ಮುಖ್ಯ ಪುಟ  ವಿವಿಧ > ಸಾಹಿತ್ಯ > ಲೇಖನ
 
ಭಾರತದಲ್ಲೀಗ ಡಿಟಿಎಚ್ ಸೇವೆ ನೀಡಲು ಪೈಪೋಟಿ
ಮಂಜುನಾಥ ಬಂಡಿ

ಭಾರತದಲ್ಲೀಗ ಉದ್ಯಮಿಗಳಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನದ ತವರೂರಂತಿರುವ ಭಾರತದಲ್ಲಿ, ಮಾಹಿತಿ ತಂತ್ರಜ್ಞಾನ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದೆ. ಸಂವಹನ ಕ್ಷೇತ್ರ ವ್ಯಾಪಕವಾಗಿ ಮತ್ತು ವಿಸ್ತೃತವಾಗಿ ಬೆಳೆಯಲು ಕಾರಣಕರ್ತವಾಗಿದೆ ಎಂದು ಹೇಳಬಹುದು. ಕಳೆದ 20 ವರ್ಷಗಳಿಂದ ಭಾರತೀಯ ಸಂವಹನ ಮಾಧ್ಯಮದ ಭಾರಿ ಬದಲಾವಣೆಗಳನ್ನು ಕಂಡಿದ್ದು, ನೂತನ ತಂತ್ರಜ್ಞಾನವಾದ ಡಿಟಿಎಚ್ ಸೇವೆಯನ್ನು ಮುಕ್ತವಾಗಿ ನೀಡಲು ಭಾರತ ಸರಕಾರ ಕಂಪೆನಿಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭಾರತದಲ್ಲೀಗ, ಡಿಟಿಎಚ್ ಸೇವೆ ಒದಗಿಸಲು ಭಾರಿ ಪೈಪೋಟಿ ಕಂಡುಬರುತ್ತಿದೆ.

2004ರ ವೇಳೆಗೆ ಕೇವಲ ಸರಕಾರಿ ಸ್ವಾಮ್ಯದ ಪ್ರಸಾರ ಭಾರತಿ ಮಾತ್ರ ಈ ಡಿಟಿಎಚ್ (ಡೈರೆಕ್ಟ್ ಟು ಹೋಮ್) ಸೇವೆಯನ್ನು ಆರಂಭಿಸಿತ್ತು. ಈ ಯೋಜನೆಯಡಿಯಲ್ಲಿ ಟೆಲಿವಿಜನ್ ಇರುವವರು ಕೇಬಲ್ ಆಪರೇಟರ್ ಹತ್ತಿರ ಹೋಗದೆ, ಡಿಟಿಎಚ್‌ನ ಸೆಟ್ ಟಾಪ್ ಬಾಕ್ಸೊಂದನ್ನು ಖರೀದಿಸಿ ಮನೆಯಲ್ಲಿಯೆ ಕುಳಿತು ತಮಗಿಷ್ಟವಾದ ಸಮಯದಲ್ಲಿ, ಇಷ್ಟವಾದ ಚಾನೆಲ್ ನೋಡುವ ಅವಕಾಶವನ್ನು ನೀಡಿತು. ಇದು ಯಶಸ್ವಿಯಾಗುತ್ತಿದ್ದಂತೆ ದೇಶಾದ್ಯಂತ ಖಾಸಗಿ ಚಾನೆಲ್‌ಗಳು ತಮಗೂ ಡಿಟಿಎಚ್ ಸೇವೆ ನೀಡಲು ಅವಕಾಶ ನೀಡುವಂತೆ ಸರಕಾರವನ್ನು ಕೋರಿ ಅಂತಿಮವಾಗಿ ಯಶಸ್ವಿಯೂ ಆದವು.

ಮೊದಮೊದಲು ಕೇವಲ ಟಿವಿ ಚಾನೆಲ್ ಅನುಭವವಿರುವ ಝೀ, ಸೋನಿಯಂತಹ ಕಂಪೆನಿಗಳು ಮಾತ್ರ ಈ ಕ್ಷೇತ್ರವನ್ನು ಪ್ರವೇಶಿಸಿದವು. ಇದರಲ್ಲಿರುವ ಲಾಭವನ್ನು ಅರಿತ ತಕ್ಷಣ ಟಾಟಾಸ್ಕೈ, ಡಿಶ್ ಟಿವಿಯಂತಹ ಬೇರೆ ಕ್ಷೇತ್ರದ ಕಂಪೆನಿಗಳು ಸಹ ಈ ಕ್ಷೇತ್ರವನ್ನು ಆಕ್ರಮಿಸಿಕೊಂಡವು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ಕ್ಷೇತ್ರದಲ್ಲಿ ಭಾರಿ ಹೆಸರುವಾಸಿಯಾಗಿರುವ ಭಾರತಿ ಏರ್‌ಟೆಲ್ ಸಹ ರಾಷ್ಟ್ರದಲ್ಲಿ ಡಿಟಿಎಚ್ ಸೇವೆ ನೀಡಲು ಅನುಮತಿ ಗಳಿಸಿದ್ದು, ಮುಂಬರುವ ದಿನಗಳಲ್ಲಿ ಸೇವೆಗೆ ಅಣಿಗೊಳ್ಳಲಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ 150ಕೋಟಿ ರೂಪಾಯಿ ವಿನಿಯೋಗಿಸಲು ಕಂಪೆನಿ ಸನ್ನದ್ಧವಾಗಿದೆ ಎನ್ನುತ್ತಾರೆ ಕಂಪೆನಿಯ ಹಿರಿಯ ಅಧಿಕಾರಿಗಳು.

ಇದೇ ವೇಳೆ ತಮಿಳುನಾಡಿನಲ್ಲಿ ಸನ್ ನೆಟ್‌ವರ್ಕ್‌ನ ಸನ್ ಟಿವಿ ಮತ್ತು ರಿಲಯನ್ಸ್ ಸಹ ಡಿಟಿಎಚ್ ಸೇವೆ ನೀಡಲು ಸರಕಾರದಿಂದ ಅಧಿಕೃತ ಅನುಮತಿ ಪಡೆದುಕೊಂಡಿದ್ದು, ಸನ್ ಟಿವಿ ಈಗಾಗಲೇ ತನ್ನ ಗ್ರಾಹಕರಿಗೆ ಸೇವೆಯನ್ನು ಕಡಿಮೆ ಬೆಲೆಯಲ್ಲಿ ನೀಡಲು ಮುಂದಾಗಿದ್ದರಿಂದ ತಮಿಳ್ನಾಡಿನಾದ್ಯಂತ ಕೆಬಲ್ ಆಪರೇಟರ್‌ಗಳು ಭಾರಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರಿಲಯನ್ಸ್ 2008ರ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ತಮಗೆ ಬೇಕಾದಾಗ, ಇಷ್ಟವಾದ ಚಾನೆಲ್ ನೋಡುವ ಅವಕಾಶ ಲಭಿಸುವುದರಿಂದ ಹೆಚ್ಚಿನ ಜನ ಇತ್ತೀಚೆಗೆ ಡಿಟಿಎಚ್ ತಂತ್ರಜ್ಞಾನದತ್ತ ವಾಲುತ್ತಿದ್ದು, ದೇಶದಲ್ಲೀಗ ಸಮೂಹ ಸಂಹವನದಲ್ಲಿ ಭಾರಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಒಂದಂದಾಜಿನ ಪ್ರಕಾರ ದೇಶದಲ್ಲೀಗ ಒಟ್ಟಾರೆ 5 ದಶಲಕ್ಷ ಅಂದರೆ, ಐವತ್ತು ಲಕ್ಷ ಜನರು ಡಿಟಿಎಚ್ ಹುಚ್ಚಿಗೆ ಮಾರುಹೋಗಿದ್ದು, ಮುಂಬರುವ ಎರಡು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣ ಗೊಳ್ಳಲಿದೆ ಎನ್ನುತ್ತಾರೆ ಈ ಕ್ಷೇತ್ರದ ಪರಿಣಿತರು.

ಈ ಮಧ್ಯೆ ಭಾರತದಲ್ಲಿ ಈ ಕ್ಷೇತ್ರವನ್ನು ಪ್ರವೇಶಿಸಲು ವಿಡಿಯೋಕೊನ್ ಎಂಬ ದೈತ್ಯ ಟಿವಿ ತಯಾರಕ ಕಂಪೆನಿ ಸನ್ನದ್ಧವಾಗಿದ್ದು, ಇದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 800 ಕೋಟಿ ರೂಪಾಯಿ ಬಂಡವಾಳ ಹೂಡಲು ಸಿದ್ಧವಾಗಿದೆ. ಈಗಾಗಲೇ ಪರವಾನಗಿಗಾಗಿ ಭಾರತ ಸರಕಾರಕ್ಕೆ ಅಗತ್ಯ ಕಾಗದ ಪತ್ರಗಳನ್ನು ರವಾನಿಸಿದ್ದು, ಅನುಮತಿ ಸಿಕ್ಕ ತಕ್ಷಣವೇ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎನ್ನುತ್ತಾರೆ ಕಂಪೆನಿಯ ಉನ್ನತಾಧಿಕಾರಿಗಳು.

ಗಂಡ ಹೆಂಡಿರ ಮಧ್ಯೆ ಕೂಸು ಬಡವಾಯಿತು ಎನ್ನುವ ಗಾದೆ ಇಲ್ಲಿ ತಿರುವು ಮುರುವಾಗಿ, ಡಿಟಿಎಚ್ ಸೇವೆಯನ್ನು ನೀಡುವಲ್ಲಿ ಕಂಪೆನಿ-ಕಂಪೆನಿಗಳ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಈ ಕಂಪೆನಿಗಳ ಕಿತ್ತಾಟದಲ್ಲಿ ಗ್ರಾಹಕ ಮಾತ್ರ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ಪಡೆದುಕೊಳ್ಳುತ್ತಿದ್ದು, ನಮ್ಮನ್ನು ಮತ್ತಷ್ಟು ಮುರ್ಖರ ಪೆಟ್ಟಿಗೆ ಮುಂದೆ ಕೂರುವಂತೆ ಮಾಡುತ್ತಾರೆ ಎನ್ನುತ್ತಾರೆ ಟಿವಿ ವಿರೋಧಿಗಳು.
ಮತ್ತಷ್ಟು
ವೆಬ್‌ದುನಿಯಾ ವಾರದ ಬ್ಲಾಗ್: ಅವಧಿ
ಮೂರ ಮಂದಿ ಶಾಣ್ಯಾರ ಕೂಡಿ...
ಜಗ ವಿಖ್ಯಾತ ಬಸವಣ್ಣ
ಪರಿಸರ ಸ್ನೇಹಿ ಕಾಗದದ ಗಣೇಶ
ಬ್ಲಾಗ್ ಲೋಕದೊಳಗೆ ಇಣುಕಿ...