ಮುಖ್ಯ ಪುಟ  ಮನರಂಜನೆ  ಪ್ರವಾಸೋದ್ಯಮ  ಕರ್ನಾಟಕ ದರ್ಶನ
 
ಬೇಲೂರು- ಶಿಲೆಗೂ ಇಲ್ಲಿ ಬಳುಕು ಬೆಡಗಿನ ವಯ್ಯಾರ
webdunia
Picture
PTI
ದಕ್ಷಿಣ ಭಾರತದ ಶಿಲ್ಪಕಲೆಯ ಶ್ರೀಮಂತಿಕೆಯ ದರ್ಶನವಾಗಬೇಕಿದ್ದರೆ, ಹಾಸನ ಜಿಲ್ಲೆಯ ಬೇಲೂರು ಹಳೆಬೀಡಿಗೊಮ್ಮೆ ತೆರಳಬೇಕು. ಹಾಸನದಿಂದ ಬೇಲೂರಿಗೆ 37 ಕಿಮೀ ದೂರ. ಬೆಂಗಳೂರಿನಿಂದ ಬೇಲೂರಿಗೆ 222 ಕಿಮೀಗಳು.

ಹಳೆಬೀಡಿಗೆ ಮುನ್ನ ಬೇಲೂರು ಹೊಯ್ಸಳರ ರಾಜಧಾನಿಯಾಗಿತ್ತು. ಬೇಲೂರನ್ನು ವೇಲಾಪುರಿ ಎಂದೂ ಕರೆಯಲಾಗುತ್ತಿತ್ತು ಎಂದು ಶಾಸನಗಳು ಹೇಳುತ್ತವೆ.ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ದೊರೆ, ರಾಜ ವಿಷ್ಣುವರ್ಧನ ಕಟ್ಟಿಸಿದ ಚೆನ್ನಕೇಶವ ದೇವಾಲಯ ತನ್ನ ಅಪೂರ್ವ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ.

ದೋವಾಲಯದ ಗೋಡೆಯ ಸುತ್ತ ವಿವಿಧ ಭಂಗಿಗಳಲ್ಲಿ ಜಕ್ಕಣಾಚಾರಿ ಎಂಬ ಶಿಲ್ಪಿ ಕಡೆದ ಮೂರ್ತಿಗಳ ಭಾವಭಂಗಿಯ ಬಿಂಬ ನಿಜಕ್ಕೂ ಅದ್ಬುತ. ಇಲ್ಲಿ ಕೆತ್ತಲ್ಪಟ್ಟಿರುವ ಶಿಲಾಬಾಲಿಕೆಗಳು, ಸೌಂದರ್ಯಪ್ರಜ್ಞೆ, ಕೇಶವಿನ್ಯಾಸಗಳ ಕೆತ್ತೆನೆ ಥಳುಕು, ಬಳಕು ಬೆರಗು ಮೂಡಿಸುತ್ತದೆ. ದೇವಾಲಯದ ಗೋಡೆಯಲ್ಲಿ ಬಿಂಬಿಸಲಾಗಿರುವ ಲಲನೆಯರ ಕೇಶವಿನ್ಯಾಸಗಳು ಯಾವ ಆಧುನಿಕ ಶೈಲಿಗೂ ಕಮ್ಮಿ ಇಲ್ಲದಂತಿವೆ.

ಶಿಲಾಬಾಲಿಕೆಗಳು ಸೌಂದರ್ಯದ ಪ್ರತೀಕವಾಗಿವೆ. ಸುಖಭಾಷಿಣಿ, ದರ್ಪಣ ಸುಂದರಿ, ಹೀಗೆ ಶಿಲಾಬಾಲಿಕೆಗಳು ಹೆಸರು ಪಡೆದುಕೊಂಡಿವೆ.
ಹೊಯ್ಸಳ ವಂಶದ ಸ್ಥಾಪಕ ಸಳನೆಂಬ ಯುವಕ ಹುಲಿಯನ್ನು ಬರಿಯ ಕೈಗಳಿಂದ ಕೊಲ್ಲುವ ದೃಶ್ಯಗಳು ದೇವಾಲಯದ ಬಾಗಿಲಲ್ಲಿದೆ.ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಿಸಲಾಗಿರುವ ದೇವಾಲಯದ ಗೋಡೆಯಲ್ಲಿರುವ ಜಾಲಂಧ್ರಗಳು ವೈಶಿಷ್ಠ್ಯಪೂರ್ಣವಾಗಿವೆ.

ದೇವಾಲಯದೊಳಗೆ ಸುಂದರ ಕೆತ್ತನೆಯ ಕಲ್ಲಿನ ಕಂಬಗಳು ಇವೆ.ದೇವಾಲಯದ ಆವರಣದಲ್ಲಿ ಚೆನ್ನಕೇಶವ ದೇವಸ್ಥಾನ, ಕಪ್ಪೆ ಚೆನ್ನಿಗರಾಯ ದೇವಸ್ಥಾನ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ ವೀರನಾರಾಯಣ ದೇವಸ್ಥಾನಗಳು ಇವೆ.

ದೇವಾಸ್ಥಾನದ ಆವರಣದ ಎಡಭಾಗದಲ್ಲಿರುವ 40 ಅಡಿಗಳ ಎತ್ತರದ ಕಂಬವೊಂದು ಇಲ್ಲಿನ ಇನ್ನೊಂದು ಆಕರ್ಷಣೆ. ನಕ್ಷತ್ರಾಕಾರದ ಪೀಠದ ಮೇಲಿರುವ ಈ ದೀಪಾಲೆ ಕಂಬ ಯಾವ ಆಧಾರವೂ ಇಲ್ಲದೆ ನಿಂತಿದೆ. ಕಂಬದ ಕೆಳಗಡೆ ಇರುವ ಸಂದಿಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ನೋಡುವಷ್ಟು ಅಂತರವಿದೆ.ಗುರುತ್ವ ಕೇಂದ್ರ ಸ್ತಂಭವೆಂಬ ಹೆಸರಿದೆ.

ಬೇಲೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಹಳೆಬೀಡು ಹೊಯ್ಸಳರ ಕಾಲದ ದ್ವಾರ ಸಮುದ್ರ. ಉತ್ತರದ ಮುಸ್ಲಿಂ ಆಡಳಿತಗಾರರ ಆಕ್ರಮಣಕ್ಕೆ ತುತ್ತಾದ ಹಳೆಬೀಡು ಈಗ ಭಗ್ನಾವಶೇಷಗಳನ್ನು ಹೊತ್ತು ನಿಂತಿದೆ. ಐದು ಅಡಿ ಎತ್ತರದ ವೇದಿಕೆಯ ಮೇಲೆ ನಿಂತಿರುವ ಈ ದೇವಾಲಯ ಬೇಲೂರು ದೇವಾಲಯಕ್ಕಿಂತ ದೊಡ್ಡದು. ಇಲ್ಲಿನ ದೇವಾಲಯದ ಗೋಡೆಗಳಲ್ಲಿ ಏಳು ಸ್ತರಗಳಲ್ಲಿ ಕಲಾಕೃತಿಗಳಿವೆ.

ಇವಷ್ಟೆ ಅಲ್ಲದೆ ಇಲ್ಲಿ ಇನ್ನೂ ಅನೇಕ ಚಾರಿತ್ರಿಕ ಅಂಶಗಳು ನೋಡಲಿವೆ. ಇಂತೆಡೆಗೆ ತೆರಳುವಾಗ ಇತಿಹಾಸದ, ವಾಸ್ತುಶಿಲ್ಪ, ಶಿಲ್ಪಕಲೆಗಳ ಕುರಿತು ಕೊಂಚ ಅರಿವು ಇದ್ದರೆ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಆಸಕ್ತಿಯಿಂದ ಇವುಗಳನ್ನು ವೀಕ್ಷಿಸಲಾಗುತ್ತದೆ. ಗಡಿಬಿಡಿಯಲ್ಲಿ ಅರ್ಧಂಬರ್ಧ ನೋಡಿ ಗೊಂದಲಕ್ಕೊಳಗಾಗುವ ಬದಲು ನಿಧಾನಕ್ಕೆ ನೋಡಲು ಆಗುವಷ್ಟು ಸಮಯ ಹೊಂದಿಸಿಕೊಂಡು ಹೋಗಿ ಬೇಲೂರು ಹಳೆಬೀಡಿಗೆ.

(-ಚಂದ್ರಾವತಿ ಬಡ್ಡಡ್ಕ)
ಮತ್ತಷ್ಟು
ಕರಾವಳಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮ