ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸುದ್ದಿ/ಗಾಸಿಪ್
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದ್ವಾರ್ಕಿ ಇಂಗ್ಲೀಷ್ ಕಾಪಿಗೆ ಪ್ರಿಯಾಮಣಿ ಹೀರೋಯಿನ್ (Charulatha | Priyamani | v. Kumar | Sudeep)
ಕರ್ನಾಟಕದ ಕುಳ್ಳ ದ್ವಾರಕೀಶ್ 'ವಿಷ್ಣುವರ್ಧನ'ದಲ್ಲಿ ಗೆದ್ದು 'ಚಾರುಲತ' ಮಾಡಲು ಹೊರಟಿದ್ದಾರೆ ಅನ್ನೋದನ್ನು ಕೆಲವೇ ದಿನಗಳ ಹಿಂದಷ್ಟೇ ಓದಿದ್ದೀರಿ. ಅದೇನೋ ನಾಯಕಿ ಕೇಂದ್ರಿತ ಚಿತ್ರ ಅನ್ನೋದೂ ಗೊತ್ತಾಗಿತ್ತು. ಆದರೆ ಅದು ಹಾಲಿವುಡ್ ಚಿತ್ರದ ಕಾಪಿ ಅನ್ನೋದೀಗ ಬಯಲಾಗಿದೆ.

ಬಯಲಾಗಿರೋದು ಸ್ವತಃ 'ಚಾರುಲತ' ಟೀಮಿನಿಂದ. ಪ್ರಿಯಾಮಣಿ ನಾಯಕಿಯಾಗಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲೇ ಗುಟ್ಟು ಹೊರ ಬಿದ್ದಿದೆ. ಆದರೆ ಮಕ್ಕಿಕಾಮಕ್ಕಿ ಕಾಪಿ ಅಲ್ಲ, ಸ್ಫೂರ್ತಿ ಪಡೆದುಕೊಂಡು ಮಾಡುತ್ತಿದ್ದೇವೆ ಎಂಬ ಸ್ಪಷ್ಟನೆಯೂ ಆ ಕಡೆಯಿಂದ ಬಂದಿದೆ.

ಇಡೀ ಭಾರತೀಯ ಚಿತ್ರರಂಗದಲ್ಲೇ ಇಂತಹ ಕಥೆಯನ್ನು ಯಾರೂ ಟಚ್ ಮಾಡಿಲ್ಲ. ಅಂತಹ ಹೊಸತನದ ಕಥೆ ಇಲ್ಲಿದೆ. ಇಂಗ್ಲೀಷ್‌ನಲ್ಲಿ ಬಂದ ಚಿತ್ರದ ಎಳೆಯಾದರೂ, ನಮ್ಮ ನೆಲದ ಸೊಗಡಿಗೆ ಅಗತ್ಯವಿರುವ ಬದಲಾವಣೆ ಮಾಡಲಾಗಿದೆ ಅಂತ ದ್ವಾರಕೀಶ್ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ.

ಹಾಗಿದ್ದರೆ ಆ ಚಿತ್ರ ಯಾವುದು? ಈ ಸಂಗತಿಯನ್ನು ದ್ವಾರಕೀಶ್ ಬಾಯಿ ಬಿಟ್ಟಿಲ್ಲ. ಈ ಹಿಂದೆ ನಡೆದ ಘಟನೆಯೊಂದರ ಕಥೆ ಹುಟ್ಟಿಕೊಂಡಿದ್ದು ಕೆಲವೇ ದಿನಗಳ ಹಿಂದೆ ಎಂದರು. ಇತ್ತೀಚೆಗಷ್ಟೇ ಇಂಗ್ಲೀಷ್ ಚಿತ್ರವೊಂದನ್ನು ನೋಡಿದ್ದ ದ್ವಾರಕೀಶ್‌ಗೆ ಅದರ ಕಥೆ ತುಂಬಾ ಇಷ್ಟವಾಗಿತ್ತಂತೆ. ಹಾಗೆ ನೋಡಿದವರು 'ವಿಷ್ಣುವರ್ಧನ' ನಿರ್ದೇಶಕ ವಿ. ಕುಮಾರ್ ಅವರನ್ನು ಕರೆದು ಆ ಚಿತ್ರವನ್ನು ನೋಡಲು ಹೇಳಿದರಂತೆ. ಇದೇ ಕಥೆಯ ಎಳೆಯನ್ನಿಟ್ಟುಕೊಂಡು ಚಿತ್ರ ಮಾಡುವ ನಿರ್ಧಾರ ತೆಗೆದುಕೊಂಡದ್ದು ಆಗಲೇ. ಈಗ ಎಲ್ಲವೂ ಅಂತಿಮವಾಗಿದೆ. ಈ ಬಗ್ಗೆ ನಿರ್ದೇಶಕ ಕುಮಾರ್ ಅವರಲ್ಲೂ ಖುಷಿಯಿದೆ.

ನಾಯಕಿ ಕೇಂದ್ರಿತ ಚಿತ್ರವಾಗಿದ್ದರೂ ಇದು ಸಸ್ಪೆನ್ಸ್ ಥ್ರಿಲ್ಲರ್ ಎಂದರು ನಿರ್ದೇಶಕ ಕುಮಾರ್. ಇಲ್ಲಿ ಪ್ರಿಯಾಮಣಿಗೆ ಸ್ಕಂದ ಎಂಬ ಹೊಸ ಹುಡುಗ ನಾಯಕ.

ಸಾರಥಿ ಚಿತ್ರದಲ್ಲಿ ನಟಿಸಿದ್ದ ಸೀತಾ ಇಲ್ಲೂ ಇದ್ದಾರೆ. ಈ ಚಿತ್ರ ಇನ್ನೊಂದು ಆಪ್ತಮಿತ್ರವಾಗಲಿದೆ ಅನ್ನೋದು ಅವರ ಭರವಸೆ. ಪನ್ನೀರ್ ಸೆಲ್ವಂ ಸಂಗೀತ, ಸುಂದರ್ ಸಿ ಬಾಬು ಛಾಯಾಗ್ರಹಣ ಚಿತ್ರಕ್ಕಿದೆ.

ಇಷ್ಟೆಲ್ಲ ಬಯಲಾಗಿದ್ದು ಯುಗಾದಿಯಂದು ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ. ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯ 48ನೇ ಚಿತ್ರವಿದು ಅನ್ನೋದು ಹೆಗ್ಗಳಿಕೆ. 50ನೇ ಚಿತ್ರ 'ಸಲಾಂ ಸಿನಿಮಾ' ಅಂತ ಪುನರುಚ್ಛರಿಸಿದರು ದ್ವಾರಕೀಶ್.
ಇವನ್ನೂ ಓದಿ
Feedback Print