ಅಳ್ಬೇಡಾ ಪುಟ್ಟ ಚಾಕೊಲೇಟ್ ನೀಡ್ತೀನಿ ಅನ್ನುತ್ತಾ ಮಕ್ಕಳನ್ನು ರಮಿಸಿ ಅವರಿಗೆ ದಿನನಿತ್ಯ ಚಕೊಲೇಟ್ ನೀಡುವ ಹೆತ್ತವರು ನೀವಾಗಿದ್ದರೆ ನಿಲ್ಲಿ, ಇನ್ನೊಮ್ಮೆ ಚಾಕೊಲೇಟ್ ನೀಡುವ ಮುನ್ನ ಒಂದಿಷ್ಟು ಯೋಚಿಸಿ. ಮಕ್ಕಳು ತಮ್ಮ ಬಾಲ್ಯದಲ್ಲಿ ಪ್ರತಿನಿತ್ಯ ಚಾಕೊಲೇಟ್ ತಿನ್ನುವ ಚಟದವರಾಗಿದ್ದಲ್ಲಿ ಅವರು ಯೌವ್ವನಾವಸ್ಥೆ ತಲುಪುವ ವೇಳೆ ಅವರಲ್ಲಿ ಹಿಂಸ್ರಾ ಪ್ರವೃತ್ತಿ ಬೆಳೆಯುತ್ತದಂತೆ.
ಕಾರ್ಡಿಫ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿರುವಂತೆ, ಮಕ್ಕಳು ನಿತ್ಯ ಚಾಕಲೇಟ್ ಮುಂತಾದ ಸಿಹಿ ತಿನಿಸುಗಳನ್ನು ಸೇವಿಸಿದರೆ ಯೌವನಕ್ಕೆ ಅಡಿ ಇಡುವ ವೇಳೆ ಅವರು ಅಶಾಂತಿಯುತರಾಗುವ ಸಂಭವವಿದ್ದು, ಅವರಲ್ಲಿ ಸಿಟ್ಟು ಹಾಗೂ ಹಿಂಸೆಯ ಮನೋಭಾವ ಹೆಚ್ಚುತ್ತದೆ.
ಅತಿಹೆಚ್ಚು ಸಿಹಿ ತಿನ್ನುವ ವ್ಯಕ್ತಿ ತನ್ನ 30ರ ಹರೆಯದಲ್ಲಿ ಹತಾಶೆ, ಸಿಟ್ಟು ಅಲ್ಲದೆ ಹಿಂಸಾತ್ಮಕ ಮನೋಭಾವದವನಾಗುತ್ತಾನೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ. ಹೆಚ್ಚು ಸಿಹಿ ತಿನ್ನುವುದರಿಂದ ಮಕ್ಕಳಲ್ಲಿ ಒಳ್ಳೆಯದು ಅಥವಾ ಕೆಟ್ಟದ್ದನ್ನು ನಿರ್ಧರಿಸುವ ಗುಣ ಕಡಿಮೆಯಾಗುತ್ತದೆ. ಹಾಗಾಗಿ ಇಂತವರಲ್ಲಿ ಅಪರಾಧಿ ಮನೋಭಾವ ಮೂಡಿ ವ್ಯಕ್ತಿ ಹಿಂಸಾಕ್ರಿಯೆಯಲ್ಲೂ ತೊಡಗಬಹುದು ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
1970ರ ವರ್ಷದಲ್ಲಿ ಜನಿಸಿರುವ 17,500 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದೆ. ವಿವಿಧ ರೀತಿಯಲ್ಲಿ ಇವರನ್ನು ತಪಾಸಣೆಗೊಳಪಡಿಸಿ ಈ ಸಂಶೋಧನೆ ಸಿದ್ಧ ಪಡಿಸಲಾಗಿದೆ.
ಸಿಹಿ ತಿನ್ನುವ ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ನಂತರದ 34 ವರ್ಷಕ್ಕೂ ಮೊದಲೇ ಕ್ರೋಧಾವಿಷ್ಟರಾಗಿದ್ದಾರೆ ಎಂಬುದು ಸಂಶೋಧನೆಯಿಂದ ವ್ಯಕ್ತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.