ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಇಂದು ಗ್ಲ್ಯಾಮರ್ ಬೊಂಬೆ ರಮ್ಯಕೃಷ್ಣ ಹುಟ್ಟುಹಬ್ಬ (Ramya Krishna | Ba Baro Rasika | Raktha Kanniru | Upendra | Padeyappa)
ತಾರಾ ಪರಿಚಯ
Feedback Print Bookmark and Share
 
Ramya Krishna
WD
'ಕಾಂತಾ...' ಎಂದರೆ ಸಾಕು ನೆನಪಾಗುವುದು ಉಪೇಂದ್ರರ ವಿಚಿತ್ರ ಮ್ಯಾನರಿಸಂನ ವಿಶಿಷ್ಟ ಡೈಲಾಗುಗಳೊಂದಿಗೆ ನೆನಪಾಗುವುದು ರಮ್ಯಕೃಷ್ಣ ಎಂಬ ಗ್ಲ್ಯಾಮರ್ ಸುಂದರಿ. ಹೌದು. ಪಂಚಭಾಷಾ ನಟಿ ರಮ್ಯಕೃಷ್ಣ ತೀರಾ ಇತ್ತೀಚೆಗೆ 35 ದಾಟಿದ ನಂತರವೂ ನಾಯಕಿ ನಟಿಯಾಗಿಯೇ ಮಿಂಚಿದ್ದು ಹಳೇಕಥೆ. ರಮ್ಯಕೃಷ್ಣ ಸೌಂದರ್ಯಕ್ಕೆ ಮೋಡಿಗೊಳಗಾಗದವರು ವಿರಳವೇ. ಇಂದ್ರನ ಆಸ್ಥಾನದಲ್ಲಿದ್ದ ಪುರಾಣದ ರಂಭೆ, ಊರ್ವಶಿ, ಮೇನಕೆಯರಿಗೆ ರಮ್ಯಕೃಷ್ಣರನ್ನು ಹೋಲಿಸುವುದುಂಟು. ಇಂತಿಪ್ಪ ರಮ್ಯಕೃಷ್ಣಗೆ ಇಂದು (ಸೆ.15) ಹುಟ್ಟುಹಬ್ಬದ ಸಂಭ್ರಮ. 1970ರಂದು ಜನಿಸಿದ ಈಕೆ ಈಗ 39ರ ಹರೆಯಕ್ಕೆ ಕಾಲಿಟ್ಟಿದ್ದಾರೆ.

ರಮ್ಯಕೃಷ್ಣ ಹುಟ್ಟಿದ್ದು ತಮಿಳುನಾಡಿನ ಮದರಾಸಿನಲ್ಲಿ. ಭರತನಾಟ್ಯಂ ಹಾಗೂ ಕೂಚಿಪುಡಿ ನೃತ್ಯದಲ್ಲಿ ಪರಿಣತಿ ಪಡೆದಿರುವ ರಮ್ಯಕೃಷ್ಣ, ಹಾಸ್ಯ ಕಲಾವಿದ ಹಾಗೂ ರಾಜಕಾರಣಿ ರಾಮಸ್ವಾಮಿ ಅವರ ಸಂಬಂಧಿ. 13ನೇ ವಯಸ್ಸಿನಲ್ಲೇ ನಟನೆಗಿಳಿದ ರಮ್ಯ ಕೃಷ್ಣ ಆಗ ಎಂಟನೇ ತರಗತಿಯಲ್ಲಿದ್ದರು. ವೈ.ಜಿ.ಮಹೇಂದ್ರನ್ ಜತೆಗೆ ನಾಯಕಿಯಾಗಿ ನಟಿಸಿದ ರಮ್ಯಕೃಷ್ಣ ಅವರ ಮೊದಲ ಚಿತ್ರ ವೈಳ್ಲೈ ಮನಸು (ತಮಿಳು).

ರಮ್ಯಕೃಷ್ಣ ಕನ್ನಡ ಸಿನಿಮಾಗಳಲ್ಲೂ ತನ್ನ ಪ್ರತಿಭೆ ಹಾಗೂ ಗ್ಲ್ಯಾಮರ್ ಎರಡನ್ನೂ ಧಾರಾಳವಾಗಿ ಪ್ರದರ್ಶಿಸಿದವರು. ವಿಷ್ಣುವರ್ಧನ್ ಜತೆಗೆ ಕೃಷ್ಣ ರುಕ್ಮಿಣಿಯಲ್ಲಿ ನಟಿಸಿದರೂ ಅಂತಹ ಪ್ರಸಿದ್ಧಿ ಆಕೆಗೆ ಸಿಗಲಿಲ್ಲ. ಆದರೆ ನಂತರ ಬಂದ ಗಡಿಬಿಡಿ ಗಂಡ, ರವಿಚಂದ್ರನ್ ಜತೆಗಿನ ಮಾಂಗಲ್ಯಂ ತಂತು ನಾನೇನಾ, ಉಪೇಂದ್ರ ಜತೆಗಿನ ರಕ್ತ ಕಣ್ಣೀರು ಆಕೆಯ ಕನ್ನಡದ ಹಿಟ್ ಚಿತ್ರಗಳು.
Ramya Krishna
WD


ಕೃಷ್ಣ ರುಕ್ಮಿಣಿ (1988), ಗಡಿಬಿಡಿ ಗಂಡ (1993), ಮಾಂಗಲ್ಯಂ ತಂತು ನಾನೇನಾ(1998), ಓಂ ಶಕ್ತಿ (1999), ಸ್ನೇಹ (2000), ಏಕಾಂಗಿ (2002), ರಾಜಾ ನರಸಿಂಹ (2003), ಆಂಧ್ರ ಹೆಡ್ತಿ, ರಕ್ತ ರಣ್ಣೀರು, ಯಾರೇ ನೀ ಅಭಿಮಾನಿ, ಬಾ ಬಾರೋ ರಸಿಕ ಮತ್ತಿತರ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ರಕ್ತ ಕಣ್ಣೀರಿನಲ್ಲಿ ಉಪೇಂದ್ರ ಜತೆಗೆ ವೇಶ್ಯೆಯಾಗಿ ನಟಿಸಿದ ರಮ್ಯಕೃಷ್ಣ ಆ ಮೂಲಕ ಪ್ರಸಿದ್ಧಿಯ್ನೂ ಪಡೆದಿದ್ದರು. ಬಾ ಬಾರೋ ರಸಿಕ ಚಿತ್ರದ ಹಾಡುಗಳಲ್ಲಿ ಸುನಿಲ್ ರಾವ್ ಜತೆಗೆ ಹೆಚ್ಚು ಬಿಸಿ ಬಿಸಿಯಾಗಿಯೇ ಅಭಿನಯಿಸಿ ಪ್ರಖ್ಯಾತಿ ಪಡೆದವರು ರಮ್ಯಕೃಷ್ಣ. ಭರತನಾಟ್ಯದಲ್ಲಿ ಅದ್ಭುತ ಪರಿಣತಿ ಪಡೆದಿರುವ ನೃತ್ಯಗಾತಿಯಾದರೂ, ಸಿನಿಮಾದಲ್ಲಿ ಎಂದಿಗೂ ತನ್ನ ನೃತ್ಯವನ್ನೇ ಮೇಳೈಸುವಂಥ ಸಿನಿಮಾದಲ್ಲಿ ನಟಿಸಲು ಆಕೆಗೆ ಸಿಗಲೇ ಇಲ್ಲ.

ರಮ್ಯಕೃಷ್ಣ ಅವರ ಮೊದಲ ತೆಲುಗು ಚಿತ್ರ ಭಲೇ ಮಿತ್ರುಲು. ಕಾಸಿನಾದುನಿ ವಿಶ್ವನಾಥ್ ಅವರ ಮಾಸ್ಟರ್ ಪೀಸ್ ಎಂದೇ ಖ್ಯಾತವಾದ ಸೂತ್ರಧಾರುಲು ಚಿತ್ರದಲ್ಲಿ 1987ರಲ್ಲಿ ನಟಿಸಿದ ರಮ್ಯಕೃಷ್ಣ ಆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಅದ್ಭುತ ಬ್ರೇಕ್ ಪಡೆದರು. ಪೂರ್ಣ ಪ್ರಮಾಣದ ನಾಯಕಿ ನಟಿಯಾಗಿ ರಮ್ಯಕೃಷ್ಣ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ವ್ಯಾಲ್ಯೂ ಗಿಟ್ಟಿಸಿಕೊಂಡರು. ಕೆ.ರಾಘವೇಂದ್ರ ರಾವ್ ಅವನ ನಿರ್ದೇಶನದಲ್ಲಂತೂ ರಮ್ಯಕೃಷ್ಣ ತೆಲುಗಿನಲ್ಲಿ ಗಟ್ಟಿಯಾಗಿ ಬೇರುಗಳನ್ನು ಭದ್ರಪಡಿಸಿಕೊಂಡರು. ತೆಲುಗು ಚಿತ್ರಂಗದ ಖ್ಯಾತ ನಾಯಕ ನಟರಾದ ಅಕ್ಕಿನೇನಿ ನಾಗೇಶ್ವರರಾವ್, ನಂದಮುರಿ ತರಕ ರಾಮರಾವ್, ಕೃಷ್ಣ, ಶೋಭನ್ ಬಾಬು ಮತ್ತಿತರರೊಂದಿಗೆ ನಟಿಸಿದ ರಮ್ಯಕೃಷ್ಣ ನಂತರ ಬಂದ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಜತೆಗೂ ನಾಯಕಿಯಾಗಿ ಮಿಂಚಿದವರು. ಮಳಯಾಳಂನಲ್ಲಿ ಆರ್ಯನ್, ಅಹಂ, ನೇರಂ ಪುಲರುಂಬೊಲ್, ಮಹಾತ್ಮ, ಕಕ್ಕಾಕುಯಿಲ್ ಮತ್ತಿತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

Ramya Krishna with Family
WD
ರಮ್ಯಕೃಷ್ಣ ಅವರು ದಕ್ಷಿಣ ಭಾರತದಲ್ಲಷ್ಟೇ ಅಲ್ಲ, ಜಪಾನ್, ಸಿಂಗಾಪುರ, ಲಂಡನ್, ಪ್ಯಾರಿಸ್‌ಗಳಲ್ಲೂ ಪ್ರಖ್ಯಾತಿ ಪಡೆಯಲು ಕಾರಣವಾಗಿದ್ದು ರಜನೀಕಾಂತ್ ಜತೆಗೆ ನಟಿಸಿದ ತಮಿಳು ಚಿತ್ರ ಪಡೆಯಪ್ಪ. ರಮ್ಯಕೃಷ್ಣ ಅವರ ಇಡೀ ಚಿತ್ರರಂಗದ ಕೆರಿಯರ್‌ನಲ್ಲಿ ಆಕೆ ಅದ್ಭುತ ಅಭಿನಯ ತೋರಿದ್ದು ಬಹುಶಃ ಪಡೆಯಪ್ಪದಲ್ಲಿಯೇ. ಹೀಗಾಗಿ ಆಕೆಯನ್ನು ಕೇವಲ ಗ್ಲ್ಯಾಮರ್ ಗೊಂಬೆ ಎಂದು ಟೀಕಿಸುತ್ತಿದ್ದ ವಿಮರ್ಶಕರೆಲ್ಲ ಪಡೆಯಪ್ಪದ ನಟನೆ ನೋಡಿ ಬಾಯಿಗೆ ಬೀಗ ಹಾಕಬೇಕಾಯಿತು. ತನಗೆ ಗ್ಲ್ಯಾಮರ್ ಅಷ್ಟೇ ಅಲ್ಲ, ಅದ್ಭುತ ನಟನೆಯೂ ಗೊತ್ತಿದೆ ಎಂದು ಆ ಮೂಲಕ ರಮ್ಯಕೃಷ್ಣ ಸಾಬೀತು ಮಾಡಿದರು. ಆಂಧ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ನಂದಿ ಪ್ರಶಸ್ತಿಯನ್ನೂ ರಮ್ಯಕೃಷ್ಣ ಬುಟ್ಟಿಗೆ ಹಾಕಿಕೊಂಡಿದ್ದಾರೆ.

ರಮ್ಯಕೃಷ್ಣ ಹಿಂದಿಯಲ್ಲೂ ನಟಿಸಿದ್ದಾರೆ. 1988ರಲ್ಲಿ ದಯಾವಾನ್ ಚಿತ್ರದ ಮೂಲಕ ಹಿಂದಿಗೆ ಲಗ್ಗೆಯಿಟ್ಟ ರಮ್ಯಕೃಷ್ಣ ಸುಭಾಷ್ ಘಾಯ್ ಅವರ ಖ್ಯಾತ ಚಿತ್ರ ಖಳ್‌ ನಾಯಕ್‌ನಲ್ಲಿ ಮಾಧುರಿ ದೀಕ್ಷಿತ್, ಸಂಜಯ್ ದತ್ ಜತೆಗೆ ನಟಿಸಿದರು. ನಂತರ ವಾಜೂದ್, ಬಡೇ ಮಿಯಾ ಚೋಟೇ ಮಿಯಾ, ಶಪಥ್, ಲೋಹಾ, ಚಾಹತ್, ಬನಾರಸೀ ಬಾಬು, ಪರಂಪರಾ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಆದರೆ ದಕ್ಷಿಣದಷ್ಟು ಪ್ರಸಿದ್ಧಿ ಉತ್ತರದಲ್ಲಿ ರಮ್ಯಕೃಷ್ಣ ಪಾಲಿಗೆ ದಕ್ಕಲಿಲ್ಲ.

ರಮ್ಯಕೃಷ್ಣ ಖ್ಯಾತ ತೆಲುಗು ನಿರ್ದೇಶಕ ಕೃಷ್ಣ ವಂಶಿ ಅವರನ್ನು 2003ರಲ್ಲಿ ಮದುವೆಯಾದರು. 2005ರಲ್ಲಿ ರಮ್ಯಕೃಷ್ಣ ತಾಯಿಯೂ ಆಗಿದ್ದಾರೆ. ಮಗನ ಹೆಸರು ರಿತ್ವಿಕ್.

ಸದ್ಯ ರಮ್ಯಕೃಷ್ಣ ಮಗ ರಿತ್ವಿಕ್ ಹೆಸರಿನಲ್ಲಿ ತನ್ನದೇ ಸಂಸ್ಥೆ ಹುಟ್ಟುಹಾಕಿಕೊಂಡಿದ್ದಾರೆ. ಹಲವು ಟಿವಿ ಶೋಗಳನ್ನೂ ನಡೆಸಿಕೊಟ್ಟಿದ್ದಾರೆ. ಅಲ್ಲದೆ, ಸದ್ಯ ತಮಿಳು ದಾರಾವಾಹಿಗಳಲ್ಲೂ ಮುಖ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಈಗಲೂ ಎರಡು ಚಿತ್ರಗಳು ಕೈಯಲ್ಲಿವೆ! ಪ್ರತಿಭಾನ್ವಿತ ಗ್ಲ್ಯಾಮರ್ ತಾರೆ ರಮ್ಯಕೃಷ್ಣಗೆ ಹುಟ್ಟುಹಬ್ಬದ ಶುಭಾಷಯ ಹೇಳೋಣ.

ರಮ್ಯಕೃಷ್ಣರ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಕೃಷ್ಣ, ಬಾ ಬಾರೋ ರಸಿಕ, ರಕ್ತಕಣ್ಣೀರು, ಉಪೇಂದ್ರ, ರವಿಚಂದ್ರನ್