ಕೃಷ್ಣದಾಸ್ಅರುಣಾಚಲ ಪ್ರದೇಶದಲ್ಲಿ ಚೀನಾದ ಗಡಿಯಲ್ಲೇ ಇರುವ ಪವಿತ್ರ ಶಾಂತಿಧಾಮ ತವಾಂಗ್. ತವಾಂಗ್ ಅರುಣಾಚಲ ಪ್ರದೇಶದ ಜಿಲ್ಲೆಯಾದರೂ, ಅದರ ಖ್ಯಾತಿಗೆ ಕಾರಣ ಅಲ್ಲಿರುವ ಪ್ರಸಿದ್ಧ ಶಾಂತಿಧಾಮ. ಮಂಜು, ಹಿಮದಲ್ಲಿ ಅರಳಿದ ಹಸಿರು ಸುಂದರ ಪ್ರಾಕೃತಿಕ ಸೊಬಗಿನ, ನಯನ ಮನೋಹರ ದೃಶ್ಯಗಳಿರುವ ತವಾಂಗ್‌ಗೆ ಸಾಗುವುದು ಕಣ್ಣಿಗೆ, ಮನಸ್ಸಿಗೆ ಹಬ್ಬವೋ ಹಬ್ಬ.ತವಾಂಗ್ ಚೀನಾಕ್ಕೆ ಸೇರಿದ್ದೆಂದು ಹಲವು ಚೀನಾ ಅಧಿಕಾರಿಗಳು ಪ್ರತಿ ಬಾರಿಯೂ ಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಹಾಗೂ ಈ ಪ್ರದೇಶ ಆರನೇ ದಲಾಯಿ ಲಾಮಾ ಹುಟ್ಟಿದ ಪವಿತ್ರ ಸ್ಥಳ ಎಂಬುದು ಅವರ ವಾದ. ಆದರೆ ಗಡಿಯ ರೇಖೆಗಳಲ್ಲಿ ನೋಡಿದರೆ ತವಾಂಗ್ ಭಾರತಕ್ಕೆ ಸೇರುತ್ತದೆ. ಮೊನ್ಯುಲ್ ಎಂದೂ ಕರೆಯಲ್ಪಡುವ ತವಾಂಗ್ 1951ರವರೆಗೆ ತವಾಂಗ್ ಟಿಬೇಟಿಯನ್ ಸರ್ಕಾರದ ಒಡೆತನದಲ್ಲಿತ್ತು.ಸ್ಥಳೀಯ ಅರುಣಾಚಲ ಪ್ರದೇಶ ನಿವಾಸಿಗಳು ಮಾತ್ರ ಈ ಬಗ್ಗೆ ಹಲವು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ಅವರು ಭಾರತದಲ್ಲಿರುವುದನ್ನೇ ಇಷ್ಟಪಡುತ್ತಾರೆ. ಅವರಿಗೆ ಹಿಂದಿ ಸಿನಿಮಾ ಹಾಡುಗಳೆಂದರೆ ಇಷ್ಟ. ಹಿಂದಿ ಚೆನ್ನಾಗಿ ಮಾತನಾಡಲು ಬರುತ್ತದೆ. ತವಾಂಗ್‌ನ ಪ್ರಸಿದ್ಧಿಗೆ ಕಾರಣ ಅಲ್ಲಿರುವ 400 ವರ್ಷಗಳ ಹಳೆಯ ತವಾಂಗ್ ಶಾಂತಿಧಾಮ. ಅರ್ಥಾತ್ ತವಾಂಗ್ ಮಠ. ಅದು ಸಮುದ್ರ ಮಟ್ಟದಿಂದ 3,500 ಮೀಟರ್ ಎತ್ತರದಲ್ಲಿದೆ. ಎತ್ತರದಲ್ಲಿ ಕೋಟೆಯಂತಹ ಕಟ್ಟಡವೂ ಇದೆ. ಇಲ್ಲಿ 30 ಅಡಿ ಎತ್ತರದ ಮರದ ಬುದ್ಧನ ವಿಗ್ರಹವಿದೆ. ಕೋಟೆಯಂತಹ ಈ ಬೌದ್ಧ ವಿಹಾರ ಧಾಮದಲ್ಲಿ ಸುಮಾರು 700ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು ತಂಗಲು ಜಾಗವಿದೆ.ಅಲ್ಲಿನ ದಾಖಲೆಗಳ ಪ್ರಕಾರ, ತವಾಂಗ್ ಎಂಬ ಹೆಸರು ಕುದುರೆಯಿಂದಾಗಿ ಬಂತಂತೆ. 'ತ' ಅಂದರೆ ಕುದುರೆ, ವಾಂಗ್ ಅಂದರೆ ಹೆಕ್ಕಿದ್ದು ಎಂಬರ್ಥ. ವಿಹಾರಧಾಮದ ಪಕ್ಕವೇ ದೊಡ್ಡದೊಂದು ಮ್ಯೂಸಿಯಂ ಕೂಡಾ ಇದೆ. ಅಲ್ಲಿ ಪುರಾತನ ಲಿಪಿಗಳು, ಕಲಾತ್ಮಕ ಕೆತ್ತನೆಗಳು, ತಾಳೆಗರಿಗಳನ್ನು ಇಡಲಾಗಿದೆ. 1997ರಲ್ಲಿ ದಲಾಯಿ ಲಾಮ ಈ ಇಡಿಯ ವಿಹಾರಧಾಮವನ್ನು ಪುನರುಜ್ಜೀವನಗೊಳಿಸಿದ್ದರು.ಸ್ಥಳೀಯರು ತುಂಬ ಸುಂದರರು. ಮಾನ್ಪಾಸ್ ಎಂದು ಕರೆಯಲ್ಪಡುವ ಬುಡಕಟ್ಟು ಜನಾಂಗದವರು ಕಲ್ಲಿನ ಮನೆಗಳಲ್ಲಿ ವಾಸಿಸುತ್ತಾರೆ. ಹಾಗೂ ಕೃಷಿಯನ್ನೇ ಉದ್ಯೋಗವಾಗಿಸಿಕೊಂಡಿದ್ದಾರೆ. ಜತೆಗೆ ಟಿಬೆಟಿಯನ್ ಶೈಲಿಯ ಕಾರ್ಪೆಟ್, ಶಾಲುಗಳನ್ನೂ ತಯಾರಿಸುತ್ತಾರೆ. ಬಳಸುತ್ತಾರೆ.ಅರುಣಾಚಲ ಪ್ರದೇಶದ ತುಂಬ ಆರ್ಕಿಡ್‌ಗಳೇ ಮೇಳೈಸಿದ್ದು ಚಂದನೆಯ ಪ್ರಕೃತಿ ಸೊಬಗೂ ಆಕರ್ಷಿಸುತ್ತದೆ. ತವಾಂಗ್ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರದೇಶವಾದ್ದರಿಂದ ಸಹಜವಾಗಿಯೇ ಅರುಣಾಚಲ ಪ್ರದೇಶ ಪ್ರವಾಸಿಗರ ತಾಣ. ಪ್ರವಾಸಿಗರ ಹರಿವು ಹೆಚ್ಚಿದ್ದರೂ, ತವಾಂಗ್ ತನ್ನ ಸುಂದರ ಪ್ರಾಕೃತಿಕ ಸೊಬಗನ್ನು ಕಳೆದುಕೊಂಡಿಲ್ಲ. ರಾಕೇಶ್ ರೋಷನ್‌ರ ಕೊಯ್ಲಾ (ಶಾರುಖ್ ಖಾನ್, ಮಾಧುರಿ ದೀಕ್ಷಿತ್) ಹಿಂದಿ ಸಿನಿಮಾದ ಶೂಟಿಂಗ್ ತವಾಂಗ್‌ನಲ್ಲೇ ನಡೆದಿತ್ತು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನಲ್ಲೂ ಕೊಯ್ಲಾ ಶೂಟಿಂಗ್ ಬಗ್ಗೆ ಕೇಳಿದರೆ ಅದು ನಡೆದ ಜಾಗ ತೋರಿಸುತ್ತಾರೆ. ಇಲ್ಲಿ ಮಾಧುರಿ ದೀಕ್ಷಿತ್ ಕುಣಿದುದು, ಅಲ್ಲಿ ಶಾರುಖ್ ಖಾನ್ ಹೆಲಿಕಾಪ್ಟರ್‌ನಿಂದ ಹಾರಿದ್ದು ಎಂದೆಲ್ಲ ಉತ್ಸುಕತೆಯಿಂದ ವಿವರಣೆ ನೀಡುತ್ತಾರೆ.ತವಾಂಗ್‌ಗೆ ತೇಜ್‌ಪುರದಿಂದ ನಾರಂನೇಂಗ್ ಜಲಪಾತದ ದಾರಿಯಾಗಿ ಹೋಗುವಾಗ ಬ್ರಹ್ಮಪುತ್ರ ನದಿಯ ಅಬ್ಬರ ಕಾಣುತ್ತದೆ. ಅಸ್ಸಾಂ ಉತ್ತರ ಭಾಗದಿಂದ ಹಾದು ಹೋಗುವಾಗ 1962ರ ಹಿಮಾಲಯನ್ ಬ್ಲಂಡರ್ ನೆನಪಾಗದೆ ಇರಲು ಸಾಧ್ಯವೇ ಇಲ್ಲ. ಚೀನಾದ ಸೈನಿಕರು ಭಾರತ ಗಡಿಯೊಳಗೆ ಅಕ್ರಮವಾಗಿ ನುಗ್ಗಿದ ವರ್ಷ ಅದು. ತವಾಂಗ್‌ಗೆ ಸಾಗುವಾಗ ದಕ್ಕುವ ನಯನ ಮನೋಹರ ದೃಶ್ಯಗಳಲ್ಲಿ ದಿರಾಂಗ್ ಕಣಿವೆಯೂ ಒಂದು. ಪ್ರಪಾತಗಳ ನಡುವೆ ಸಾಗುವ ಹಾವಿನಂತಹ ರಸ್ತೆಯಲ್ಲಿ ಸಾಗುವಾಗ ಎಂತಹ ಧೈರ್ಯ ಶಾಲಿಗೂ ಎದೆ ಝಲ್ಲೆನ್ನದೆ ಇರದು. ಹಾದಿ ಮಧ್ಯೆ ಟೀ ಎಸ್ಟೇಟ್‌ಗಳ ಹಸಿರು ಕಣ್ಣಿಗೆ ಮುದ ನೀಡುತ್ತದೆ. ಅರುಣಾಚಲ ಪ್ರದೇಶ ತುಂಬ ಸುಂದರ ಪ್ರಾಕೃತಿಕ ಸೌಂದರ್ಯ ಹೊಂದಿದ ಪ್ರದೇಶ. ಇಲ್ಲಿ 600 ತಳಿಯ ಆರ್ಕಿಡ್‌ಗಳಿವೆ. ಆದರೆ ತವಾಂಗ್‌ಗೆ ಭೇಟಿ ನೀಡಬೇಕೆಂದರೆ, ಅನುಮತಿ ಬೇಕು. ವಿದೇಶೀಯರಾದರೆ, ವಿಶೇಷ ಅನುಮತಿ ಅಗತ್ಯ. ಆದರೆ ಅನುಮತಿ ಪಡೆದು ಅಲ್ಲಿಗೆ ಭೇಟಿ ನೀಡಿದರೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆಯೇ. ಯಾಕೆಂದರೆ ಅಂತಹ ಅದ್ಭುತ ಸೌಂದರ್ಯವನ್ನು ಆಸ್ವಾದಿಸುವುದು ಒಂದು ಜೀವಮಾನದ ಸುಂದರ ನೆನಪು. |