ಅದು ಮಕ್ಕಳ ದಿನವಿರಬಹುದು, ಮಹಿಳಾ ದಿನಾಚರಣೆ ಇರಬಹುದು ಅಥವಾ ಇನ್ಯಾವುದೇ ವಿಶೇಷ ದಿನವಿರಲಿ. ಚಿಂದಿ ಆಯುವ ಮಕ್ಕಳ ಚಿತ್ರ ಇಲ್ಲವೇ, ಹೊರೆಹೊತ್ತ ಕಾರ್ಮಿಕ ಮಹಿಳೆಯ ಚಿತ್ರಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. "ಇಂದು ಬಾಲಕಾರ್ಮಿಕರ ದಿನ. ಇಂತಹ ಊರಿನ ಇಂತಹ ಸ್ಥಳದಲ್ಲಿ ಚಿಂದಿ ಆಯುವ ಹುಡುಗ" ಎಂದೋ, "ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಕಾರ್ಮಿಕಳೊಬ್ಬಳು ತಲೆಹೊರೆ ಹೊತ್ತೊಯ್ಯುತ್ತಿರುವುದು" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳು ಪ್ರಕಟಗೊಂಡಿರುತ್ತವೆ. ಇಂತಹ ದಿನಗಳಲ್ಲಿ ಮಾಸ್ಟರ್ ಕಿಶನ್ ಅಥವಾ ಇನ್ಯಾವುದೋ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳ ಚಿತ್ರಗಳಾ ಅಥವಾ, ಕಿರಣ್ ಬೇಡಿ, ಕಲ್ಪನಾ ಚಾವ್ಲಾ, ಗಂಗೂಬಾಯಿ ಹಾನಗಲ್ ಇವರಂಥ ಮಹಿಳೆಯರ ಚಿತ್ರಗಳು "ಇಂದು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನಮ್ಮ ನಾಡಿನ ಹೆಮ್ಮೆಯ ಮಹಿಳೆಯರು" ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಬಾರದೇ? ಇಂತಹ ಸಿನಿಕತನ ನಮಗ್ಯಾಕೆ?
ಭಾರತ ಸಮಸ್ಯೆಮುಕ್ತ ಎಂಬುದು ಇಲ್ಲಿ ನನ್ನ ವಾದವಲ್ಲ. ಹಾಗಂತ ಭಾರತ ಸಂಪೂರ್ಣ ಸಮಸ್ಯೆಯಿಂದಲೇ ತುಂಬಿದೆ ಎಂಬುದನ್ನು ಒಪ್ಪಿಕೊಳ್ಳಲೂ ತಯಾರಿಲ್ಲ. ಸಮಸ್ಯೆಗಳನ್ನೇ, 'ಇಲ್ಲ'ಗಳನ್ನೇ ಎತ್ತಿ ಆಡುತ್ತಿರುವ ಈ ಸಂದರ್ಭದಲ್ಲಿ ಮೂಡಿರುವ ಕೆಲವು ಪ್ರಶ್ನೆಗಳನ್ನು, ಅನಿಸಿಕೆಗಳನ್ನು ಇಲ್ಲಿ ಮಂಡಿಸುತ್ತಿದ್ದೇನೆ.
ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ?
ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ? ನಮ್ಮಲ್ಲಿ ಒಂದಿಷ್ಟೂ ಸುಧಾರಣೆಯಾಗಿಲ್ಲವೆ? ಒಂದುಕಾಲದ ಬ್ರಿಟಿಷರ ವಸಾಹತು ಇಂದು ಜಗತ್ತಿನಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿರುವುದರ ಹಿಂದೆ ಯಾವುದೇ ಅಥವಾ ಯಾರದ್ದೇ ಶ್ರಮವಿಲ್ಲವೆ?
ಹೇಳಿ. ನಾವು ಯಾವ ವಿಚಾರದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಿಗಿಂತ ಹಿಂದಿದ್ದೇವೆ? ಒಳಿತು ಮತ್ತು, ಅಫ್‌ಕೋರ್ಸ್ ಕೆಡುಕುಗಳಲ್ಲೂ ನಾವು ಸರಿಸಮವಾಗೇ ಮುಂದುವರಿದಿದ್ದೇವೆ. ಒಂದು ಕಾಲದಲ್ಲಿ ಭಾರತವನ್ನು ದೂರವಿರಿಸಿದ್ದ ಅಮೆರಿಕಾದಂತಹ ಅಮೆರಿಕಾವೇ ನಮ್ಮ ಸ್ನೇಹಕ್ಕಾಗಿ ಕೈ ಚಾಚಿದೆ. ಭಾರತದ ಅಭಿವೃದ್ಧಿಯ ವೇಗ ಅದರೊಳಗೆ ಪುಕುಪುಕು ಭೀತಿ ಹುಟ್ಟಿಸಿದೆ.
ನಾವು, ಲಭ್ಯವಿರುವ ಇತಿಹಾಸವನ್ನು ನಂಬುವುದೇ ಆದಲ್ಲಿ; ರಾಜಮಹಾರಾಜರ ಆಡಳಿತ, ದುರಾಡಳಿತ ಕಂಡ ರಾಷ್ಟ್ರ ನಮ್ಮದು. ವಿವಿಧ ರೀತಿಯ, ಮನಸ್ಥಿತಿಯ ರಾಜರು ನಮ್ಮ ಹಿರಿಯರನ್ನು ಆಳಿದ್ದಾರೆ. ಅಗಾಧ ಸಂಪತ್ತು ಹೊಂದಿದ್ದ ಭಾರತಕ್ಕೆ ವ್ಯಾಪಾರದ ಉದ್ದೇಶದಿಂದ ಬಂದವರು ಇಲ್ಲೇ ಠಿಕಾಣಿ ಹೂಡಿದರು. ಈಸ್ಟ್ ಇಂಡಿಯಾ ಕಂಪೆನಿ ಹುಟ್ಟುಹಾಕಿದರು. ಈ ಕಂಪೆನಿ ಭಾರತದ ಮೇಲೆ ಸವಾರಿ ಮಾಡಿತು. ಅವರ ಬಳಿ ಆಧುನಿಕ, ತಾಂತ್ರಿಕತೆ, ವಸ್ತುಗಳು, ಹತ್ಯಾರುಗಳಿದ್ದವು. ಇಲ್ಲಿದ್ದ ರಾಜರುಗಳು ತಮ್ಮೊಳಗೆ ಕಚ್ಚಾಡುವಲ್ಲೇ ನಿರತರಾಗಿದ್ದರು. ಇಲ್ಲವೇ ಬ್ರಿಟಿಷರ ಭಯಕ್ಕೋ ಇಲ್ಲ ಆಮಿಷಕ್ಕೋ ಒಳಗಾಗಿದ್ದರು. ಹಾಗಾಗಿ ಹಲವಾರು ದಶಕಗಳ ಕಾಲ ಅವರು ಆಡಿದ್ದೇ ಆಟವಾಗಿತ್ತು.
(ಇಲ್ಲಿ ನನಗೊಂದು ಘಟನೆ ನೆನಪಾಗುತ್ತಿದೆ. ಈ ಹಿಂದೆ ನಾನೊಮ್ಮೆ ಕೆಎಎಸ್ ಪರೀಕ್ಷೆ(ಮುಖ್ಯ)ಗೆ ತಯಾರಿ ನಡೆಸುತ್ತಿದ್ದ ವೇಳೆ ಬೆಂಗಳೂರಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಕೋಚಿಂಗ್ ಪಡೆಯುತ್ತಿದ್ದೆ. ಆ ವೇಳೆ ಇತಿಹಾಸದ ಪಾಠ ಮಾಡುತ್ತಿದ್ದ ಉಪನ್ಯಾಸಕರು ನಮ್ಮ ಮುಂದೆ ಒಂದು ಪ್ರಶ್ನೆ ಇಟ್ಟಿದ್ದರು. "ಭಾರತೀಯರೆಲ್ಲ ಒಟ್ಟು ಸೇರಿ ಕಾದಾಡುವುದು ಬಿಡಿ, ಉಗುಳುತ್ತಿದ್ದರೂ ಆ ಉಗುಳಿನ ಹೊಳೆಯಲ್ಲಿ ಬ್ರಿಟಿಷರು ಕೊಚ್ಚಿ ಹೋಗುತ್ತಿದ್ದರು. ಆದರೆ ಭಾರತೀಯರು ಯಾಕೆ ಒಂದಾಗಿಲ್ಲ?" - ಇದು ಅವರ ಪ್ರಶ್ನೆಯಾಗಿತ್ತು. ಅದಕ್ಕೆ ತಟಕ್ಕನೆ ಉತ್ತರಿಸಿದ ನನ್ನ ಸಹ ಅಭ್ಯರ್ಥಿಯೊಬ್ಬ, "ಅವರವರೇ ಪರಸ್ಪರ ಉಗುಳಿಕೊಂಡು ಎಲ್ಲ ಉಗುಳು ಮುಗಿಸಿಕೊಂಡಿದ್ದರು" ಆ ಸಂದರ್ಭದಲ್ಲಿ ಎಲ್ಲರೂ ಗೊಳ್ಳನೆ ನಕ್ಕರೂ, ಇದು ವಾಸ್ತವಕ್ಕೆ ಎಷ್ಟೊಂದು ಹತ್ತಿರವಾಗಿದೆ!)