ರಾಷ್ಟ್ರದ ಕಾರ್ಯಭಾರಗಳನ್ನು ನಾವಿಬ್ಬರೇ ನೋಡಿಕೊಳ್ಳತೊಡಗಿದ್ದೆವು. ಪತ್ರಿಕೆಗಳು ಖಂಡಿಸಿದವು, ಛೀಮಾರಿ ಹಾಕಿದವು, ಬೊಬ್ಬಿಟ್ಟವು. ಹುಚ್ಚ ಪ್ರಧಾನಿ ಎಂದು ಬಣ್ಣಿಸಿದವು. ರಾಷ್ಟ್ರದ ಖಜಾನೆಯನ್ನು ದೋಚಿ ಮಂತ್ರಿಗಳ ಮಜಾಕ್ಕಾಗಿ ಬಳಸಲಾಗುತ್ತದೆ ಎಂದು ದೂರಿದವು. ನನ್ನ "ನಿರಾಕರಣೆ ಸಚಿವ" ಪತ್ರಿಕಾ ಗೋಷ್ಠಿ ಕರೆದು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ.
ಆದರೆ ಆಶ್ಚರ್ಯಕರವಾಗಿ, ವಿದೇಶಕ್ಕೆ ತೆರಳಿದ್ದ ಸಚಿವರೆಲ್ಲಾ ನಾನಂದು ಕೊಂಡಿದ್ದಕ್ಕಿಂತ ಮೊದಲೇ ಬಂದು ಬಿಟ್ಟಿದ್ದರು. ಕಾರಣ? ತನ್ನ ವಿರೋಧಿ ತನಗಿಂತ ಬೇಗ ಬಂದು ಮಹತ್ವದ ಖಾತೆಯನ್ನು ಪಡೆದರೆ ಎಂಬ ಭಯ. ತಲೆನೋವು ಮತ್ತೆ ಆರಂಭವಾಯಿತು. ಕೆಲವು ಎಂ.ಪಿ.ಗಳು ಬಂದು, ಖಾತೆಗಳನ್ನು ನಿರ್ಧರಿಸಿದ್ದೀರೆ ಎಂದು ಕೇಳಿದರು. ನಾನು "ತುಂಬಾ ಬ್ಯುಸಿಯಾಗಿದ್ದುದರಿಂದ ಇನ್ನೂ ಇಲ್ಲ' ಎಂದುತ್ತರಿಸಿದೆ. ಶುರುವಾಯಿತು ಗದ್ದಲ, ಪ್ರತಿಭಟನೆ. "ಜನಪ್ರತಿನಿಧಿಗಳಿಗೆ ಸಚಿವ ಪದವಿ ಕೊಡದಿದ್ದುದರಿಂದ ರಾಷ್ಟ್ರವು ನರಳುತ್ತಿದೆ' ಎಂದು ಕೂಗಾಡಿದರು.
ನಾನು ನನ್ನ ತಾಳ್ಮೆಯ ಕಟ್ಟೆಯನ್ನು ಒಡೆಯಲು ಬಿಡಲಿಲ್ಲ. ಶಾಂತವಾಗಿ ಉತ್ತರಿಸಿದೆ. " ಓ.ಕೆ. ನಿಮಗೆ ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಹೋಗಬಹುದು'. ಈ ಮ್ಯಾಜಿಕ್ ವಾಕ್ಯ ಮತ್ತೆ ನನ್ನ ಸಹಾಯಕ್ಕೆ ಬಂತು. "ಹ್ಹೆ.....ಹ್ಹೆ....ಇಲ್ಲ ಮಹಾಸ್ವಾಮಿ, ಹಾಗೇನಿಲ್ಲ, ಭಾರತದ ಬಡ ಪ್ರಜೆಗಳು, ತಮ್ಮ ಪ್ರತಿನಿಧಿಗಳು ಸಚಿವರಾಗುವುದನ್ನು ನೋಡಲು ಬಯಸುತ್ತಾರೆ ಎಂಬುದನ್ನು ನಾವು ನಿಮಗೆ ತಿಳಿಸಲು ಬಂದೆವಷ್ಟೇ. ತಾವು ತಪ್ಪು ತಿಳಿದುಕೊಳ್ಳಬೇಡಿ' ಎನ್ನುತ್ತಾ ತಣ್ಣಗಾಗಿ ಬಾಲಮಡಚಿಕೊಂಡು ಹೋದರು.
ನಾನೀಗ ಕಠಿಣನಾದೆ. "ನೋಡಿ, ಇದೇ ಕೊನೆ, ಇದೇ ಆರಂಭ, ಇನ್ನೂ ಮುಂದೆ ಯಾರೂ ಚಕಾರವೆತ್ತಬಾರದು. ನೀವೆಲ್ಲರೂ ಖಾತೆಗಳಿಲ್ಲದ ಸಚಿವರಾಗಿಯೇ ಉಳಿಯಿವಿರಿ' ಎಂದು ಹೇಳಿ ನಾನೇ ಎಲ್ಲಾ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡು "ದೋಚ ತೊಡಗಿದ್ದೆ'. ಮಧ್ಯೆ ಮದ್ಯೆ ವಿದೇಶ ಪ್ರಯಾಣ. ನಮ್ಮ ಮನೆಯ ಟಾಮಿಯ ಕಾಲಿಗೆ ಮುಳ್ಳು ಚುಚ್ಚಿತು. ಚಿಕಿತ್ಸೆಗಾಗಿ ನಾನು ಸಂಸಾರ ಸಮೇತನಾಗಿ ಮೊಮ್ಮಕ್ಕಳು, ಮರಿಮಕ್ಕಳೊಂದಿಗೆ ಅಮೆರಿಕಕ್ಕೆ ಹೋಗಿ ಒಂದು ತಿಂಗಳು ಇದ್ದು ಬಂದೆ. ಇದಲ್ಲದೆ ನಮ್ಮ ಮನೆಯ ಪ್ರೀತಿಯ ಬೆಕ್ಕಿಗೂ ಸ್ವಲ್ಪ ಏಟಾಗಿದ್ದುದರಿಂದ ಚಿಕಿತ್ಸೆಗಾಗಿ ವಿದೇಶಕ್ಕೆ ರವಾನಿಸಿದೆ. ಆ ಬಳಿಕವೂ ವಿವಿಧ ಕಾರಣಗಳನ್ನೊಡ್ಡಿ ವಿ.ಪ್ರ. ಕೈಗೊಂಡು ಮಜಾ ಉಡಾಯಿಸಿದೆ. ನನ್ನಪ್ಪನ ಗಂಟೇನೂ.......!
ಇಷ್ಟೊತ್ತಿಗಾಗಲೇ ಭಾರತದಲ್ಲಿ ಭಿನ್ನಮತದ ಅಲೆಯೊಂದು ತೀವ್ರವಾಗಿತ್ತು. ನಾನು ಮಾಡಿದ್ದೆಲ್ಲಾ ಹಗರಣ ಎಂದು ಶುದ್ಧ ಆಪಾದನೆಗಳೊಂದಿಗೆ ಒಂದೊಂದೇ ಬೆಳಕಿಗೆ ಬರತೊಡಗಿದ್ದವು. ಮೇವು ತಿಂದ ಪ್ರಧಾನಿಗೆ ಧಿಕ್ಕಾರ, ಗೊಬ್ಬರ (ಯೂರಿಯಾ) ನುಂಗಿದ ಪ್ರಧಾನಿ, ಬೋಫೋರ್ಸ್ ಗನ್ ಕಬಳಿಸಿದ ಪ್ರಧಾನಿ, ಫೋರ್ಜರಿ ಮಾಡಿದ ಪ್ರಧಾನಿ, 1 ಲಕ್ಷ ಡಾಲರ್ ವಂಚಕ ಪ್ರಧಾನಿ, ದೇಶವನ್ನು ಲೂಟಿಗೈದ ಪ್ರಧಾನಿ, ಹವಾಲಾ ಜಾಲದಲ್ಲಿ ಭಾಗಿಯಾಗಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಭ್ರಷ್ಟ ಪ್ರಧಾನಿ, ಲಂಚ ನೀಡಿ ಸಂಸದರನ್ನು ಖರೀದಿಸಿದ ಪ್ರಧಾನಿ ಎಂಬಿತ್ಯಾದಿ ಸಹಸ್ರನಾಮಾರ್ಚನೆ ಅಲ್ಲಲ್ಲಿ ಕೇಳಿ ಬರುತ್ತಿತ್ತು.
ಅದಾಗಲೇ, ಸಿಬಿಐ ತನಿಖೆ ಆರಂಭಿಸಿತ್ತು. ಒಂದು ಪ್ರಕರಣದಲ್ಲಂತೂ ನನ್ನನ್ನು ಬಂಧಿಸುವವರೆಗೆ ಮುಂದುವರಿದ ಅದರ ನಿರ್ದೇಶಕನನ್ನು ಎತ್ತಂಗಡಿ ಮಾಡಿಸಿದೆ. ನನ್ನ ಅಪ್ತನೋರ್ವನನ್ನು ಆ ಸ್ಥಾನಕ್ಕೆ ನೇಮಿಸಿದೆ. ರಾಜೀನಾಮೆಗೆ ಎಲ್ಲೆಲ್ಲಿಂದಲೂ ಆಗ್ರಹ ಕೇಳಿ ಬರುತ್ತಿತ್ತು. ನಾನಂತೂ ದೃಢವಾಗಿ "ಸತ್ತ ಮೇಲೆ ಖಂಡಿತವಾಗಿಯೂ ರಾಜೀನಾಮೆ ನೀಡುವೆ, ಅಲ್ಲಿ ತನಕ ವಿಶ್ವವೇ ಎದುರಾದರೂ ರಾಜೀನಾಮೆ ನೀಡಲಾರೆ, ಮಾತ್ರವಲ್ಲ ಬಂಧನವಾದರೂ ಜೈಲಿನಿಂದಲೇ ಆಡಳಿತ ನಡೆಸುವೆ'ನೆಂದು ಘಂಟಾಘೋಷವಾಗಿ ಸಾರಿದೆ. ಅದಾಗಲೇ ನನ್ನ ಆಡಳಿತಾವಧಿಯ ಕೊನೆಯ ವರ್ಷದಲ್ಲಿದ್ದೆ. ನನ್ನ"ಸಾಧನೆಯ ಸಮಾವೇಶ'ವೊಂದನ್ನು ಮಾಡಲು ಉದ್ದೇಶಿಸಿದೆ. ಮಿಲಿಯಗಟ್ಟಲೆ "ನನ್ನದಲ್ಲದ' ಹಣ ನೀರಿನಂತೆ ಖರ್ಚಾಯಿತು. ಆದರೆ ಆ ಸಮಾವೇಶದಲ್ಲಿ ಮಳೆ ಜೋರಾಗಿ ಬರುತ್ತಿತ್ತು...
ಮುಖಕ್ಕೆ ಒಂದು ಬಕೆಟು ನೀರು ರಭಸದಿಂದ ಅಪ್ಪಳಿಸಿದಂತಾಯಿತು. "ದಿನಾ ಏರುತ್ತಿರುವ ಬೆಲೆಗಳಿಂದಾಗಿ ಒಂದು ತುತ್ತು ಅನ್ನ ಮಾಡೋಕೂ ಅಕ್ಕಿ ಇಲ್ಲ. ಇದೊಂದು ಸತ್ತ ಹೆಣ ಬಿದ್ಕೊಂಡ್ಹಾಗೆ ಬಿದ್ದಿದೆ. ಮನೆಯವರ ಪರಿಜ್ಞಾನ ಒಂಚೂರೂ ಇಲ್ಲ. ಹೋಗ್ರಿ, ತಗೊಳ್ಳಿ ನನ್ನ ಕರಿಮಣಿ. ಅದನ್ನು ಮಾರಿ ಅದಕ್ಕೆ ಸಿಗುವ "ಅರ್ಧ ಕಿಲೋ' ಅಕ್ಕಿಯನ್ನು ತನ್ನಿ. ಇವತ್ತಾದ್ರೂ ಊಟ ಮಾಡೋಣ' ಎಂದು ವಟಗುಟ್ಟುವುದು ಕೇಳಿ ನಿದ್ರಾಲೋಕದಿಂದ ಈ ಲೋಕಕ್ಕೆ ಬಂದೆ. ಹೆಂಡ್ತಿ ಮುಖ ನೋಡಲಾರ್ದೆ ತಲೆತಗ್ಗಿಸಿಕೊಂಡು ನಮ್ಮ ಸ್ವಾತಂತ್ರ್ಯದ ಮಹೋತ್ಸವ ಸಂದರ್ಭದಲ್ಲಿ ಬಡ ಭಾರತೀಯನ ಸ್ಥಿತಿ ನೆನೆಯುತ್ತಾ, ಒಂದೆರಡು ಹನಿ ಕಣ್ಣೀರಿನೊಂದಿಗೆ ಮುಖಕ್ಕೆ ನೀರು ಹಚ್ಚಿಕೊಂಡು ಒಂದು ಚೀಲದ ತುಂಬಾ ಇದ್ದ ಬದ್ದ ನೋಟುಗಳನ್ನೆಲ್ಲಾ ತುಂಬಿಕೊಂಡು, ಜೇಬು ತುಂಬಾ (!) ಅಕ್ಕಿ ತರಲು ಅಂಗಡಿಯತ್ತ ಧಾವಿಸಿದೆ. |