ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ವಿಮರ್ಶೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂತಿ ನಿನ್ನ ಪ್ರೀತಿಯ
ಯಶಸ್ಸು ಎನ್ನುವುದು ಎಷ್ಟು ಉಲ್ಲಾಸದಾಯಕವೋ ಅಷ್ಟೇ ಅಪಾಯಕಾರಿ ಕೂಡ. ಒಂದು ಕೃತಿ, ಒಂದು ನೃತ್ಯ, ಒಂದು ಹಾಡು, ಒಂದು ಚಿತ್ರ, ಒಂದು ಅವಧಿಯ ಸರ್ಕಾರ ಯಶಸ್ಸು ಕಂಡಿತು ಎಂದರೆ ಅದರ ಸೃಷ್ಟಿಕರ್ತರಿಂದ ಅಥವಾ ಅದರ ಸೂತ್ರಧಾರರಿಂದ ಜನ ಹೆಚ್ಚಿನದನ್ನೇ ನಿರೀಕ್ಷಿಸುತ್ತಾರೆ. ಹೀಗಾಗಿ ಸೃಷ್ಟಿಕರ್ತರು ಅಥವಾ ಸೂತ್ರಧಾರರು ಮೈಮರೆತು ಕೂರುವಂತಿಲ್ಲ, ಭಯದಲ್ಲಿಯೇ ಕಾಲತಳ್ಳಬೇಕು.

ಮುಂಗಾರುಮಳೆ ಚಿತ್ರ ಬಿಡುಗಡೆಯಾಗುವಾಗ ಯೋಗಿರಾಜ ಭಟ್ಟರಿಗೆ ಈ ಭಯವಿರಲಿಲ್ಲ. ಏಕೆಂದರೆ ಅವರ ಹಿಂದಿನ ಚಿತ್ರಗಳಾದ ಮಣಿ ಮತ್ತು ರಂಗ ಎಸ್ಎಸ್ಎಲ್‌ಸಿ ಚಿತ್ರಗಳು ತೋಪಾಗಿದ್ದವು. ಹೀಗಾಗಿ ತಮ್ಮ ಮೂರನೇ ಚಿತ್ರವನ್ನು ಜನ ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲ ಅವರಿಗಿತ್ತೇ ವಿನಃ ಭಯವಿರಲಿಲ್ಲ. ಆದರೆ ಮುಂಗಾರು ಮಳೆ ದಾಖಲೆ ನಿರ್ಮಿಸಿ, ಯೋಗರಾಜಭಟ್ಟರು ಸ್ಟಾರ್ ಆದಾಗ ಮತ್ತು ಅದಾದ ನಂತರ ಗಾಳಿಪಟ ಚಿತ್ರ ಬಿಡುಗಡೆಯಾಗುವಾಗ ಯೋಗರಾಜ ಭಟ್ಟರು ಆತಂಕಗೊಂಡಿದ್ದರು. ಏಕೆಂದರೆ ಪ್ರೇಕ್ಷಕ ಅವರಿಗಾಗಲೇ ಸ್ಟಾರ್ ಪಟ್ಟ ನೀಡಿದ್ದ. ಆತ ಗಾಳಿಪಟದಲ್ಲಿ ಇನ್ನೂ ಹೆಚ್ಚಿನದೇನನ್ನೋ ನಿರೀಕ್ಷಿಸುತ್ತಾನೆ. ಆ ಮಟ್ಟಕ್ಕೆ ತಾನು ಏರಬಲ್ಲೆನೇ ಎಂಬ ಭಯ ಅವರಲ್ಲಿದ್ದುದು ಸಹಜವಾಗಿತ್ತು. ಇದು ಯಶಸ್ಸು ತಂದೊಡ್ಡುವ ಭಯ. ಅದೃಷ್ಟವಶಾತ್ ಭಟ್ಟರು ಬಚಾವ್ ಆದರು. ಏಕೆಂದರೆ ಗಾಳಿಪಟ ಈಗ ಯಶಸ್ವೀ ಚಿತ್ರ!!

ಸೂರಿಯ ಚಿತ್ರದ ವಿಮರ್ಶೆಯಲ್ಲಿ ಯೋಗಿರಾಜ ಭಟ್ಟರಿಗೇನು ಕೆಲಸ ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಇದಕ್ಕೆ ಕಾರಣವಿದೆ. ಭಟ್ಟರ ಮುಂಗಾರು ಮಳೆ ಹಾಗೂ ಸೂರಿಯ ದುನಿಯಾ ಚಿತ್ರಗಳು ಬಿಡುಗಡೆಯಾಗುವಾಗ ಇದ್ದ ಅವರಿಬ್ಬರ ಮನಃಸ್ಥಿತಿ, ನಂತರ ಬದಲಾದ ಅದೃಷ್ಟ, ಸಿಕ್ಕ ಕ್ರೆಡಿಟ್ಟುಗಳು ಹೆಚ್ಚೂ ಕಡಿಮೆ ಒಂದೇನೇ. (ಇಬ್ಬರೂ ಒಂದೇ ಗರಡಿಯವರೇ. ಇಂತಿ ನಿನ್ನ ಪ್ರೀತಿಯ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆಯುವ ಹಾಗೂ ಸನ್ನಿವೇಶಕ್ಕೆ ಹಿನ್ನೆಲೆ ದನಿ ನೀಡುವ ಮೂಲಕ ಈ ಚಿತ್ರದಲ್ಲಿ ಯೋಗಿರಾಜ ಭಟ್ಟರೂ ತೊಡಗಿಸಿಕೊಂಡಿದ್ದಾರೆ). ಹೀಗಾಗಿ ಹೋಲಿಕೆ ಇಲ್ಲಿ ಅನಿವಾರ್ಯ.

ಪ್ರೇಮದಲ್ಲಿ ವಿಫಲಗೊಂಡ ಹಾಗೂ ವಿನಾಕಾರಣ ತನ್ನ ಮನೆಯವರಿಗೆ ಕೆಟ್ಟ ಹೆಸರು ತರುವ ಕಥಾನಾಯಕ, ತನ್ನ ಭವಿತವ್ಯವನ್ನು ಬಲಿಕೊಟ್ಟುಕೊಳ್ಳುವ ಸಂದರ್ಭ ಎದುರಾದಾಗ ಆತನ ಜೀವನದಲ್ಲಿ ಮತ್ತೊಬ್ಬಳು ಎದುರಾಗುತ್ತಾಳೆ. ಅವರಿಗೆ ಮದುವೆಯಾಗಿ ಮಗುವೂ ಆಗುತ್ತದೆಯಾದರೂ ಅವಳು ಅಸಹಜವಾಗಿ ಸಾವನ್ನಪ್ಪುತ್ತಾಳೆ. ಎಲ್ಲ ಒಂದು ಹಂತಕ್ಕೆ ಬಂತು ಎಂದು ನಾಯಕ ಅಂದುಕೊಳ್ಳುವಷ್ಟರಲ್ಲಿ ಆತನ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತವೆ. ಅದನ್ನು ಆತ ಹೇಗೆ ಪರಿಹರಿಸಿಕೊಂಡ ಎಂಬುದು ಚಿತ್ರದ ತಿರುಳು.

ಯಾವುದೇ ನಿರೀಕ್ಷೆ ಇಲ್ಲದೆ ಚಿತ್ರ ನೋಡುವವರಾದರೆ ಚಿತ್ರ ಒಂದಷ್ಟು ಇಷ್ಟವಾಗುತ್ತದೆ. ಚಿತ್ರದ ಮೊದಲರ್ಧ ಭಾಗ ಹಿಡಿದಿಟ್ಟರೆ ಎರಡನೇ ಭಾಗದಲ್ಲಿ ಕೆಲವು ಬಾಲಿಶ ಅಂಶಗಳಿರುವುದು ಹಾಗೂ ಅವು ತೀರಾ ಅಬ್ಸರ್ಡ್ ಆಗಿರುವುದು ಚಿತ್ರದ ನ್ಯೂನತೆ. ಆದರೆ ಇದಕ್ಕೆ ನಾಯಕ ಪಾತ್ರದಲ್ಲಿ ನಟಿಸಿರುವ ಶ್ರೀನಗರ ಕಿಟ್ಟಿಯ ಅಭಿನಯದ ಲೇಪ ದಕ್ಕಿರುವುದರಿಂದ ಚಿತ್ರ ಒಗರು ಒಗರಾಗಿಯೇ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎನಿಸುತ್ತದೆ.

ಹೊಸ ಹುಡುಗಿ ಸೋನಂ ಕನ್ನಡ ಚಿತ್ರರಂಗದ ಆಸ್ತಿಯಾಗಬಲ್ಲರು. ಸಾಧುಕೋಕಿಲಾ ಮತ್ತು ಛಾಯಾಗ್ರಾಹಕ ಸತ್ಯ ಹೆಗಡೆ ಒನ್ಸ್ ಎಗೇನ್ ತಾವೆಂಥಾ ಪ್ರತಿಭಾವಂತರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ರಂಗಾಯಣ ರಘು . ನಿರ್ದೇಶಕ ಸೂರಿಯ ಪ್ರತಿಭೆಯ ಬಗೆಗೆ ಎರಡು ಮಾತಿಲ್ಲ. ಆದರೆ, ದುನಿಯಾ ಚಿತ್ರದಲ್ಲಿ ಮಾಡಿದ, ತಮಗಷ್ಟೇ ಗೋಚರಿಸಿದ ತಪ್ಪುಗಳನ್ನು ತಮ್ಮ ಮುಂದಿನ ಚಿತ್ರದಲ್ಲಿ ಸರಿಪಡಿಸಿಕೊಳ್ಳುವುದಾಗಿ ಅವರು ಹೇಳಿದ ನೆನಪು. ಆದರೆ ದುನಿಯಾ ಚಿತ್ರದಲ್ಲಿಯೇ ಕಡಿಮೆ ತಪ್ಪುಗಳಿದ್ದವು ಎಂಬುದು ಎಲ್ಲರ ಅಭಿಪ್ರಾಯ ಮತ್ತು ಅದೇ ಕಹಿಸತ್ಯ.

ಚಿತ್ರ ವೀಕ್ಷಣೆ ಮುಗಿಸಿಕೊಂಡು ಹೊರಬಂದ ಮೇಲೂ ಮಧುವನ ಕರೆದರೇ ಹಾಡು ನಿಮ್ಮನ್ನು ಕಾಡುತ್ತದೆ. ಅದೇ ಕವಿಸತ್ವ ಮತ್ತು ಕವಿಸತ್ಯ ..!!
ಮತ್ತಷ್ಟು
ಹೋಗಿ ಬಾ ಮಗಳೇ
ಬಿಂದಾಸ್
ಅವ್ವ
ಬೆಳದಿಂಗಳಾಗಿ ಬಾ
ನಿರೀಕ್ಷೆ ವಿಫಲಗೊಳಿಸಿದ 'ಸಿಂಗಾಪುರದಲ್ಲಿ ಶಂಭುಲಿಂಗ'
ಗಾಳಿಪಟ: ಅಭಿನಯ, ಡೈಲಾಗ್‌ನಲ್ಲಿ ಗೆದ್ದ ಗಣೇಶ