ಭೂಮಿಯನ್ನು ಉಳಿಸಬೇಕೆಂದಿದ್ದೀರಾ? ಪ್ರಕೃತಿಗೆ ಒಳಿತಾಗಬೇಕೆಂದು ಬಯಸಿದ್ದೀರಾ? ಹಾಗಾದರೆ, ನೀವು ಮಾಡಬೇಕಾದ ಮೊದಲ ಕೆಲಸ ತೆಳ್ಳಗಾಗುವುದು! ನಿಮ್ಮ ದೇಹದ ಬಗ್ಗೆ ಮೊದಲ ಗಮನ ಕೊಟ್ಟು ಸ್ಲಿಮ್ ಆಗಿದ್ದರೆ ನಿಮಗೂ ಒಳ್ಳೇದು, ಭೂಮಿಯ ಉಳಿವಿಗೂ ಒಳ್ಳೇದು. ಹಾಗಂತ ಸಂಶೋಧನಾ ಸಮೀಕ್ಷೆಯೊಂದು ಸತ್ಯ ಹೊರಗೆಳೆದಿದೆ.ಹೆಚ್ಚು ಭಾರ ಹೊಂದಿರುವ ಮಂದಿ ತೆಳ್ಳಗಿರುವವರಿಗಿಂತ ಹೆಚ್ಚು ತಿನ್ನುತ್ತಾರೆ. ಜತೆಗೆ ಅಂಥ ಮಂದಿ ಹೆಚ್ಚು ಕಾರಿನಲ್ಲೇ ಪ್ರಯಾಣ ಮಾಡುತ್ತಾರೆ. ನಡೆಯುವುದೂ ಕಡಿಮೆ. ಇದರಿಂದ ದೇಹಭಾರ ಹೆಚ್ಚುತ್ತಲೇ ಹೋಗುತ್ತದೆ. ಇದು ಪ್ರಕೃತಿಗೆ ತೆಳ್ಳಗಿನ ವ್ಯಕ್ತಿಗಳಿಗಿಂತ ಎರಡು ಪಟ್ಟು ಹಾನಿಕರ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರೋಪಿಕಲ್ ಮೆಡಿಸಿನ್ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ.ಬ್ರಿಟೀಶ್ ವಿಜ್ಞಾನಿಗಳು ಹೇಳುವ ಪ್ರಕಾರ, ಪ್ರತಿ ದಪ್ಪ ಮನುಷ್ಯ ತೆಳ್ಳಗಿನ ಮನುಷ್ಯನಿಗಿಂತ ವರ್ಷಕ್ಕೆ ಒಂದು ಟನ್‌ನಷ್ಟು ಇಂಗಾಲದ ಡೈ ಆಕ್ಸೈಡನ್ನು ಹೆಚ್ಚು ಬಿಡುಗಡೆ ಮಾಡುತ್ತಾನೆ. ಇದರಿಂದ ಒಂದು ಬಿಲಿಯನ್ ದಪ್ಪ ದೇಹದವರು ವರ್ಷಕ್ಕೆ ಒಂದು ಬಿಲಿಯನ್ ಟನ್ ಇಂಗಾಲದ ಡೈ ಆಸ್ಕೈಡನ್ನು ವಾತಾವರಣಕ್ಕೆ ಬಿಡುಗಡೆ ಮಾಡಿ ವಾತಾರವಣಕ್ಕೆ ಮಾರಕರಾಗುತ್ತಾರೆ. ಹಾಗಾಗಿ ದಪ್ಪಗಿರುವ ಮಂದಿಗೆ ಹೋಲಿಸಿದರೆ, ಒಂದು ಬಿಲಿಯನ್ ಜನಸಂಖ್ಯೆಯ ಮಂದಿಯಲ್ಲಿ ಎಲ್ಲರೂ ತೆಳ್ಳಗಿದ್ದರೆ, ಅವರು ಒಂದು ಸಾವಿರ ಮಿಲಿಯನ್ ಟನ್‌ಗಳಷ್ಟು ಕಡಿಮೆ ಇಂಗಾಲದ ಡೈ ಆಕ್ಸೈಡನ್ನು ಹೊರಗೆ ಬಿಡುತ್ತಾರೆ. ಒಂದು ಅಂದಾಜಿನ ಪ್ರಕಾರ, ಪ್ರತಿ ದೇಶದಲ್ಲೂ ಸರಾಸರಿ ಬಾಡಿ ಮಾಸ್ ಇಂಡೆಂಕ್ಸ್ (ಬಿಎಂಐ) ಏರುತ್ತಿದೆ. ಇದರರ್ಥ, ಎಲ್ಲರೂ ದಪ್ಪಗಾಗುತ್ತಿದ್ದಾರೆ ಅಂತಲೇ ಎಂದು ಹೇಳುತ್ತದೆ ಲಂಡನ್ ಸ್ಕೂಲ್. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನ ಇತ್ತೀಚೆಗಿನ ವರದಿಗಳ ಪ್ರಕಾರ, ಅಮೆರಿಕದ 30 ರಾಜ್ಯಗಳ ಜನಸಂಖ್ಯೆಯಲ್ಲಿ ವಯಸ್ಕ ಮಂದಿಯಲ್ಲಿ ಕಾಲು ಭಾಗ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.ಅಲ್ಲದೆ, ದಪ್ಪಗಿರುವ ವ್ಯಕ್ತಿಗಳು ಹೆಚ್ಚು ತಿನ್ನುತ್ತಾರೆ. ಆಗ ಆಹಾರದ ಬಳಕೆಯೂ ಜಾಸ್ತಿಯಾಗುತ್ತದೆ. ದೇಹಕ್ಕೆ ಅಗತ್ಯವಿದ್ದಷ್ಟೇ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ವಾತಾವರಣದ ದೃಷ್ಟಿಯಿಂದಲೂ ಉತ್ತಮ ಎನ್ನುತ್ತಾರೆ ವಿಜ್ಞಾನಿಗಳು. ಪ್ರಕೃತಿಯಿಂದ ರಕ್ಷಿಸಲು ನಾವು ನಮ್ಮ ಭಾರವನ್ನು ಕಡಿಮೆಗೊಳಿಸಲೇ ಬೇಕಾಗಿದೆ. ಇಂಗಾಲದ ಡೈ ಆಸ್ಕೈಡ್ ಬಿಡುಗಡೆಯನ್ನು ಕಡಿಮೆಯಾದರೆ ವಾತಾವರಣದಲ್ಲೂ ಬದಲಾವಣೆಯಾಗುವುದು ನಿಶ್ಚಿತ. ಇದು ಹವಾಮಾನದ ಮೇಲೇ ಉತ್ತಮ ಪರಿಣಾಮ ಬೀರಬಲ್ಲುದು. ಹಾಗಾಗಿ ಕಡಿಮೆ ತಿನ್ನಿ, ತೆಳ್ಳಗಾಗಿ. ಭೂಮಿಯನ್ನು ಉಳಿಸುವ ಮೂಲಕ ನೀವು ಬದುಕಿ, ಇತರರನ್ನೂ ಬದುಕಲು ಬಿಡಿ ಎಂದು ವಿಜ್ಞಾನಿಗಳು ಕರೆನೀಡಿದ್ದಾರೆ. |