ಮುಖ್ಯ ಪುಟ  ಮನರಂಜನೆ  ಪ್ರವಾಸೋದ್ಯಮ  ಕರ್ನಾಟಕ ದರ್ಶನ
 
ಕರಾವಳಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮ
webdunia
ಕರ್ನಾಟಕದ ಕರಾವಳಿ ಎಂದು ಕರೆಯಲಾಗುವ ಕಾರವಾರದಿಂದ ಮಂಗಳೂರು ವರೆಗಿನ ಪ್ರದೇಶ ಇದೀಗ ಹೊಸ ಪ್ರವಾಸೋದ್ಯಮ ಅವಕಾಶಗಳಿಗೆ ತೆರೆದುಕೊಳ್ಳುತ್ತಿದೆ.

ಕರಾವಳಿ ಎಂದರೆ ನಾಲ್ಕಾರು ತಿಂಗಳ ಕಾಲ ಮಳೆ ಬೀಳುವ, ಮಳೆಗಾಲದಲ್ಲಿ ಭೋರ್ಗರೆದು ಬೇಸಗೆಯಲ್ಲಿ ಬೆಳ್ಳನೆ ಮಳಲ ಹಾಸುಗೆ ನೀಡುವ ಕಡಲತೀರಗಳು, ತೆಂಗು ಕಂಗುಗಳು- ಭತ್ತ ಬಾಳೆ ಗೋಡಂಬಿ ಬೆಳೆಯುವ ಬಯಲು ಬೆಟ್ಟಗಳು, ಹಚ್ಚ ಹಸುರಿನ ವನಗಳು ಅಲ್ಲಲ್ಲಿ ಇಣುಕುವ ಝರಿ ಜಲಪಾತ ಜಲಾಶಯಗಳು ಎಂಬ ಪರಿಕಲ್ಪನೆ ಈಗ ಬದಲಾಗುತ್ತಿದೆ.

ಕಾರವಾರದಿಂದ ಮಂಗಳೂರು ವರೆಗೆ ಉಡುಪಿ, ದಕ್ಷಿಣೋತ್ತರಕನ್ನಡ ಜಿಲ್ಲೆಗಳು ಈಗ ಪುಣ್ಯಕ್ಷೇತ್ರಗಳು, ದೈವೀಕ ನೆಲೆವೀಡುಗಳ ವೀಕ್ಷಣೆಗಾಗಿ ಪ್ರವಾಸಿಗರನ್ನು ಆಕರ್ಷಿಸುವ ಪ್ರದೇಶಗಳಾಗಿ ಬದಲಾಗುತ್ತಿವೆ. ಬೀಚ್-ಬೆಟ್ಟ-ಜಲಾಶಯಗಳಿಗಿಂತ ಕರಾವಳಿ ಜಿಲ್ಲೆಗಳಲ್ಲಿರುವ ದೇವಸ್ಥಾನಗಳು ಹೊರನಾಡಿಗರು, ವಿದೇಶಿಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಮಸೀದಿ, ಚರ್ಚ್‌ಗಳೂ ಇದಕ್ಕೆ ಹೊರತಾಗಿಲ್ಲ.

ಉತ್ತರಕನ್ನಡ ಜಿಲ್ಲೆಯ ಗೋಕರ್ಣ, ಮುರುಡೇಶ್ವರ, ಇಡಗುಂಜಿ, ಶಿರಸಿಯ ಮಾರಿಕಾಂಬೆ, ಕುಮಟದ ಯಾಣ ಭೈರವೇಶ್ವರ ಆ ಜಿಲ್ಲೆಯ ತೀರ್ಥ ಕ್ಷೇತ್ರಗಳಾದರೆ, ಉಡುಪಿ ಜಿಲ್ಲೆಯಲ್ಲಿ ಗೀತಾಚಾರ್ಯ ಶ್ರೀಕೃಷ್ಣನ ಕ್ಷೇತ್ರ, ಕುಂದಾಪುರದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿ ಪ್ರಮುಖವಾದವುಗಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಸುಳ್ಯದ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಕದ್ರಿ ಕ್ಷೇತ್ರ, ಮಂಗಳಾದೇವಿ ಕ್ಷೇತ್ರಗಳು ಬದುಕಿನ ವಿವಿಧ ಕ್ಷೇತ್ರಗಳಲ್ಲಿರುವ ಭಕ್ತಾದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ.

ಇಷ್ಟದೇವರುಗಳ ದರ್ಶನ ಭಾಗ್ಯದಂತೆಯೇ ಪ್ರದೇಶದಲ್ಲಿರುವ ಸುಂದರ ನಿಸರ್ಗ ಸೌಂದರ್ಯ, ಸಮುದ್ರತೀರಗಳು, ಝರಿ-ಜಲಾಶಯಗಳು, ಗಿರಿ ಶಿಖರಗಳು ವನಾಂತರಾಳದ ನಡುವಿನ ಸಂಚಾರ ಇನ್ನಷ್ಟು ಮುದ ನೀಡುತ್ತಿವೆ. ಪ್ರವಾಸೋದ್ಯಮ, ಪ್ರವಾಸಿಗರು ಎಂದರೆ ಈಗ ಕೇವಲ ಬೀಚ್‌- ರೆಸಾರ್ಟ್‌ಗಳೆಂಬ ಪರಿಕಲ್ಪನೆ ಕರಾವಳಿಯಲ್ಲಿ ಬದಲಾಗಿದೆ. ಸರ್ಕಾರ ಪುಣ್ಯಕ್ಷೇತ್ರಗಳನ್ನಾಧರಿಸಿದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಕಾಲ ಹತ್ತಿರವಾಗಿದೆ.

(ಲೇಖನ:ವಿಷ್ಣು ಭಾರದ್ವಾಜ್)