ಹಂದಿಜ್ವರ ವಿದೇಶಗಳಲ್ಲಿ ಪತ್ತೆಯಾದಾಗ ಅದೆಲ್ಲೋ ದೂರದಲ್ಲಿ ನಮಗೇನಿಲ್ಲ ಎಂಬ ಭಾವ ಮೂಡಿರಬಹುದು. ಭಾರತದಲ್ಲಿ ಮೊದಲ ಸೋಂಕು ಸುದ್ದಿಯಾದಾಗ, ರೋಗಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ; ಹಾಗಾಗಿ ಸೋಂಕು ಹರಡದು ಎಂಬ ಸಮಾಧಾನವಿತ್ತು. ಸೋಂಕು ತಗುಲಿದವರ ನಂಬರ್ ಹೆಚ್ಚುತ್ತಿರುವಂತೆ ಸೋಂಕು ಪೀಡಿದರು ಚಿಕಿತ್ಸೆಬಳಿಕ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ ಎಂಬ ನಿರಾಳತೆ ಇತ್ತು. ಆದರೆ ಪುಣೆಯಲ್ಲಿ ಬಾಲಕಿಯೊಬ್ಬಳು ರೋಗಗಕ್ಕೆ ಬಲಿಯಾದುದು ಮತ್ತು ಆ ಬಾಲಕಿಯ ಮನೆಯವರು ರೋಗಪತ್ತೆ ಹಚ್ಚುವಲ್ಲಿ ಖಾಸಗಿ ಆಸ್ಪತ್ರೆ ವಿಫಲವಾಗಿತ್ತು ಎಂದು ದೂರುತ್ತಿರುವುದು ಜನತೆಯನ್ನು ಬೆಚ್ಚಿಬೀಳಿಸಿ ಕಂಗಾಲಾಗಿಸಿದೆ. ಅಲ್ಲದೆ ಈ ರೋಗವು ಇದೀಗ ನಿಯಂತ್ರಣ ಮೀರಿ ಹಬ್ಬುತ್ತಿದೆ ಎಂಬ ಭಯ ಜನರನ್ನು ಕಾಡಲಾರಂಭಿಸಿದೆ.
ಶಾಲೆಗಳಲ್ಲಿ ಸೋಂಕು ಹಬ್ಬುತ್ತಿರುವುದು ಆತಂಕಕಾರಿಯಾಗಿದೆ. ಪುಣೆಯಲ್ಲಿ ಮತ್ತೆರಡು ಶಾಲೆಗಳನ್ನು ಸೋಂಕು ಪೀಡಿತ ಶಾಲೆ ಎಂಬ ಪಟ್ಟಿಗೆ ಸೇರಿಸಲಾಗಿದೆ. ದೆಹಲಿಯಲ್ಲಿ ಸಂಸ್ಕೃತ ಶಾಲೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚಲಾಗಿದೆ.
ಈ ಮಾರಣಾಂತಿಕ ರೋಗ ಹಾಗೂ ಇತರ ವೈರಲ್ ಸೋಂಕಿಗೂ ಹೆಚ್ಚಿನ ವ್ಯತ್ಯಾಸವಿಲ್ಲದೇ ಇರುವುದು ಸೋಂಕು ಪತ್ತೆಗೆ ಅಡ್ಡಿಯಾಗಿದೆ. ಇದಲ್ಲದೆ ಹಂದಿಜ್ವರದ ಕುರಿತು ಹಬ್ಬುತ್ತಿರುವ ವದಂತಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ.
ಈ ರೋಗದ ಲಕ್ಷಣಗಳೇನು? ಇಲ್ಲಿ ನೋಡೋಣ ಸ್ವೈನ್ ಫ್ಲೂ ಒಂದು ವೈರಲ್ ಸೋಂಕು ಆಗಿದ್ದು ಅದರ ಸಾಮಾನ್ಯವಾದ ಲಕ್ಷಣಗಳೆಂದರೆ, ಕಟ್ಟಿದ ಮೂಗು ಅಥವಾ ನೆಗಡಿ, ವಾಕರಿಕೆ, ಚಳಿ, ಕೆಮ್ಮು, ಗಂಟಲು ಬಿಗಿತ, ಗಂಟಲು ಕೆರೆತ, ಗಂಟಲೂತ, ಮೈಕೈನೋವು, ನಿಶ್ಶಕ್ತಿ ಮತ್ತು ಸುಸ್ತು.
ಇದಲ್ಲದೆ, ಉಸಿರಾಟದ ತೊಂದರೆ ಹಾಗೂ ಭೇದಿಯೂ ಕಾಣಿಸಿಕೊಳ್ಳಬಹುದು.
ಕೆಮ್ಮು, ಸೀನು ಅಥವಾ ಸೋಂಕುಪೀಡಿತ ಸ್ಥಳ ಅಥವಾ ವಸ್ತುಗಳನ್ನು ಮುಟ್ಟಿದ ಬಳಿಕ ನಿಮ್ಮ ಬಾಯಿ ಅಥವಾ ಮೂಗನ್ನು ಮುಟ್ಟುವ ಮೂಲಕ ಸೋಂಕು ಹಬ್ಬುತ್ತದೆ.
ನೀವು ಸೋಂಕು ಪೀಡಿತ ರಾಷ್ಟ್ರಕ್ಕೆ ಭೇಟಿ ನೀಡಿದರೆ ಅಥವಾ ಸೋಂಕು ಪೀಡಿತ ವ್ಯಕ್ತಿಯನ್ನು ಭೇಟಿಯಾದರೆ, ನಿಕಟ ಸಂಪರ್ಕಕ್ಕೆ ಬಂದರೆ ಎಚ್1ಎನ್1 ತಪಾಸಣೆ ಮಾಡಿಸಿಕೊಳ್ಳಿ.
ದೀರ್ಘಕಾಲ ವೈರಲ್ ಸೋಂಕಿನಿಂದ ಬಳಲುತ್ತಿದ್ದರೂ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ನಿರ್ಲಕ್ಷಿಸಬೇಡಿ.
ಮುಂಜಾಗೃತಾ ಕ್ರಮಗಳೇನು? ಶಾಲಾ ಕಾಲೇಜುಗಳಿಗೆ ತೆರಳುವವರು ಹಾಗೂ ಕೆಲಸಕ್ಕಾಗಿ ಮನೆಯಿಂದ ತೆರಳುವವರಿಗೆ ಅಪಾಯ ಹೆಚ್ಚು. ಹವಾನಿಯಂತ್ರಿತ ಕೊಠಡಿಗಳು ಹಾಗೂ ಮುಚ್ಚಿದ ವಾತಾವರಣದಲ್ಲಿ ಇರುವವರಿಗೂ ತಕ್ಷಣವೇ ರೋಗ ತಗಲುವ ಅಪಾಯ ಹೆಚ್ಚು.
ಬಳಸಿ ಎಸೆಯುವ(ಡಿಸ್ಪೋಸೇಬಲ್) ಟಿಶ್ಯೂಗಳನ್ನೇ ಬಳಸಿ. ಕೆಮ್ಮುವಾಗ ಮತ್ತು ಸೀನುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಯಾವಾಗಲೂ ಮುಚ್ಚಿಕೊಳ್ಳಿ. ಎಂಜಲು, ಕಫ ಉಗುಳುವ ವೇಳೆ ಬಳಸಿದ ಟಿಶ್ಯೂ ಎಸೆಯುವ ವೇಳೆ ಅತಿ ಜಾಗರೂಕತೆ ವಹಿಸಿ.
ಟೇಬಲ್ ಟಾಪ್‌ಗಳು, ಟೆಲಿಫೋನ್‌ಗಳು ಹಾಗೂ ಕಂಪ್ಯೂಟರ್‌ಗಳಲ್ಲಿ ಯಾವಾಗಲೂ ಕೆಲವು ವೈರಸ್‌ಗಳಿರುತ್ತವೆ. ಹಾಗಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇಪದೇ ಮುಟ್ಟಿಕೊಳ್ಳಬೇಡಿ.
ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವುದು ಸೋಂಕು ತಡೆಗೆ ಪರಿಣಾಮಕಾರಿ ಮಾರ್ಗ. ಆಲ್ಕೋಹಾಲ್ ಆಧಾರಿತ ಜೆಲ್ ಅಥವಾ ನೊರೆಬೀರುವ ಸ್ಯಾನಿಟೈಸರ್‌ಗಳ ಬಳಕೆ ಈ ವೈರಸ್‌ಗಳನ್ನು ಕೊಲ್ಲಲು ಪರಿಣಾಮಕಾರಿಯಾಗಿದೆ.
ಆಹಾರಪದಾರ್ಥಗಳು ಈ ರೋಗಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವಿಲ್ಲ. ಯಾಕೆಂದರೆ, ಇದು ಆಹಾರ ಸಂಬಂಧೀ ಕಾಯಿಲೆಯಲ್ಲ. ಸೋಂಕು ಪೀಡಿತ ರೋಗಿಗಳು ಕೆಮ್ಮುವ, ಸೀನುವವೇಳೆ ಹರಡುವ ಗಾಳಿಯಲ್ಲಿ ಹಬ್ಬಬಹುದು. ಅಥವಾ ಕೈಗಳಲ್ಲಿರುವ ರೋಗಾಣುಗಳು ಅಥವಾ ಮೇಲ್ಮೈ ಮೂಲಕ ಹಬ್ಬಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತವಾದ ಮಾಸ್ಕ್ ಧರಿಸುವುದೂ ಸಹ ಉತ್ತಮವೇ ಆದರೂ, ಮಾಸ್ಕೊಂದೇ ನಿಮ್ಮನ್ನು ರೋಗದಿಂದ ತಡೆಯದು.
ಸಾಕಷ್ಟು ನೀರು ಸೇವಿಸಿ ಹಾಗೂ ಸಾಕಷ್ಟು ನಿದ್ದೆ ಮಾಡಿ. ನಿದ್ದೆಗೆಡುವುದು ಅನಾರೋಗ್ಯಕರ ಅಭ್ಯಾಸ ಹಾಗೂ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು.
ರೋಗಪೀಡಿತರ ನಿಕಟ ಸಂಪರ್ಕದಿಂದ ದೂರವಿರಿ. ಶ್ವಾಸಕೋಶದ ಸೋಂಕಿನಿಂದ ಬಳುಲುತ್ತಿರುವವರಿಂದ ಕನಿಷ್ಠ ಮೂರು ಅಡಿಗಳ ದೂರದಲ್ಲಿ ನಿಲ್ಲಿ.
ಮನೆಯೊಳಗೆ ಸೂರ್ಯನ ಕಿರಣಗಳು ಬೀಳುವಂತೆ ಕಿಟಿಕಿ ಬಾಗಿಲುಗಳು ತೆರೆದಿರಲಿ. ಅಡುಗೆ ಮನೆ ಹಾಗೂ ವಿಶ್ರಾಂತಿ ಕೊಠಡಿಗಳು ಸ್ವಚ್ಛವಾಗಿರಲಿ.
ಒಂದು ವೇಳೆ ಇದಾಗಲೇ ಸೋಂಕು ತಗುಲಿದ್ದರೆ, ಕಾಯಿಲೆ ಸಂಪೂರ್ಣ ಗುಣವಾಗುವ ತನಕ ನೀವು ಕೊಠಡಿಯೊಳಗೆಯೇ ಇರಿ. ಮಾಸ್ಕ್ ಧರಿಸುವುದು ಕಡ್ಡಾಯ.
ಸಾಮಾಜಿಕ ಸಮಾರಂಭಗಳು, ಸಾರ್ವಜನಿಕ ಸ್ಥಳಗಳು ಹಾಗೂ ಕೆಲಸದ ಸ್ಥಳಗಳಿಗೆ ಹೋಗದಿರಿ. ಇದರಿಂದ ಸೋಂಕು ಹಬ್ಬುವುದನ್ನು ತಪ್ಪಿಸಬಹುದಾಗಿದೆ,
ಹಂದಿಜ್ವರವು ಮೊದಲ ಐದು ದಿನಗಳ ಕಾಲ ಅತಿಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಮಕ್ಕಳಾಗಿದ್ದಲ್ಲಿ ಹತ್ತು ದಿನಗಳ ಕಾಲ ರೋಗವು ಸಾಂಕ್ರಾಮಿಕವಾಗಿರುತ್ತದೆ.
ಹೆಲ್ಪ್‌ಲೈನ್ ಫೋನ್ ನಂಬರ್‌ಗಳು ಆಲ್ ಇಂಡಿಯಾ ಉಚಿತ ಎಚ್1ಎನ್1 ಹೆಲ್ಪ್‌ಲೈನ್: 1075 ಅಥವಾ 1800-11-4377 ಬೆಂಗಳೂರು: ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ - 91-80-26632634 ದೆಹಲಿ: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ: 011-24525211, 23404328, 23365525 ದೀನ್ ದಯಾಳ್ ಆಸ್ಪತ್ರೆ: 011-25125259 ಚೆನ್ನೈ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 044-25912686 ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ: 09442012555 ಕೋಲ್ಕತಾ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ: 09433392182/09434009077 ಹೈದರಾಬಾದ್: ಆಂಧ್ರ ಪ್ರದೇಶ ಎದೆ ರೋಗಗಳ ಆಸ್ಪತ್ರೆ: 040-23814939 ಮುಂಬೈ: ಕಸ್ತೂರ್ಬಾ ಆಸ್ಪತ್ರೆ: 022-23083901, 23083902, 23083903, 23083904 ಪುಣೆ: ಡಾ| ನಾಯ್ಡು ಸಾಂಕ್ರಾಮಿಕ ರೋಗ ಆಸ್ಪತ್ರೆ - 09923130909