ಚಿತ್ರದ ಮೊದಲರ್ಧ ಲವ್ವು-ಹಾಸ್ಯ, ದ್ವಿತೀಯಾರ್ಧ ರೌಡಿಗಳ ಚಿಂದಿ ಚಿತ್ರಾನ್ನ, ಈ ನಡುವೆ ಶ್ವೇತಾ ಎಂಬ ಜಿಂಕೆಮರಿಯ ಭರವಸೆಯ ನಟನೆ, ಜಿಂಕೆಮರೀನಾ ಹಾಡೊಂದಕ್ಕೇ ಸೀಮಿತವಾದ ಸಂಗೀತ ನಿರ್ದೇಶಕ ಎಮಿಲ್ ಪ್ರತಿಭೆ, ಲೂಸ್ ಮಾದನ ಹ್ಯಾಂಗೋವರ್‌ನಿಂದ ಹೊರಬರದ ನಾಯಕ ಯೋಗೀಶ್, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಲಿಂಗೇನಳ್ಳಿ ಸುರೇಶ್ಚಂದ್ರ, ಅವಿನಾಶ್, ಗಿರಿಜಾ ಲೋಕೇಶ್ರವರುಗಳ ಅಭಿನಯ. ಇವೆಲ್ಲವುಗಳ ಸಂಗಮವೇ ನಂದ ಲವ್ಸ್ ನಂದಿತಾ ಎಂಬುದು ಈ ಚಿತ್ರಕ್ಕೆ ಸಂಬಂಧಿಸಿದ ಒಂದು ಪ್ಯಾರಾದ ವಿಮರ್ಶೆ ಮತ್ತು ವಿಷಾದಕರ ಅಂಶ..!!
ನಮ್ಮ ಚಿತ್ರ ಪ್ರತಿಭೆಗಳಿಗೆ ಕ್ರಿಯೇಟಿವಿಟಿ ಇರುವಂತೆ ಒಂದಷ್ಟು ಭ್ರಮೆಯೂ ಇದೆ. ಚಿತ್ರದ ಮೊದಲ ವಾರ ಪಡ್ಡೆಹುಡುಗರನ್ನು ಆಕರ್ಷಿಸಿಬಿಟ್ಟರೆ, ಒಂದೆರಡು ಐಟಂ ಸಾಂಗ್‌ಗಳಂತಹ ಸರಕನ್ನಿಟ್ಟುಬಿಟ್ಟರೆ ಮೊದಲೆರಡು ವಾರ ಚಿತ್ರಮಂದಿರ ಹೌಸ್ಫುಲ್ ಆಗಿಬಿಡುತ್ತದೆ. ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿಬಿಟ್ಟರೆ ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಬಹುದು ಎಂಬುದು ಇದರ ಹಿಂದಿನ ಹುನ್ನಾರ. ಆದರೆ ಚಿತ್ರದಲ್ಲಿ ಹೇಳುವುದಕ್ಕೆ ಏನೂ ಇಲ್ಲದಿದ್ದಾಗ, ಮತ್ತದೇ ಚರ್ವಿತ ಚರ್ವಣ ರೌಡಿಸಂ ವಿಷಯವೇ ಬೆಳ್ಳಿತೆರೆಯ ಮೇಲೆ ಬಿಂಬಿತವಾದರೆ ಚಿತ್ರವನ್ನು ನೋಡಲಿಕ್ಕಾದರೂ ಏಕೆ ಬರಬೇಕು ಎಂಬುದು ಪ್ರಶ್ನೆ.
ನಿಜ. ರೌಡಿಸಂ ಕುರಿತಾದ ಎಲ್ಲಾ ಚಿತ್ರಗಳೂ ಆ ದಿನಗಳು ಚಿತ್ರವಾಗಲು ಸಾಧ್ಯವಿಲ್ಲ. ಆದರೆ ಒಂದು ಉತ್ತಮ ಚಿತ್ರವನ್ನು ಕಟ್ಟಿಕೊಡುವ ಕಾಳಜಿಯೂ ಇಲ್ಲದಿದ್ದರೆ ಚಿತ್ರಮಂದಿರದಲ್ಲಿ ಕೂರುವುದು ಕಷ್ಟವಾಗುತ್ತದೆ. ತನ್ನ ಜೀವನದಲ್ಲಿ ಕಥಾನಾಯಕಿಯ ಪ್ರವೇಶವಾಗುವುದಕ್ಕೆ ಮುಂಚಿತವಾಗಿ ನಾನುಂಟು ಮೂರು ಲೋಕವುಂಟು ಎಂಬಂತಿರುವ ಕಥಾನಾಯಕ ಕ್ರಮೇಣ ಅವಳಿಗೋಸ್ಕರ ಬದಲಾಗುವ ಪ್ರಯತ್ನ ಮಾಡುತ್ತಾನೆ. ಇದರ ನಡುವೆ ಆಗಿಂದಾಗ್ಗೆ ವೃತ್ತಿ ಜೀವನದ ಅನಿವಾರ್ಯತೆಗೆಂದು(!) ಹೊಡೆದಾಟ ಬಡಿದಾಟಗಳು, ಕೊಚ್ಚುವಿಕೆ ನಡೆಯುತ್ತಲೇ ಇರುತ್ತವೆ. ಇದಕ್ಕೆ ನಾಯಕಿಯ ಆಕ್ಷೇಪ ಬಂದಾಗ ನಂದನೆನಿಸಿಕೊಂಡವ ಕುಡಿದು ಮಂದನಾಗುತ್ತಾನೆ. ಮುಂದೇನಾಯಿತು ಎಂಬುದನ್ನು ಬೆಳ್ಳಿತೆರೆಯ ಮೇಲೇ ನೋಡಿಯೇ ಆನಂದಿಸಬೇಕು..!!
ಚಿತ್ರದಲ್ಲಿ ಎಷ್ಟೇ ಚಚ್ಚುವಿಕೆ-ಕೊಚ್ಚುವಿಕೆಗಳು ನಡೆದರೂ ಒಬ್ಬನೇ ಒಬ್ಬ ಪೊಲೀಸ್ ಅಧಿಕಾರಿ ಕಾಣಸಿಗದಿರುವುದು ವಿಶ್ವದ ಎಷ್ಟನೇ ಅದ್ಬುತವೋ. ಇಂತಹ ಚಿತ್ರಗಳನ್ನು ತೆಗೆದು ನಮ್ಮ ಚಿತ್ರೋದ್ಯಮಿಗಳು ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಚಿತ್ರದಿಂದ ದೊರೆತಿರುವ ಏಕೈಕ ಕೊಡುಗೆಯೆಂದರೆ ನಂದಿತಾ ಪಾತ್ರದಲ್ಲಿ ನಟಿಸಿರುವ ಶ್ವೇತಾ.
ಚಿತ್ರದುದ್ದಕ್ಕೂ ಪ್ರಾಯಶಃ ರೀಲೀಫ್ ನೀಡುವುದು ಅವರೊಬ್ಬರೇ. ಒಳ್ಳೆಯ ನಿರ್ದೇಶಕರು ಸಿಕ್ಕರೆ ಅವರನ್ನು ಚೆನ್ನಾಗಿ ಮೌಲ್ಡ್ ಮಾಡಲು ಸಾಧ್ಯ ಮತ್ತು ಕನ್ನಡಕ್ಕೊಬ್ಬ ಉತ್ತಮ ನಟಿ ಲಭ್ಯವಾಗುತ್ತಾಳೆ ಎಂಬುದೊಂದೇ ಚಿತ್ರದಿಂದ ಮೂಡಿರುವ ಭರವಸೆ.
|