ವೆಂಕಟ್ ಪೊಳಲಿ ಸ್ವತಂತ್ರದ ಆದಿಯಲ್ಲಿನ ಭಾರತ ಮತ್ತು 60 ವರ್ಷಗಳ ನಂತರದ ಈಗಿನ ಭಾರತ ನಡುವಿನ ವ್ಯತ್ಯಾಸ ಅಜಗಜಾಂತರ. ಅಂದಿನ ಭಾರತದಲ್ಲಿ ಅನಿಶ್ಚಿತತೆ, ಗೊಂದಲ, ಡೋಲಾಯಮಾನ ಎಲ್ಲವೂ ಮನೆ ಮಾಡಿತ್ತು. ಆದರೆ ಇಂದಿನ ಭಾರತದಲ್ಲಿ ಅಭಿವೃದ್ಧಿ, ನಿರೀಕ್ಷೆ, ದೃಢತೆ, ನಿಖರತೆ, ವಿಶ್ವಾಸ ಮನೆ ಮಾಡಿದೆ. ಅಂದಿನ ಭಾರತವನ್ನು ಪ್ರತಿಯೊಬ್ಬರೂ ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದ್ದರೆ, ಇಂದಿನ ಭಾರತವನ್ನು ಬೆರಗು, ಅಚ್ಚರಿಯ ದೃಷ್ಟಿಯಿಂದ ನೋಡಲಾಗುತ್ತಿದೆ. ಸ್ವತಂತ್ರದ ಆದಿಯಲ್ಲಿ ಭಾರತದ ಉಳಿವಿಕೆಯ ಬಗ್ಗೆಯೇ ಅನುಮಾನಗಳು ಸುಳಿದಾಡುತ್ತಿದ್ದವು. ಆದರೆ ಈಗಿನ ಭಾರತವನ್ನು ಸೂಪರ್ ಪವರ್ ಆಗುವ ನಿಟ್ಟಿನಲ್ಲಿ ನೋಡಲಾಗುತ್ತಿದೆ. ಇದು ಭಾರತ ತನ್ನ ಸ್ವಂತ ಕಾಲಿನಲ್ಲಿ ನಿಂತ 60 ವರ್ಷಗಳಲ್ಲಿ ಸಾಧಿಸಿದ ಬೆಳವಣಿಗೆ, ಅಭಿವೃದ್ಧಿ, ಸಾಧನೆ.
ಸ್ವತಂತ್ರ ಸಿಕ್ಕ ಪ್ರಾರಂಭದಲ್ಲಿ ಭಾರತ ತನ್ನ ಮಡಿಲಲ್ಲಿ ಹಲವು ಅನಿಶ್ಚಿತತೆ, ಸಮಸ್ಯೆ, ಸವಾಲು, ಗೊಂದಲಗಳನ್ನು ತುಂಬಿಕೊಂಡಿತ್ತು. ಭಾರತದ ಎದುರು ಅಸಂಖ್ಯಾತ ಸಮಸ್ಯೆಗಳು ಜೋತು ಬಿದ್ದಿದ್ದವು. ಒಂದು ಕಡೆ ಮಿಲಿಯಗಟ್ಟಲೆ ನಿರಾಶ್ರಿತರಿಗೆ ಮನೆ ಮಠ, ಉದ್ಯೋಗ, ಭೂಮಿ ಮತ್ತು ಸೂಕ್ತ ನಾಗರಿಕತ್ವ ನೀಡುವ ಹೊಣೆ, ಮತ್ತೊಂದು ಕಡೆ ವಿವಿಧ ಜಾತಿ, ಭಾಷೆ, ಸಂಸ್ಕೃತಿಯಿಂದ ಕೂಡಿದ್ದ ಭೂ ಖಂಡವನ್ನು ಒಂದು ಸೂರಿನಡಿ ಅಂದರೆ ಒಂದು ರಾಷ್ಟ್ರವಾಗಿ ಒಗ್ಗೂಡಿಸುವ ಬೃಹತ್ ಸವಾಲು. ಇನ್ನೊಂದೆಡೆ ಭಾರತದಲ್ಲಿ ಬೀಡುಬಿಟ್ಟಿದ್ದ ಸುಮಾರು 500 ರಾಜಾಡಳಿತವನ್ನು ಅಖಂಡ ಭಾರತಕ್ಕೆ ಸೇರಿಸಿ ಕೊಳ್ಳುವ ಬೃಹತ್ ಕಾರ್ಯ.
ಕೆಲ ರಾಜರು ಯಾವುದೇ ತಕರಾರಿಲ್ಲದೆ ಭಾರತಕ್ಕೆ ಸೇರಿಕೊಂಡರೆ, ಮತ್ತೆ ಕೆಲ ರಾಜಾಡಳಿತಗಳು ಕೆಲ ಷರತ್ತುಗಳನ್ನು ಇಟ್ಟಿದ್ದವು. ಆದರೆ ಕೆಲ ರಾಜರು ತಮ್ಮ ರಾಜಾಡಳಿತವನ್ನು ಬಿಟ್ಟು ಕೊಡಲು ನಿರಾಕರಿಸಿದರು. ಇದರಲ್ಲಿ ಹೈದರಾಬಾದ್ ನಿಜಾಂ ಮೊದಲಿಗನಾಗಿದ್ದ. ತನ್ನ ರಾಜಾಡಳಿತದಿಂದ ಹೊರ ಬರಲು ಇಚ್ಚಿಸದ ನಿಜಾಂ ಪ್ರತ್ಯೇಕ ರಾಜ್ಯವೊಂದನ್ನು ನಿರ್ಮಿಸುವ ಹಠ ಹಿಡಿದಿದ್ದ. ಈ ಹಠಮಾರಿ ನಿಜಾಂನನ್ನು ಭಾರತಕ್ಕೆ ಸೇರಿಸಿಕೊಳ್ಳುವ ಗುರುತರ ಜವಬ್ದಾರಿ ವಲ್ಲಬಾಭಾಯ್ ಪಟೇಲ್ ಮೇಲಿತ್ತು. ಸ್ವತಂತ್ರ ಹೈದರಾಬಾದ್ ಅಖಂಡ ಭಾರತದ ಒಡಲಿನಲ್ಲಿನ ಒಂದು ಕ್ಯಾನ್ಸರ್ ಆಗಿ ಪರಿಣಮಿಸಲಿದೆ ಎಂಬುದನ್ನು ಅರಿತಿದ್ದ ಪಟೇಲ್ ಒಂದು ವರ್ಷದ ಬಳಿಕ ಹೈದರಾಬಾದ್‌ಗೆ ಸೇನೆಯನ್ನು ಕಳುಹಿಸಿ, ನಿಜಾಂ ಸ್ವತಂತ್ರ ಭಾರತಕ್ಕೆ ಸೇರುವಂತೆ ಮಾಡಿದರು.
|