ಮುಖ್ಯ ಪುಟ  ಮನರಂಜನೆ  ಪ್ರವಾಸೋದ್ಯಮ  ಕರ್ನಾಟಕ ದರ್ಶನ
 
ಮುತ್ತು ರತ್ನಗಳನ್ನು ಬಳ್ಳದಲ್ಲಿ ಅಳೆದ ನಾಡು ಹಂಪಿ
ವಿರೂಪಾಕ್ಷ ದೇವಾಲಯವಲ್ಲದೆ, ವಿಜಯ ವಿಠಲ, ಹಜಾರ ರಾಮ, ಬಾಲಕೃಷ್ಣ ದೇವಾಲಯಗಳು, ಯೋಗಾನರಸಿಂಹನ ಮೂರ್ತಿ, ಕಲ್ಲಿನ ರಥ, ಹೇಮ ಕೂಟ ದೇವಾಲಯ, ಕಮಲ ಮಹಲ್ ಕಲ್ಲಿನ ರಥ ಆಕರ್ಷಣೀಯ. ಚಲಿಸು ಗಾಲಿಗಳನ್ನು ಹೊಂದಿರುವ ಕಲ್ಲಿನ ರಥವೇ ಒಂದು ದೇವಾಲಯದಂತೆ ತೋರುತ್ತದೆ.ಹಂಪಿಯಲ್ಲಿ ನೋಡಿದಷ್ಟು ಮುಗಿಯದ, ಮತ್ತೆ ಮತ್ತೆ ನೋಡಬೇಕೆನಿಸುವ ಅನೇಕ ಸ್ಥಳಗಳಿವೆ. ಅಕ್ಕ ತಂಗಿ ಗುಡ್ಡ, ಆನೆಗೊಂಡಿ, ಆಂಜನೇಯಾದ್ರಿ ಬೆಟ್ಟ, ಬೋಜನಶಾಲಾ, ಗೆಜ್ಜಾಲ ಮಂಟಪ, ಮಾತುಂಗ ಬೆಟ್ಟ, ಪಂಪಾ ಸರೋವರ, ಸೀತಾ ಕೊಂಡ ಒಂದೇ, ಎರಡೇ- ಹಲವು, ಹಲವಾರು....

ಇಂತಹ ಐತಿಹಾಸಿಕ ಸಿರಿವಂತಿಕೆಯನ್ನು ಬಿಂಬಿಸುವ ಸ್ಮಾರಕಗಳ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳು ನಡೆದಿಲ್ಲವೆಂದು ವಿಷಾದದಿಂದಲೇ ಹೇಳಬೇಕು. ಆದರೂ ಕೆಲವು ವರ್ಷಗಳ ಹಿಂದೆಗೆ ಹೋಲಿಸಿದರೆ ಈಗ ಅರಿವು ಹುಟ್ಟಿಕೊಂಡಿದ್ದು, ಪರಿಸ್ಥಿತಿ ಸುಧಾರಿಸಿದೆ ಎಂದೇ ಹೇಳಬಹುದು.ಆ ಕಾಲದಲ್ಲಿ ಅದ್ಭುತ ಸೌಂದರ್ಯವನ್ನು ಹೊಂದಿದ್ದ ಈ ನೆಲದಲ್ಲಿ ಕೆಲವು ಅಕ್ರಮಗಳು ಮತ್ತು ಅನೈತಿಕತೆಗಳು ನಡೆಯುತ್ತವೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ತಡೆಯೊಡ್ಡಿದಲ್ಲಿ, ವಿರೂಪಗೊಂಡಿರುವ ಹಂಪೆಯ ಕುರೂಪ ತೊಲಗಬಹುದಲ್ಲವೇ ಎಂದು ನಾವು ನಮ್ಮನಮ್ಮಲ್ಲಿಯೇ ಚರ್ಚಿಸಿಕೊಂಡಿದ್ದೆವು.

ಹಂಪಿಯನ್ನು ನೋಡಿ ನೋಡಿಯೇ ಸುಸ್ತಾಗಿತ್ತು. ತಿರುಗಾಡಿ ಕಾಲು ದಣಿದಿತ್ತು. ತಲೆತುಂಬಿಹೋಗಿತ್ತು. ಅದೊಂದು ಕಾಲದಲ್ಲಿ ಶೋಭಾಯ ಮಾನವಾಗಿ, ಅದ್ಧೂರಿಯ ಅಬ್ಬರ ಮೆರೆದ ಬೀದಿಗಳಲ್ಲಿ, ನಮ್ಮ ಟ್ರಿಪ್ಪಿನ ಕೊನೆಯ ದಿನ ಸಂಜೆಯ ತಂಗಾಳಿಯ ತಂಪಿಗೆ ನನ್ನನ್ನು ಒಡ್ಡಿಕೊಂಡು ಮೌನವಾಗಿ ತಲೆಬಗ್ಗಿಸಿ ಕುಳಿತಿದ್ದೆ. ವಿದಾಯ ಹೇಳಲು ಮನಸ್ಸಿಗಿಷ್ಟವಿರಲಿಲ್ಲ.

ಜತೆಯಲ್ಲಿದ್ದ ಗೆಳತಿಯರು ಸುಸ್ತಾಗಿದ್ದರೂ ಕೀಟಲೆಗೆ ಕಮ್ಮಿಯಿರಲಿಲ್ಲ. ಮುತ್ತು ರತ್ನವೇನಾದರೂ ಸಿಗುತ್ತೆ ಅಂತ ಹುಡುಕುತ್ತಿದ್ದಿಯಾ ಅಂತ ಛೇಡಿಸಿದರು. ನೀನೇನು ಹುಡಿಕಿದರೂ ಸಿಗದು ಬಾ ಮನೆಗೆ ಹೋಗೋಣ ಅಂದಳು ಮಂಗಳಾ. ನೆನಪಿಗೆ ಸಿಕ್ಕಷ್ಟು ಮನದಲ್ಲಿ ಹುದುಗಿಸಿಕೊಂಡು, ತಿರುತಿರುಗಿ ನೋಡುತ್ತಾ, ಮತ್ತೊಮ್ಮೆ ಹಂಪಿಗೆ ಬರುವ ನಿರ್ಧಾರದೊಂದಿಗೆ, ಬಹುಕಾಲದ ಕನಸು ನನಸಾದ ಖುಷಿಯೊಂದಿಗೆ ಮರಳಿದೆವು.

ಚಂದ್ರಾವತಿ ಬಡ್ಡಡ್ಕ
1| 2
ಮತ್ತಷ್ಟು
ಕೊಡಗಿನ ತಲಕಾವೇರಿ
ಸೊಬಗಿನ ಗಿರಿವನಗಳ ಹಸಿರಿನ ಬೀಡಿದು ಕೊಡಗು
ಚೆಲುವು ಒಲವಿನ ಆಗುಂಬೆಯ ನೋಡಬನ್ನಿ
ಆನೆಗುಡ್ಡೆ ವಿನಾಯಕ ದೇವಸ್ಥಾನ
ಬೇಲೂರು- ಶಿಲೆಗೂ ಇಲ್ಲಿ ಬಳುಕು ಬೆಡಗಿನ ವಯ್ಯಾರ
ಕಾರವಾರ: ಹಣವುಳ್ಳವನಿಗೆ ಗೋಕರ್ಣ ಎಂಬ ಮಾತು ಈಗಿಲ್ಲ..!