ಚಿತ್ರ: ಸತ್ಯ ಇನ್ ಲವ್ ಇದು ಸತ್ಯ ಇನ್ ಲವ್ ಚಿತ್ರದ ಎರಡೇ ಪದದ ವಿಮರ್ಶೆ. ಹಾಗಾದರೆ ಶಿವಣ್ಣನನ್ನು ಬಿಟ್ಟು ಚಿತ್ರದಲ್ಲಿ ಬೇರೇನೂ ಇಲ್ಲವೇ ಎಂದು ನೀವು ಕೇಳಬಹುದು. ಆದರೆ ಆಕ್ಷನ್, ಸೆಂಟಿಮೆಂಟ್, ಲವ್ ಇವೇ ಮೊದಲಾದ ದೃಶ್ಯಗಳಲ್ಲಿ ಆಯಾಯಾ ವರ್ಗದ ಪ್ರೇಕ್ಷಕರನ್ನು ರಂಜಿಸುವುದರೊಂದಿಗೆ ಚಿತ್ರವನ್ನು ಹೆಗಲ ಮೇಲೆ ಹೊತ್ತು ಸಾಗುವ ಜವಾಬ್ದಾರಿಯಿದೆಯಲ್ಲಾ? ಅದನ್ನು ಪರಿಗಣಿಸಿದಾಗ ಶಿವಣ್ಣ ಗೆದ್ದಿದ್ದಾರೆ ಅಂತಲೇ ಹೇಳಬೇಕು.
ಸರಿ ಸುಮಾರು ಒಂದು ವರ್ಷದ ಹಿಂದೆಯೇ ಪ್ರಾರಂಭವಾದ ಈ ಚಿತ್ರ ವಿಳಂಬವಾಗಿದ್ದೇ ಅಲ್ಲದೆ, ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗಿತ್ತು. ಹೀಗಾದಾಗ ಚಿತ್ರದ ಕ್ವಾಲಿಟಿಯ ಬಗೆಗೂ ಅನುಮಾನಗಳೆದ್ದಿದ್ದವು. ಒಂದು ಚಿತ್ರದ ಬಿಡುಗಡೆ ವಿಳಂಬವಾಗುವಾಗ ಅದರ ರೇಟನ್ನು ಕುಗ್ಗಿಸುವುದು ಗಾಂಧಿನಗರದ ಜಾಯಮಾನ. ಸತ್ಯ ಇನ್ ಲವ್ ಚಿತ್ರಕ್ಕೆ ಈ ಗತಿ ಒದಗುವುದೇ ಎಂಬ ಸಂದೇಹಗಳು ಕಾಡುತ್ತಿರುವಂತೆಯೇ, ಕರ್ನಾಟಕವೂ ಸೇರಿದಂತೆ ಚಿತ್ರ ಹೊರರಾಜ್ಯಗಳಲ್ಲೂ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಾಗ ಸಂದೇಹಗಳೆಲ್ಲವೂ ದೂರವಾದವು.
ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಕಥಾನಾಯಕಿಯು ರೋಗಿಯ ಆರೈಕೆಯನ್ನು ಮಾಡುತ್ತಿರುವುದನ್ನು ಮುಗ್ಧ ಕಥಾನಾಯಕ ಸತ್ಯ ನೋಡುತ್ತಾನೆ. ಮದುವೆಯಾದರೆ ಅವಳನ್ನೇ ಆಗಬೇಕೆಂದು ನಿರ್ಧರಿಸುತ್ತಾನೆ. ಆದರೆ ಇದರ ಪರಿವೆಯಿಲ್ಲದ ನಾಯಕಿ ಜನಸಾಗರದಲ್ಲಿ ಮರೆಯಾಗುತ್ತಾಳೆ. ಅವಳನ್ನು ಬೆಂಗಳೂರಿನಲ್ಲಿ ಹುಡುಕಿಕೊಂಡು ತಿರುಗುತ್ತಿದ್ದವನಿಗೆ ಆಕೆ ಆಂಧ್ರಪ್ರದೇಶದ ಭಯೋತ್ಪಾದಕ ರಂಗಾರೆಡ್ಡಿಯ ಬಳಿ ಇರುವುದು ಗೊತ್ತಾಗುತ್ತದೆ. ಆತ ಮತ್ತಾರೂ ಅಲ್ಲ, ಆಕೆಯ ತಂದೆ. ಅಲ್ಲಿಗೆ ಹುಡುಕಿಕೊಂಡು ಹೋದ ಸತ್ಯ ರಂಗಾರೆಡ್ಡಿಯ ಮಕ್ಕಳಿಂದ ಒದೆ ತಿನ್ನಬೇಕಾಗುತ್ತದೆ. ಸತ್ಯನನ್ನು ಈ ಮುಂಚೆ ನೋಡಿರುವುದಿಲ್ಲವಾದ್ದರಿಂದ ಈತ ಯಾರೆಂದು ನನಗೆ ಗೊತ್ತಿಲ್ಲ ಎನ್ನುತ್ತಾಳೆ ನಾಯಕಿ.
ಕೊನೆಗೆ ಪ್ರೀತಿಯನ್ನು ಪ್ರೀತಿಯಿಂದಲೇ ಒಪ್ಪಿಸಲು ಸಾಧ್ಯ ಎಂದು ಸತ್ಯ ತೀರ್ಮಾನಿಸುತ್ತಾನೆ. ಆತ ಪ್ರೀತಿಯನ್ನು ಹೇಗೆ ಗೆದ್ದ ಎಂದು ತಿಳಿಸುವ ಚಿತ್ರವೇ ಸತ್ಯ ಇನ್ ಲವ್. ಚಿತ್ರದಲ್ಲಿ ಶಿವಣ್ಣ, ಕೋಮಲ್, ಶ್ರೀನಾಥ್, ವಿನಯಾ ಪ್ರಕಾಶ್ ಹೀಗೆ ಎಲ್ಲರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ನಿರಾಶೆಗೊಳಿಸುವುದು ನಾಯಕಿ ಜೆನಿಲಿಯಾ. ಈಕೆಯ ಕಾಲ್ಶೀಟ್ ಸಮಸ್ಯೆಯಿಂದಾಗಿ ಚಿತ್ರ ವಿಳಂಬಗೊಂಡಿತು ಎನ್ನುವ ಸುದ್ದಿ ಕೇಳಿದ ಮೇಲೆ ಈಕೆಗಾಗಿ ಇಷ್ಟೊಂದು ಶ್ರಮವಹಿಸಬೇಕಿತ್ತಾ ಎನಿಸುತ್ತದೆ. ಗುರುಕಿರಣ್ ಸಂಗೀತ ಮೆಲುಕುಹಾಕುವಂತಿದೆ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಬೊಂಬಾಟ್. ನಿರ್ದೇಶಕ ರಾಘವ ಲೋಕಿಯವರಿಗೆ ಹಾಗೂ ಸಾಹಸ ನಿರ್ದೇಶಕ ರವಿವರ್ಮರಿಗೆ ತಂತಮ್ಮ ಮಾಧ್ಯಮಗಳ ಮೇಲೆ ಹಿಡಿತವಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
|