ಸೋಮಾರಿತನವೆಂಬುದು ಕೆಟ್ಟ ಅಭ್ಯಾಸ ಅಥವಾ ಚಾಳಿ ಅಂತ ನೀವು ತಿಳಿದುಕೊಂಡಿದ್ದರೆ, ತಪ್ಪು. ಅದು ಹಾಗಿಲ್ಲ, ಅದುವೇ ದೊಡ್ಡ ರೋಗವಾಗಿರಬಹುದು, ಎಚ್ಚರ!
ದೈಹಿಕ ನಿಷ್ಕ್ರಿಯತೆ ಮತ್ತು ಅನಾರೋಗ್ಯಕ್ಕೆ ಪರಸ್ಪರ ತೀರಾ ಹತ್ತಿರದ ಸಂಬಂಧವಿದೆ. ಈ ದೈಹಿಕ ನಿಷ್ಕ್ರಿಯತೆಯನ್ನು ತನ್ನದೇ ಆದ ಒಂದು ರೋಗ ಎಂದು ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ ಲಂಡನ್‌ನ ಇಂಪೀರಿಯಲ್ ಕಾಲೇಜು ಮತ್ತು ಯುನಿವರ್ಸಿಟಿ ಕಾಲೇಜಿನ ಸಂಶೋಧಕರ ತಂಡವೊಂದು.
ಸ್ಥೂಲಕಾಯತ್ವವನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಒಂದು ರೋಗ ಎಂದು ಘೋಷಿಸಿದೆ, ಇದಕ್ಕೆ ಮೂಲ ಕಾರಣವೂ ಸಾಕಷ್ಟು ಪ್ರಮಾಣದಲ್ಲಿ ವ್ಯಾಯಾಮ ದೊರೆಯದೇ ಇರುವುದು. ದೈಹಿಕ ನಿಷ್ಕ್ರಿಯತೆಯ ರೋಗಲಕ್ಷಣಗಳಾದ ಸ್ಥೂಲದೇಹ, ಡಯಾಬಿಟಿಸ್, ರಕ್ತದ ಒತ್ತಡ, ಹೃದ್ರೋಗ ಮುಂತಾದವುಗಳ ಚಿಕಿತ್ಸೆಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತದೆ. ಆದರೆ ಅದರ ಮೂಲ ಕಾರಣದ ಕುರಿತು ಯಾರೂ ಏನೂ ಯೋಚಿಸುತ್ತಿಲ್ಲ ಎಂದು ಇಂಪೀರಿಯಲ್ ಕಾಲೇಜಿನ ರಿಚರ್ಡ್ ವೈಲರ್ ಹೇಳಿರುವುದಾಗಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.
ಈ ಸಮಸ್ಯೆ ಹೋಗಲಾಡಿಸಲು ಸಲಹೆ ಮಾಡಿದ ವ್ಯಾಯಾಮಗಳಲ್ಲಿ ಕನಿಷ್ಠ ವ್ಯಾಯಾಮವನ್ನು 20ರಲ್ಲೊಬ್ಬರು ಮಾತ್ರವೇ ಮಾಡುತ್ತಾರೆ, ಆದರೂ ಅಲ್ಲಿ ಸಮಸ್ಯೆ ಹೋಗಲಾಡಿಸುವಲ್ಲಿ ಸಂಘಟಿತ ಯೋಜನೆಯಿರುವುದಿಲ್ಲ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿರುವುದಾಗಿ ವೈಲರ್ ತಿಳಿಸಿದ್ದಾರೆ.
ಹಾಗಾಗಿ ನಿಮ್ಮನ್ನು ನೀವೇ ಸೋಮಾರಿಗಳಾಗಲು ಬಿಡಬೇಡಿ. ಯಾವಾಗಲೂ ಉಲ್ಲಾಸದಿಂದಿರಿ, ಚಟುವಟಿಕೆಯಿಂದಿರಿ.