ಹೈ ಬ್ಲಡ್‌ಪ್ರಶರ್ ಇರುವವರು ಹೇರಳವಾಗಿ ಅಧಿಕ ಪೊಟಾಶಿಯಮ್ ಇರುವಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕಂತೆ. ಇದರಿಂದಾಗಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬುದಾಗಿ ವೈದ್ಯಕೀಯ ತಜ್ಞರು ಹೇಳುತ್ತಾರೆ.
ಕಲ್ಲಂಗಡಿ ಅಥವಾ ಬಚ್ಚಂಗಾಯಿ ಹಾಗೂ ಕರ್ಬೂಜದಂತಹ ಪೊಟಾಶಿಯಂ ಹೇರಳವಾಗಿರುವ ಹಣ್ಣುಗಳು ರಕ್ತದೊತ್ತಡದ ರೋಗಿಗಳಿಗೆ ತುಂಬ ಪ್ರಯೋಜನಕಾರಿ ಎಂಬುದಾಗಿ ಅಮೆರಿಕನ್ ಡೈಯಟಿಕ್ ಅಸೋಸಿಯೇಶನ್ ವಕ್ತಾರೆ ಲೋನಾ ಸಂಡೋನ್ ಹೇಳಿದ್ದಾರೆ.
ಕಾಲುಭಾಗ ಕರ್ಬೂಜದಲ್ಲಿ 800ರಿಂದ 900 ಮಿಲಿಗ್ರಾಂಗಳಷ್ಟು ಪೊಟಾಶಿಯಮ್ ಇರುತ್ತದೆ. ಇದು ದಿನನಿತ್ಯ ತೆಗೆದುಕೊಳ್ಳಲು ಶಿಫಾರಸ್ಸು ಮಾಡಿರುವ ಒಟ್ಟು ಮೊತ್ತದ ಶೇ.20ಕ್ಕೆ ಸಮ ಎಂದು ಅವರು ಹೇಳಿದ್ದಾರೆ.
ಕಿತ್ತಳೆ ಹಣ್ಣು, ಒಣಹಣ್ಣುಗಳಾದ ಆಪ್ರಿಕಾಟ್, ಫಿಗ್, ಕಿವಿ, ಕರ್ಜೂರ, ದ್ರಾಕ್ಷಿ, ಅಲ್ಲದೆ ಬೀನ್ಸ್, ಆಲೂಗಡ್ಡೆ, ಟೊಮ್ಯಾಟೋ ಮುಂತಾದ ತರಕಾರಿಗಳಲ್ಲಿ ಅಧಿಕ ಪೊಟಾಶಿಯಂ ಇರುವ ಕಾರಣ ಅಧಿಕ ರಕ್ತದೊತ್ತಡ ಇರುವವರು ಇಂತಹ ಹಣ್ಣು ತರಕಾರಿಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.