ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸಿನಿಮಾ ವಿಮರ್ಶೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾರಸ್ದಾರ
ಭೂಗತ ಲೋಕದ ಸಂಬಂಧವಿರುವ ಚಿತ್ರ ಎಂದರೆ ಹಲವರಿಗೆ ಮಾರಿಯೋ ಪೂಜೋನ ಗಾಡ್‌ಫಾದರ್ ಕಾದಂಬರಿ ಅಥವಾ ಕಮಲಹಾಸನ್ ಅಭಿನಯದ ತಮಿಳಿನ ನಾಯಗನ್ ಚಿತ್ರ ನೆನಪಿಗೆ ಬರುವುದು ಸಹಜ. ಏಕೆಂದರೆ ಭೂಗತ ಲೋಕದ ಹಲವು ಸ್ತರಗಳನ್ನು ಮುಟ್ಟುವಲ್ಲಿ ಈ ಎರಡು ಕೃತಿಗಳು ಯಶಸ್ವಿಯಾಗಿದ್ದವು. ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಪತ್ರಕರ್ತ ಅಗ್ನಿ ಶ್ರೀಧರ್ ನಿರ್ಮಾಣದ ಮತ್ತು ಚೈತನ್ಯ ನಿರ್ದೇಶನದ ಆ ದಿನಗಳು ಚಿತ್ರ. ಭೂಗತ ಲೋಕದ ಸಾಕಷ್ಟು ಒಳತೋಟಿಗಳನ್ನು ಅಗ್ನಿ ಶ್ರೀಧರ್ ಬಲ್ಲವರಾದ್ದರಿಂದ ಅವರ ಗಟ್ಟಿ ಚಿತ್ರಕಥೆ-ಸಂಭಾಷಣೆಗಳು ಆ ದಿನಗಳು ಚಿತ್ರವನ್ನು ಯಶಸ್ಸಿನ ಮೈಲಿಗಲ್ಲು ಮುಟ್ಟಿಸಿದವು.

ವಾರಸ್ದಾರ ಚಿತ್ರಕ್ಕೆ ಆ ದಿನಗಳು ಚಿತ್ರದ ಹೋಲಿಕೆ ಏಕೆ ಎಂದು ನೀವು ಕೇಳಿದರೆ, ನೀವು ಕೇಳುವುದು ಸಹಜ, ನಾವು ಹೋಲಿಸುವುದು ಅನಿವಾರ್ಯ ಎನ್ನಲೇಬೇಕಾಗುತ್ತದೆ. ಪತ್ರಕರ್ತ ರವಿ ಬೆಳಗೆರೆ ಈ ಹಿಂದೆ ಕ್ರೈಂ ಸ್ಟೋರಿ ಧಾರಾವಾಹಿಯ ನಿರೂಪಣೆಯಲ್ಲಿ ಯಶ ಕಂಡವರಷ್ಟೇ ಅಲ್ಲ, ಭೂಗತ ಜಗತ್ತನ್ನು ಅತ್ಯಂತ ಸನಿಹದಿಂದ ಕಂಡವರು. ಮಾರಿಯೋ ಪೂಜೋನ ಗಾಡ್‌ಫಾದರ್ ಕಾದಂಬರಿಯನ್ನು ಕನ್ನಡಕ್ಕೆ ತಂದ ಬೆಳಗೆರೆಯವರಿಂದ ವಾರಸ್ದಾರ ಚಿತ್ರಕ್ಕೆ ಹೆಚ್ಚಿನ ಗಟ್ಟಿತನ ಸಿಗುತ್ತದೆ ಎಂದು ನಿರೀಕ್ಷಿಸಿದವರಿಗೆ ನಿರಾಶೆಯಾಗುವುದು ಚಿತ್ರಕ್ಕೆ ಮೊದಲ ಹೊಡೆತ. ಎಲ್ಲಿಂದಲೋ ಇಲ್ಲಿಗೆ ಬರುವ ಉಗ್ರರನ್ನು ಇಲ್ಲಿನ ಭೂಗತ ಲೋಕದವರು ಪ್ರತಿಭಟಿಸುವುದು ವಾರಸ್ದಾರ ಚಿತ್ರದ ಕಥೆ.

ಮೇಲ್ನೋಟಕ್ಕೆ ಇದು ಭೂಗತ ಲೋಕದವರ ದೇಶಪ್ರೇಮದ ಕಥೆ ಎನಿಸಿದರೂ, ಭೂಗತ ಲೋಕದವರು ಮಾಡುವುದೂ ಸಮಾಜಘಾತುಕ ಚಟುವಟಿಕೆಯಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭೂಗತರ ಮೇಲೆ ಸಮಾಜ ರಕ್ಷಣೆಯ ಹೊಣೆಯನ್ನು ಬಿಟ್ಟು ನಿಷ್ಕ್ತ್ರಿಯವಾಗಿ ಕೂರುವ ಸರ್ಕಾರ ಗೇಲಿಗೆ ಕಾರಣವಾಗುತ್ತದೆ. ಭೂಗತ ಲೋಕದ ನಾಯಕ ಏನೇ ಜನಾನುರಾಗದ ಬಟ್ಟೆ ತೊಟ್ಟರೂ ಅಂತಿಮವಾಗಿ ಆತ ಭೂಗತದೊರೆಯಾಗಿಯೇ ಉಳಿಯುತ್ತಾನೆ. ಆತನನ್ನು ಮುಖ್ಯವಾಹಿನಿಗೆ ತಂದಿದ್ದರೆ ಕಥೆಗೊಂದು ದಮ್ ಸಿಗುತ್ತಿತ್ತು ಎಂಬ ಸ್ಪಷ್ಟ ಅಂಶವನ್ನು ನಿರ್ದೇಶಕರು ಯೋಚಿಸಿದಂತಿಲ್ಲ.

ಅಭಿನಯದ ವಿಷಯಕ್ಕೆ ಬಂದರೆ ಸಂಭಾಷಣೆ ಒಪ್ಪಿಸುವ ರೀತಿ ಹಾಗೂ ಅಭಿನಯದಲ್ಲಿ ರವಿ ಬೆಳಗೆರೆಯವರ ಅಪಕ್ವತೆ ಎದ್ದು ಕಾಣುತ್ತದೆ. ಗ್ರಾಂಥಿಕ ಸಂಭಾಷಣೆಯ ಬದಲಿಗೆ ಸಂಭಾಷಣೆಕಾರರು ಸಹಜ ಸಂಭಾಷಣೆಯನ್ನು ಹೊಸೆಬಹುದಿತ್ತು. ನವ ನಾಯಕ-ನಾಯಕಿಯರಾದ ಸಂದೀಪ್ ಹಾಗೂ ಅಶ್ವಿನಿ ಸಪ್ಪೆ. ದತ್ತಾತ್ರೇಯ ಮತ್ತು ಸುಚೇಂದ್ರ ಪ್ರಸಾದ್ ಅಭಿನಯದಲ್ಲಿ ಮಿಂಚಿದ್ದಾರೆ ಎನ್ನಬಹುದು.

ಒಟ್ಟಾರೆಯಾಗಿ ವಾರಸ್ದಾರ, ಬಿಗಿ ಬಂಧವಿಲ್ಲದ, ಸೂತ್ರಧಾರನ ಹಂಗಿಲ್ಲದ ಚಿತ್ರ ಎನ್ನಲಡ್ಡಿಯಿಲ್ಲ.
ಮತ್ತಷ್ಟು
ಇಂತಿ ನಿನ್ನ ಪ್ರೀತಿಯ
ಹೋಗಿ ಬಾ ಮಗಳೇ
ಬಿಂದಾಸ್
ಅವ್ವ
ಬೆಳದಿಂಗಳಾಗಿ ಬಾ
ನಿರೀಕ್ಷೆ ವಿಫಲಗೊಳಿಸಿದ 'ಸಿಂಗಾಪುರದಲ್ಲಿ ಶಂಭುಲಿಂಗ'