ಈರ್ವರು ಸದ್ಯಸರುಳ್ಳ ಏಕೈಕ ಅತಿದೊಡ್ಡ ಪಕ್ಷದ ನಾಯಕನಾದ ನನ್ನನ್ನು ಸರಕಾರ ರಚಿಸುವಂತೆ ರಾಷ್ಟ್ರಪತಿಗಳು ಆಹ್ವಾನಿಸಿದರು. ಪತ್ರಿಕೆಗಳು ಏನೇನೆಲ್ಲಾ ಬರೆದವು. ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳದೆ ನಾನು, ಲಂಚದ ಹೊಳೆಯನ್ನೇ ಹರಿಸಿ, ಒಂದೇ ದಿನದಲ್ಲಿ ಬಹುಮತ ಸಾಬೀತು ಪಡಿಸಿದೆ. ಅದೂ 100 ಶೇಕಡಾ ಬಹುಮತ. ಇನ್ನು ಪ್ರತಿಪಕ್ಷದ ಪ್ರಶ್ನೆಯೇ ಏಳುವುದಿಲ್ಲ. ಅಂದಿನಿಂದ ಶುರುವಾಯಿತು ನನ್ನ ರಾಜ್ಯಭಾರ. ನಾನು ಪ್ರಧಾನಿಯಾದೆ. 544 ಎಂ.ಪಿ.ಗಳಿಗೆ 544 ಕ್ಯಾಬಿನೆಟ್ ದರ್ಜೆಯ ಸಚಿವ ಪದವಿಗಳನ್ನು (ಸೃಷ್ಟಿಸಿ) ನೀಡಲು ಯೋಚಿಸಿದೆ. ಪತ್ರಿಕೆಗಳು ಜಂಬೋ ಜೆಟ್ ಎಂದು ಬರೆದವು. ನಾನು ಕೇರ್ ಮಾಡಲಿಲ್ಲ. ನನ್ನ ಕ್ಯಾಬಿನೆಟ್ ಪ್ರಮಾಣ ವಚನ ಸ್ವೀಕಾರದ ಪ್ರಕ್ರಿಯೆಗಳಿಗೆ ಒಂದು ತಿಂಗಳೇ ಹಿಡಿಯಿತು. ಕೆಲವರು ಲಂಚದ ಹೆಸರಿನಲ್ಲಿ, ಕೆಲವರು ಭ್ರಷ್ಟಾಚಾರದ ಹೆಸರಿನಲ್ಲೆಲ್ಲಾ ಪ್ರತಿಜ್ಞಾವಿಧಿ ಸ್ವೀಕರಿಸಿ ತಮ್ಮ ನೈಪುಣ್ಯ ಮೆರೆದರು.
ಈಗ ಪ್ರಥಮ ಸಮಸ್ಯೆ ಉಧ್ಬವಿಸಿತು. 544 ಸಚಿವರಿಗೆ ವಸತಿ ವ್ಯವಸ್ಥೆ... ಸರಿ, ದೆಹಲಿಯ ಎಲ್ಲಾ ಪ್ರತಿಷ್ಠಿತ ಬಂಗಲೆಗಳಲ್ಲಿರುವವರೆಲ್ಲಾ ತಮ್ಮ ಜಾಗ ಖಾಲಿ ಮಾಡಿ ಜೋಪಡಿಗಳಲ್ಲಿ ನೆಲೆಸುವಂತೆ ಅಜ್ಞೆ ಮಾಡಿದೆ. ಆ ಸ್ಥಳಗಳಲ್ಲಿ ಇದ್ದ ಬಂಗಲೆಗಳನ್ನು ಕೆಡಹಿ ತಮ್ಮ ಅಭಿರುಚಿಗನುಗುಣವಾದ ಬಂಗಲೆಗಳನ್ನು ಎಲ್ಲಾ ಸಚಿವರಿಗೆ ಸರಕಾರೀ ವೆಚ್ಚದಲ್ಲಿ ಕಟ್ಟಿಸುವುದಾಗಿ ಘೋಷಿಸಿದೆ.
ಪತ್ರಿಕೆಗಳು ಮತ್ತೆ ಬೊಬ್ಬಿಟ್ಟವು. ಕೂಡಲೇ ನಾನೊಂದು ತುರ್ತು ಪತ್ರಿಕಾ ಗೋಷ್ಠಿ ಕರೆದು, ಸಾಮಾಜಿಕ ನ್ಯಾಯಕ್ಕಾಗಿ, ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ ಇದನ್ನು ಮಾಡಲಾಯಿತೆಂದು ಹೇಳಿಕೆ ನೀಡಿದೆ.
ಆದರೆ ಸರಕಾರೀ ಹಣ ಬಿಡುಗಡೆಯಾಗದೆ, ಸಚಿವರುಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮಾಧಾನಿಸಲೆತ್ನಿಸಿದೆ. ಊಹೂಂ...ಸಾಧ್ಯವಾಗಲಿಲ್ಲ. ಆಯ್ತು, ರಾಜೀನಾಮೆ ನೀಡಿ, ಹೊರ ನಡೆಯಿರಿ... ಘರ್ಜಿಸಿಯೇ ಬಿಟ್ಟೆ. ಈ ಔಷಧವು ಕೆಲಸ ಮಾಡಿತು. ಎಲ್ಲರೂ ದಿಢೀರನೇ ತೆಪ್ಪಗಾಗಿ ನಾನು ದಬಾಯಿಸಿದ್ದನ್ನೇ ಅಮೂಲ್ಯ ಸಲಹೆ ಅಂತ ಪರಿಗಣಿಸಿ ನನ್ನನ್ನು ಅಭಿನಂದಿಸಲಾರಂಭಿಸಿದರು.
ಸ್ವಲ್ಪ ದಿನಗಳಲ್ಲಿ, ಮತ್ತೆ ಆರಂಭವಾಯಿತು ಕಿರಿಕಿರಿ- ಖಾತೆ ಹಂಚಿಕೆಯ ಜಗಳ. ನಿಮಗೆ ವೈಭವೋಪೇತ ವಸತಿ ಕಲ್ಪಿಸಿ ಈಗಷ್ಟೇ ಸುಸ್ತಾಗಿದ್ದೇನೆ. ಇನ್ನೈದು ದಿನಗಳಲ್ಲಿ ನಿಮಗೆ ಬೇಕಾದ ಖಾತೆ ಕೊಡುತ್ತೇನೆ ಎಂದು ಭರವಸೆಯಿತ್ತೆ. ಭಾರೀ ಸಮಾಧಾನಗೊಂಡ ಅವರೆಲ್ಲಾ ಹೊರ ನಡೆದರು. ನಾನು ನಿಟ್ಟುಸಿರು ಬಿಟ್ಟೆ.
ಇನ್ನು ಖಾತೆಯನ್ನು ಹಂಚಲು ಆರಂಭಿಸಿದೆ. ನನ್ನ ಪಕ್ಷದ ಇನ್ನೋರ್ವ ಸದಸ್ಯನನ್ನು ಕರೆದು ಅವನಿಗೆ "ಭ್ರಷ್ಟಾಚಾರ, ನಯವಂಚನೆ ಮತ್ತು ನಿರಾಕರಣೆ"ಯ ಖಾತೆಯನ್ನು ನೀಡಿದೆ. ಅವ ಸಂತೋಷಗೊಂಡು ಮುನ್ನಡೆದ. ಆದರೆ ಇನ್ನೂ 543 ಖಾತೆಗಳನ್ನು ಹೇಗಪ್ಪಾ ತಯಾರಿಸುವುದು ಎಂದು ಆಲೋಚಿಸಿದಾಗ ನನ್ನ ರಾಜಕೀಯ ಪ್ರಜ್ಞೆ ಜಾಗೃತವಾಯಿತು. ನಾನು ಅನೇಕ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದೆ. ಅಂತಾರಾಷ್ಟ್ರೀಯ ಭಾಷೆಯಾಗಿ ಕನ್ನಡದ ಮಹತ್ವ, ಮುಂದಿನ ಅಮೆರಿಕಾ ಚುನಾವಣೆಯಲ್ಲಿ ಒಬಾಮಾ ಜಯಗಳಿಸುವರೇ, ಚಾರ್ಲ್ಸ್ ಡಯಾನಾರ ಸಂಬಂಧದಿಂದ ಬ್ರಿಟನ್ ಜನತೆಯ ಮೇಲೆ ಪರಿಣಾಮ, ನ್ಯೂಜಿಲೆಂಡ್ ಏಕೆ ಅಷ್ಟೊಂದು ಸ್ವಚ್ಛವಾಗಿದೆ, ಜರ್ಮನಿಯ ರಾಷ್ಟ್ರ ಭಾಷೆಯಾಗಿ ಹಿಂದಿ ಏಕಾಗಬಾರದು, ಮಲೇಷ್ಯಾದಲ್ಲಿ ತಮಿಳು ಮಾತೃಭಾಷೆಯೇಕೆ ಮಾಡಬಾರದು, ಕೆನಡಾದಲ್ಲಿ ಉರ್ದು ಭಾಷೆ ಯಾಕೆ ಜಾರಿಗೆ ತರಬಾರದು, ಅಮೆರಿಕಾದ ರಸ್ತೆಗಳಲ್ಲಿ ಎತ್ತಿನ ಗಾಡಿಗಳು ಏಕಿಲ್ಲ, ಬ್ರಿಟಿಷ್ ಸಚಿವರುಗಳು ಜೋಪಡಿಗಳಲ್ಲೇಕೆ ವಾಸಿಸುವುದಿಲ್ಲ, ಆಸ್ಟ್ರೇಲಿಯನ್ನರು ಏಕೆ ಸೀರೆ ಉಡುವುದಿಲ್ಲ, ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟರೆ ಬಹುಸಂಖ್ಯಾತರಿಗೇನು ಕೇಡು? ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೇಗಿದೆ... ಪ್ರತಿಭಾವಂತರಿಗೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಯಾಕೆ ಕೊಡಬೇಕು?...ಇತ್ಯಾದಿ....ಇತ್ಯಾದಿಗಳ ಕುರಿತು ಪರಾಮರ್ಶಿಸಲು.ಒಟ್ಟು 543 ಸಮಿತಿಗಳನ್ನು ರಚಿಸಿದೆ. ಒಂದೊಂದು ಸಮಿತಿಗೆ ಒಂದೊಂದು ಸಚಿವರು ಮುಖ್ಯಸ್ಥರು, ಅವರ ಕುಟುಂಬಸ್ಥರೆಲ್ಲಾ ಆ ಸಮಿತಿಯ ಸದಸ್ಯರು.
ನಾನು ಸಂಪುಟ ಸಭೆ ಕರೆದು ಘೋಷಿಸಿದೆ. ಮಿತ್ರರೇ, ನಿಮ್ಮನ್ನೂ ಈ ಎಲ್ಲಾ ಸಮಿತಿಗಳ ಮುಖಂಡರನ್ನಾಗಿಸಲಾಗಿದೆ. ನೀವು ಸಂಬಂಧಪಟ್ಟ ದೇಶಗಳಿಗೆ ಹೋಗಿ, ಈ ಬಗ್ಗೆ ಎಷ್ಟು ಬೇಕೋ ಅಷ್ಟು ಕಾಲ ಅಧ್ಯಯನ ನಡೆಸಿ ಬನ್ನಿ. ಎಲ್ಲರ ವೆಚ್ಚವನ್ನೂ, ಭಾರತದ ಘನ ಸರಕಾರ ಭರಿಸುತ್ತದೆ. ನೀವು ಹಿಂತಿರುಗಿ ಬಂದ ಬಳಿಕ ನಿಮ್ಮ ಖಾತೆಗಳನ್ನು ಸಿದ್ದಪಡಿಸುತ್ತೇನೆ. ಬೆಸ್ಟ್ ಆಫ್ ಲಕ್.... ಹೋಗಿ ಬನ್ನಿ.... ಅಂದು ಬಿಟ್ಟೆ. ಎಲ್ಲಾ ಸಚಿವರೂ ಹೊರಟು ಬಿಟ್ಟರು. ಇದಕ್ಕೆ ಸುಮಾರು ಎರಡು ತಿಂಗಳು ಹಿಡಿದವು. ಎಲ್ಲಾ ಫ್ಲೈಟ್‌ಗಳು ರಾತ್ರಿಯೇ ಇದ್ದುದರಿಂದ ನನಗಂತೂ ರಾತ್ರಿ ನಿದ್ದೆ ಇಲ್ಲ. ಹಗಲು ಕಚೇರಿಯಲ್ಲೋ, ಸಂಸತ್ತಿನಲ್ಲೋ.. ನಿದ್ದೆ ಮಾಡುತ್ತಿದ್ದೆ. |