ಅವಿನಾಶ್ ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸಿರು ಗಿರಿವನಗಳ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ತೊರೆಗಳು, ದಟ್ಟ ಕಾಡುಗಳ, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳ ಮಧ್ಯೆ ಮಿಂಚು ಸುಳಿದಂತೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು, ತನುವಿಗೂ ಮನಸಿಗೂ ಮುದ ನೀಡುವ ತಂಪು ತಂಪಾದ ಪರಿಸರ. ದೈನಂದಿನ ಜಂಜಾಟದಲ್ಲಿ ಬೆಂದು ನೊಂದ ಮನಗಳಿಗೆ ವಿಶ್ರಾಂತಿಯ ಸವಿ ಉಣಿಸುವ ರಮಣೀಯ ತಾಣ ಕೊಡಗು.
ಕರ್ನಾಟಕ ರಾಜಧಾನಿಯಿಂದ 250 ಕಿ.ಮೀ. ದೂರ ಹಾಗೂ ಸಮುದ್ರಮಟ್ಟದಿಂದ 1525 ಮೀಟರ್ ಎತ್ತರದಲ್ಲಿರುವ ಮಡಿಕೇರಿಯು ಕೊಡಗಿನ ಜಿಲ್ಲಾ ಕೇಂದ್ರ. ಭಾರತದ ಸ್ಕಾಟ್ಲೆಂಡ್ ಎಂಬ ಹೆಸರು ಗಳಿಸಿರುವ ಈ ನಾಡು, ಕೊಡಗಿನ ಕಿತ್ತಳೆ, ಕಾಫಿ, ಏಲಕ್ಕಿ, ಚಹಾ ತೋಟ, ಮಂಜು ಮುಸುಕಿದ ಕಾಡಿಗೆ ಪ್ರಸಿದ್ಧವಾಗಿದ್ದು, ಅತ್ಯದ್ಭುತ ಪ್ರವಾಸೀ ಧಾಮವಾಗಿ ಕಣ್ಮನ ಸೆಳೆಯುತ್ತಿದೆ.
ಕೊಡಗು ಎನ್ನುವುದರ ಮೂಲ ಹೆಸರು ಕೊಡೈಮಲೆನಾಡು ಎಂಬುದು. ಅಂದರೆ ಕಡಿದಾದ ಬೆಟ್ಟದಲ್ಲಿರುವ ದಟ್ಟ ಅರಣ್ಯ ಎಂದರ್ಥ. ಈ ಕೊಡಗಿನ ನಾಡಿನವರು ಕೊಡವರು. ಕನ್ನಡದಲ್ಲಿ ಈ ಪದಗುಚ್ಛದ ಮೂಲವನ್ನು ಹುಡುಕಿದರೆ, ಇದಕ್ಕೂ "ಕೊಡವ್ವ" ಅಂತ ಬೇಡಿಕೊಳ್ಳುವುದಕ್ಕೂ ಹತ್ತಿರದ ಸಂಬಂಧವಿದೆ ಅನಿಸುತ್ತದೆ. ಕೊಡ ಅಂದರೆ ಆಡುಭಾಷೆಯಲ್ಲಿ "ಕೊಡು", ಅವ್ವ ಅಂದರೆ ಕೊಡಗಿನಿಂದಲೇ ಹುಟ್ಟುವ ಪವಿತ್ರ ನದಿ ಕಾವೇರಿಯ ಸಂಬೋಧನೆ. ಇದೇ ಕಾರಣಕ್ಕೆ ಇಲ್ಲಿನವರು ಕೊಡವರು, ಇವರಾಡುವ ನುಡಿ ಕೊಡವ ಭಾಷೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ತನ್ನದೇ ಆದ ಹೆಸರು. ಕೂರ್ಗ್. ಇಲ್ಲಿನವರು ಕೂರ್ಗೀಸ್. ಜನರ ಆಡುಭಾಷೆ ಕೊಡವ ಆದರೂ, ಕನ್ನಡ, ತಮಿಳು, ಮಲಯಾಳ ಕೂಡ ಇಲ್ಲಿನವರಿಗೆ ಹತ್ತಿರ.
ಕೊಡಗಿಗೇ ವಿಶೇಷವಾಗಿರುವ ಮೂರು ಪ್ರಧಾನ ಹಬ್ಬಗಳಿವೆ. ಅವೆಂದರೆ ಸಾಂಪ್ರದಾಯಿಕ ಹುತ್ತರಿ ಹಬ್ಬ, ಕೈಲ್ ಪೊಲ್ದು ಹಾಗೂ ಕಾವೇರಿ ಸಂಕ್ರಮಣ. ಕಾವೇರಿಯ ಉಗಮಸ್ಥಾನ ತಲಕಾವೇರಿ ಇರುವುದು ಕೊಡವ ನಾಡಿನಲ್ಲೇ ಈ ಕಾರಣಕ್ಕೆ ಕಾವೇರಿ ಸಂಕ್ರಮಣಕ್ಕೆ ಹೆಚ್ಚಿನ ಮಹತ್ವ. ಈ ಮೂರು ಹಬ್ಬಗಳು ಬರುವುದು ಕೂಡ ಸೆಪ್ಟೆಂಬರ್-ಡಿಸೆಂಬರ್ ತಿಂಗಳ ನಡುವೆ.
|