ಮಣ್ಣು ಮತ್ತು ಬಣ್ಣದ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜಿಸುವುದರಿಂದ ಜಲಮಾಲಿನ್ಯ ಉಂಟಾಗುವ ವಿಷಯ ಚರ್ಚಾಸ್ಪದವಾಗಿರುವ ನಡುವೆ, ಗೋವಾದ ಪೊಂಡಾ ಜಿಲ್ಲೆಯ ಎರಡು ಕುಟುಂಬಗಳು ಕಾಗದದ ಗಣೇಶನ ಮೂರ್ತಿಗಳನ್ನು ಪೂಜಿಸುತ್ತಿದೆ.
ಕಾಗದದ ವಿಗ್ರಹಗಳು ಪರಿಸರ ಸ್ನೇಹಿ ಮತ್ತು ನೀರಿನಲ್ಲಿ ವಿಸರ್ಜಿಸಿದ ಬಳಿಕವೂ ಮಾಲಿನ್ಯಮುಕ್ತ. ಶೆನ್ವಿ ಕಂಡೇಪಾರ್ಕರ್ ಮತ್ತು ಶೆನ್ವಿ ನಾವೆಲ್ಕರ್ ಕಾಗದದ ಮೂರ್ತಿಗಳನ್ನು ವಿಸರ್ಜಿಸಲಿಲ್ಲ. ಆದರೆ ಗಣೇಶನ ಹಬ್ಬ ಮುಗಿದ ಬಳಿಕವೂ ಅವನ್ನು ಮನೆಯಲ್ಲೇ ಇಟ್ಟು ಪೂಜಿಸಿದರು.
ಖಂಡೇಪಾರ್ಕರ್ ಕುಟುಂಬದ ಮುಖ್ಯಸ್ಥ ಮಧುಕರ್ ಶೆನ್ವಿ ಈ ಪರಂಪರೆ ಹುಟ್ಟಿದ ವಿಧಾನವನ್ನು ನೆನಪಿಸಿಕೊಳ್ಳುತ್ತಾರೆ. ದೇವಸ್ಥಾನದಿಂದ ಕಳವಾದ ಗಣೇಶನ ಮೂರ್ತಿಯನ್ನು ಖಂಡೇಪಾರ್ಕರ್ ಕುಟುಂಬದ ಎಲ್ಲರೂ ಇಡೀ ದಿನ ಹುಡುಕಿದರೂ ಸಿಗಲಿಲ್ಲ. ಹಬ್ಬದ ಸಂದರ್ಭದಲ್ಲಿ ಪೂಜೆಗೆ ಯಾವುದೇ ಮೂರ್ತಿ ಇರಲಿಲ್ಲ.
ಹೀಗಾಗಿ ಗಣೇಶನ ರೇಖಾಚಿತ್ರವನ್ನು ಕಾಗದದಲ್ಲಿ ಬಿಡಿಸಿ ಅದಕ್ಕೆ ಪೂಜೆಮಾಡಿದರು. ಅದೇ ಒಂದು ಸಂಪ್ರದಾಯವಾಗಿ ಬೆಳೆಯಿತು ಎಂದು ಮಧುಕರ್ ಹೇಳಿದರು.
ಸಾಮಾನ್ಯವಾಗಿ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ತಯಾರಿಸಿ, ಹೊಳೆಯುವ ಬಟ್ಟೆ, ಕೃತಕ ಆಭರಣ ಮತ್ತು ಹಾನಿಕರ ರಾಸಾಯನಿಕ ಬಣ್ಣ ಬಳಿದು ಸಿಂಗರಿಸಲಾಗುತ್ತದೆ. ಇವುಗಳನ್ನು ಸಮುದ್ರದಲ್ಲಿ ವಿಸರ್ಜಿಸುವುದರಿಂದ ಜಲಚರಗಳಾದ ಮೀನುಗಳ ಸಂತತಿಗೆ ಮಾರಕಪ್ರಾಯವಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮೂರ್ತಿಗಳನ್ನು ಮಣ್ಣಿನಲ್ಲಿ ತಯಾರಿಸಬೇಕೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ನೀರಿನಲ್ಲಿ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಇದು ನೀರಿನಲ್ಲಿರುವ ಆಮ್ಲಜನಕದ ಪ್ರಮಾಣವನ್ನು ತಗ್ಗಿಸಿ ಜಲಚರಗಳ ಸಾವಿಗೆ ಕಾರಣವಾಗುತ್ತದೆ.
ನೀರಿನಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜಿಸುವ ಮುಂಚೆ ವಿಗ್ರಹದ ಮೇಲಿರುವ ಎಲ್ಲ ಪ್ಲ್ಯಾಸ್ಟಿಕ್ ಮತ್ತು ಕರಗದ ಆಭರಣಗಳನ್ನು ತೆಗೆಯುವಂತೆ ಸಿಪಿಸಿಬಿ ಮೂರ್ತಿತಯಾರಕರಿಗೆ ಆದೇಶಿಸಿದೆ. ಗಣೇಶ ಚತುರ್ಥಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಜನಪ್ರಿಯವಾಗಿದ್ದು, ಹಬ್ಬದ ಸಂದರ್ಭದಲ್ಲಿ ಸಾವಿರಾರು ಮೂರ್ತಿಗಳನ್ನು ತಯಾರಿಸಲಾಗುತ್ತದೆ.
|