ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೋರ್ಡಿಂಗು/ಪೋಸ್ಟರ್ರು ಕೂಡಾ ಹಾಕದಿದ್ರೆ ಹೆಂಗೆ ಅಂದ್ರಂತೆ ಮುರಳಿ (Muruli | Chandra Chakori | Gossip | Kannada Movies)
EVENT
ಕಾನಿಷ್ಕಾ ಕಲ್ಲೇಶಿ ಗೂಡಂಗಡಿಯ ಬಳಿ ನಿಂತು ಗಣೇಶ ಬೀಡಿ ಸೇದುತ್ತಿದ್ದ. ವಾಸ್ತವವಾಗಿ ಅವನು ಸೇದುವುದು 555 ಸಿಗರೇಟಾದರೂ, ಗೂಡಂಗಡಿಯವನು ಇನ್ನು ಮುಂದೆ ಸಾಲ ನೀಡುವುದಿಲ್ಲ ಎಂದು ಹೇಳಿದ್ದಕ್ಕೆ ಜೇಬಲ್ಲಿದ್ದ ಎಂಟಾಣೆಯನ್ನು ನೀಡಿ ವಿಧಿಯಿಲ್ಲದೆ ಬೀಡಿ ಸೇದಬೇಕಾಗಿ ಬಂದಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಗೂಡಂಗಡಿಯವನು ಮಾಡಿದ ಅವಮಾನದ ದಳ್ಳುರಿಯಲ್ಲಿ ಬೇಯುತ್ತಿರುವಾಗಲೇ 'ದಮ್‌ ಮಾರೋ ದಮ್‌..... ಹರೇ ರಾಮ ಹರೇ ಕೃಷ್ಣ' ಎಂದು ಗುನುಗುತ್ತಾ ಅಲ್ಲಿಗೆ ಬಂದ ಟೂರಿಸ್ಟ್‌ ತಿಪ್ಪೇಶಿ 'ಏನ್‌ ಗುರೂ, 'ಹರೇ ರಾಮ ಹರೇ ಕೃಷ್ಣ' ಆಸ್ಕರ್‌ಗೆ ನಾಮಿನೇಟ್‌ ಆಗಿದೆಯಂತೇ? ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಾವೂ ಹೋಗ್ತಿದ್ದೀರಂತೇ?' ಎನ್ನುತ್ತಾ ಕಲ್ಲೇಶಿಯ ಭುಜ ತಟ್ಟಿದ.

ಕಲ್ಲೇಶಿ ಥೇಟು ನಾಗರಹಾವು ರಾಮಾಚಾರಿಯಂತೆ ಲುಕ್‌ ನೀಡಿದ. ಮುರಳಿ ಅಭಿನಯದ 'ಹರೇ ರಾಮ ಹರೇ ಕೃಷ್ಣ' ಚಿತ್ರ ಸೂಪರ್ ಆಗಿದೆಯೆಂತೆ ಎಂದು ಗಾಂಧಿನಗರದ ತುಂಬಾ ಸುದ್ದಿ ಹಬ್ಬಿಸಿದ್ದ ತನಗೆ ತಿಪ್ಪೇಶಿ ರೇಗಿಸುತ್ತಿದ್ದಾನೆ ಎಂಬುದು ಕಲ್ಲೇಶಿಯ ಕೋಪಕ್ಕೆ ಕಾರಣವಾಗಿತ್ತು.

'ನೀ ಸುಮ್ನಿರಪ್ಪಾ, ಉರಿಯೋ ಬೆಂಕೀಗೆ ತುಪ್ಪ ಸುರೀಬೇಡ. ಏನೋ ನಮ್ಮ ಮುರುಳಿಯ ಸಿನಿಮಾ ಅಲ್ವೇ ಅಂತ ಸಿನಿಮಾ ಸೂಪರ್ರಾಗಿದೆ ಅಂತ ಹೇಳಿದ್ದೆ. ಪಾಪ! ಚಿತ್ರದ ಬಿಡುಗಡೆಯ ಹಿಂದಿನ ದಿನವೂ ವಾಲ್‌ಪೋಸ್ಟರ್ರು, ಹೋರ್ಡಿಂಗು ಹಾಕದೇ ಇದ್ರೆ ಚಿತ್ರ ಗೆಲ್ಲೋದಾದ್ರೂ ಹ್ಯಾಗೆ ಹೇಳು?' ಕಲ್ಲೇಶಿ ತಾನೇ ಚಿತ್ರದ ಹೀರೋ ಏನೋ ಎಂಬಂತೆ ಸಮರ್ಥನೆ ನೀಡಲು ಹೋದ.

'ಲೇಯ್‌ ಮಗಾ, ಈ ಡೈಲಾಗನ್ನ ಆಗ್ಲೇ ಚಿತ್ರದ ನಾಯಕ ಮುರುಳಿ ಹೊಡೆದಾಯ್ತು; ಬೇರೆ ಏನಾದ್ರೂ ಹೇಳು..!! ಚಿತ್ರದ ಪ್ರಚಾರಕ್ಕೆ ಪೋಸ್ಟರ್ರು, ಕಟೌಟು, ಹೋರ್ಡಿಂಗು ಎಲ್ಲಾ ಇರಬೇಕು ನಿಜ. ಆದ್ರೆ ಚಿತ್ರದಲ್ಲಿ ದಮ್ ಅನ್ನೋದೂ ಇರ್ಬೇಕು ಅಲ್ವಾ ಶಿಷ್ಯಾ? ಅಷ್ಟಕ್ಕೂ ಇವೆಲ್ಲಾನೂ ಭರ್ಜರಿಯಾಗಿ ಅರೇಂಜ್‌ ಮಾಡಿರೋ ಎಷ್ಟು ಚಿತ್ರ ಸೂಪರ್‌ಹಿಟ್‌ ಆಗಿದೆ ಹೇಳು?' ಎನ್ನುತ್ತಾ ತಿಪ್ಪೇಶಿ ಗಾಯಕ್ಕೆ ಮುಲಾಮು ಹಚ್ಚಲು ಹೋದ.

'ಆದ್ರೂ ಚಿತ್ರ ಅನ್ನೋದು ನಿರ್ಮಾಪಕರಿಗೆ ಮಗು ಇದ್ದಂಗೆ; ತಮ್ಮ ಮಗೂನೇ ಅವರು ನಿಗಾವಣೆ ಮಾಡ್ದೇ ಇದ್ರೆ, ಜನ ಮಾಡ್ಯಾರಾ? ಸರಿಯಾಗಿ ಪ್ರಚಾರ-ಪೋಸ್ಟರ್ರು ವ್ಯವಸ್ಥೆ ಮಾಡೋದಲ್ವಾ?' ಬೀಡಿಯ ಹೊಗೆಯಿಂದಲೋ ಅಥವಾ ದುಃಖದಿಂದಲೋ ಕಲ್ಲೇಶಿಯ ಕಣ್ಣುಗಳು ಕೊಳಗಳಾದವು.

'ನಮ್ಮ ಜನನ್ನ ಏನನ್ಕಂಡಿದ್ದೀಯ? ಹಿಂದೆಲ್ಲಾ ಅವರೂವೆ ಬಣ್ಣಬಣ್ಣದ ಪೋಸ್ಟರ್ರು, ಕಟೌಟು ನೋಡಿಕಂಡು ಥಿಯೇಟ್ರಿಗೆ ನುಗ್ಗೋರು. ಈಗ ಭಾರೀ ಲೆಕ್ಕಾಚಾರ ಮಾಡ್ತಾರೆ. ಚೆನ್ನಾಗಿದೆ ಅಂತ ನಾಲ್ಕಾರು ಜನ ಹೇಳಿದ್ರೇನೇ ಜನ ಥಿಯೇಟ್ರಿಗೆ ನುಗ್ಗೋದು, ಎಲ್ಲಿದ್ದೀಯ ನೀನು?' ಎಂದು ತಿಪ್ಪೇಶಿ 'ಸಮಾಧಾನಪೂರ್ವಕವಾಗಿ' ಕಲ್ಲೇಶಿಯನ್ನು ಹಂಗಿಸಿದ..!!

ಸಮಾಧಾನಗೊಂಡವನಂತೆ ಕಂಡ ಕಲ್ಲೇಶಿ, 'ಹಂಗಲ್ಲಾ ತಿಪ್ಪೂ, ಪಾಪ ನಮ್‌ ಮುರಳಿ ತುಂಬಾ ಶ್ರಮಪಟ್ಟು ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ನಂತೆ, ಅವನಿಗೆ ಹೇಳಿಕೊಟ್ಟಂತೇ ಮಾಡಿದ್ನಂತೆ; ಕಥೇನ ಮಾತ್ರ ಚೆನ್ನಾಗಿ ಹೇಳ್ತಾರೆ, ಆದರೆ ನಿರ್ದೇಶಕರು ಸರಿಯಾಗಿ ಹ್ಯಾಂಡ್ಲ್‌ ಮಾಡದೇ ಕಥೆ ಪರದೆ ಮೇಲೆ ಬರೋ ಹೊತ್ತಿಗೆ ಎಕ್ಕುಟ್ಟಿ ಹೋಗಿರುತ್ತೆ' ಅಂತ ಬೇಜಾರು ಮಾಡ್ಕಂಡವ್ನಂತೆ ಮಚ್ಚೀ' ಎನ್ನುತ್ತಾ ಕಲ್ಲೇಶಿ ತನ್ನ ದುಃಖಕ್ಕೆ ಸಮರ್ಥನೆಯನ್ನು ನೀಡಲು ಪ್ರಯತ್ನಿಸಿದ.

'ಅದಿಕ್ಕೇ ಹೇಳಿದ್ದು ಮಗಾ, ಸಿನಿಮಾ ಅನ್ನೋದು ತಪಸ್ಸಿದ್ದಂಗೆ; ಬೇರೆ ಭಾಷೆಯ ಸಿನಿಮಾದ ಸಿ.ಡಿ. ನೋಡಿ ಮಾಡಿದಂಗಲ್ಲ' ಎನ್ನುತ್ತಾ ತಿಪ್ಪೇಶಿ ಅವನಿಗೆ 555 ಸಿಗರೇಟು ಕೊಡಿಸಿದ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ