿರುಗಾಡುತ್ತಿದ್ದ ಗ್ರಾಮಗಳಲ್ಲಿ ಚಿತ್ರದ ಹೆಚ್ಚಿನ ಭಾಗವನ್ನು ಚಿತ್ರೀಕರಣ ನಡೆಸುವ ಯೋಜನೆಯನ್ನು ರಮೇಶ್ ಹಾಕಿಕೊಂಡಿದ್ದಾರೆ. ಚಿತ್ರೀಕರಣಕ್ಕೆ ಅಗತ್ಯದ ಎಲ್ಲಾ ಏರ್ಪಾಟು ಮಾಡಿಕೊಂಡಾಗಿದೆ.

ಕಾನೂನಿನ ಅಥವಾ ಇನ್ನಾವುದೇ ರೀತಿಯ ತೊಡಕುಂಟಾಗದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕವೇ ಚಿತ್ರ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಂಡಿರುವುದಾಗಿ ಅವರು ವಿವರಿಸಿದರು.

ಚಿತ್ರಕ್ಕೆ ಯುವನ್ ಶಂಕರ್‌ರಾಜ ಅವರ ಸಂಗೀತ ಹಾಗೂ ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ. ಮೇ ಹದಿನೈದರಂದು ಚಿತ್ರೀಕರಣ ಆರಂಭಗೊಳ್ಳುವ ನೀರೀಕ್ಷೆಯಿದೆ.
ಇವನ್ನೂ ಓದಿ